ಹೋಟೆಲ್‌, ಆನ್‌ಲೈನ್‌ ಡೆಲಿವರಿ ಊಟೋಪಹಾರಗಳ ಮೇಲಿನ ಅನಿಯಂತ್ರಿತ ದುಬಾರಿ ದರದಿಂದಾಗಿ ಮಧ್ಯಮ ವರ್ಗಕ್ಕೆ ಹೊರೆಯಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ಈ ಬೆಲೆಯೇರಿಕೆಗೆ ಕಡಿವಾಣ ಹಾಕಬೇಕೆಂಬ ಒತ್ತಾಯ ಹೆಚ್ಚಾಗಿದೆ.

ಬೆಂಗಳೂರು : ಹೋಟೆಲ್‌, ಆನ್‌ಲೈನ್‌ ಡೆಲಿವರಿ ಊಟೋಪಹಾರಗಳ ಮೇಲಿನ ಅನಿಯಂತ್ರಿತ ದುಬಾರಿ ದರದಿಂದಾಗಿ ಮಧ್ಯಮ ವರ್ಗಕ್ಕೆ ಹೊರೆಯಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ಈ ಬೆಲೆಯೇರಿಕೆಗೆ ಕಡಿವಾಣ ಹಾಕಬೇಕೆಂಬ ಒತ್ತಾಯ ಹೆಚ್ಚಾಗಿದೆ.

ನಗರದ ಹೋಟೆಲ್‌ಗಳಲ್ಲಿ ತಿಂಡಿ ಮತ್ತು ಕಾಫಿ ಹಾಗೂ ಊಟದ ದರ ದುಬಾರಿಯಾಗಿದೆ. ಅಡುಗೆ ಅನಿಲ್‌ ಸಿಲಿಂಡರ್‌, ವಿದ್ಯುತ್‌, ಹಾಲು ಹಾಗೂ ಅಡುಗೆ ಪದಾರ್ಥ ಅಕ್ಕಿ, ಬೇಳೆ, ತರಕಾರಿ, ಎಣ್ಣೆ, ಹಾಲು, ಮೊಸರು, ತುಪ್ಪದ ಬೆಲೆ ಏರಿಕೆಯಾದಾಗ ತಿನಿಸುಗಳ ದರವನ್ನು ಏರಿಸುವುದು ಸಹಜ. ಆದರೆ, ಇವುಗಳ ಬೆಲೆ ಇಳಿಕೆಯಾದಾಗ ಹೋಟೆಲ್‌ಗಳು ಹೆಚ್ಚಿನ ದರವನ್ನೇ ಮುಂದುವರಿಸಿಕೊಂಡು ಹೋಗುತ್ತಿವೆ ಎಂಬುದು ಗ್ರಾಹಕರ ದೂರು.

ಇದರ ಜತೆಗೆ ಗಿಗ್‌ ಕಾರ್ಮಿಕರ ನೆರವಲ್ಲಿ ಆನ್‌ಲೈನ್‌ ಫುಡ್‌ ಪೂರೈಸುವ ಪ್ಲಾಟ್‌ಫಾರ್ಮ್‌ಗಳು ವಿಧಿಸುವ ಶುಲ್ಕವು ವಿಪರೀತವಾಗಿದೆ. ಹಲವು ಬಾರಿ ಆರ್ಡರ್‌ ಮಾಡುವ ಆಹಾರದ ಮೂಲಬೆಲೆಗಿಂತ ಪೂರೈಕೆ ಬೆಲೆಯೇ ಶೇ. 30 ಮೀರಿರುತ್ತಿದೆ. ಅದರಲ್ಲೂ ರಿಯಾಯಿತಿ ಘೋಷಣೆಯಡಿ ಗ್ರಾಹಕರನ್ನು ಸೆಳೆದು ಹಣ ಪೀಕುವುದಕ್ಕು ನಿಯಂತ್ರಣ ಹೇರಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

ಜಿಎಸ್‌ಟಿ ದರಗಳು ಹಲವಾರು ಪದಾರ್ಥಗಳ ಮೇಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಯಾವ ಹೋಟೆಲ್ ನವರು ಯಾವುದೇ ಪದಾರ್ಥದ ಮೇಲೆ ದರಗಳನ್ನು ಕಡಿಮೆ ಮಾಡಿಲ್ಲ. ಆದರೆ ಹಾಲು, ಕಾಫಿ, ಸಕ್ಕರೆ ದರ ಏರಿಕೆಯಾದರೆ ಕೂಡಲೇ ಪ್ರತಿಯೊಂದು ಲೋಟ ಕಾಫಿಗೆ ಎರಡರಿಂದ ಮೂರು ರುಪಾಯಿ, ತಿಂಡಿಗಳ ಮೇಲೆ ₹ 5- ₹ 10, ಊಟದ ಮೇಲೆ ₹ 10 - ₹ 20 ದರ ಹೆಚ್ಚಿಸುತ್ತಾರೆ.

ಅರಸು ಕ್ರಮ ಜಾರಿಯಾಗಲಿ:

ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಂದಿನ ಆಹಾರ ಸಚಿವರು ಹೋಟೆಲ್‌ಗಳಲ್ಲಿನ ಅನಿಯಮಿತ ದರಕ್ಕೆ ಕಡಿವಾಣ ಹಾಕಿದ್ದರು. ಇಂತಿಷ್ಟೇ ದರ ನಿಗದಿ ಮಾಡಬೇಕು ಮತ್ತು ಅದರ ಗಾತ್ರವು ಮತ್ತು ತೂಕವು ಇಷ್ಟೇ ಪ್ರಮಾಣದಲ್ಲಿ ಇರಬೇಕೆಂಬ ಕಾನೂನನ್ನು ಮಾಡಿದ್ದರು.

ಸರ್ಕಾರ ಮಧ್ಯಪ್ರವೇಶಿಸಿ ದರ ನಿಗದಿಸಬೇಕು ಎಂಬ ಒತ್ತಾಯ

ಆಗ ಗಾಂಧಿನಗರ ಶಾಸಕರಾಗಿದ್ದ ಶ್ರೀರಾಮುಲು ಕಾರ್ಮಿಕ ಇಲಾಖೆ ಸಚಿವರಾಗಿದ್ದರು. ಆಗ ಹೋಟೆಲುಗಳಲ್ಲಿನ ತಿಂಡಿ ದರಗಳನ್ನು ಕಡಿಮೆ ಮಾಡಿಸಿದ್ದರು. ಅವರು ಮಂತ್ರಿಗಳು ತಮ್ಮ ಮನೆಯಲ್ಲೇ ಆಹಾರಗಳನ್ನು ತಯಾರಿಸಿ ಎಷ್ಟು ಹಣ ಖರ್ಚಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ ತಿಂಡಿ ಬೆಲೆಗಳನ್ನು ನಿಗದಿ ಪಡಿಸಿದ್ದರು. ಬಳಿಕ ಆರ್. ಗುಂಡೂರಾವ್ ಹೋಟೆಲುಗಳನ್ನು ಎ,ಬಿ,ಸಿ,ಡಿ ಎಂದು ವರ್ಗೀಕರಿಸಿ ಎ ದರ್ಜೆ ಹೋಟೆಲುಗಳವರು ಹಿಂದಿನಂತೆಯೇ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟರು. ಅದರಂತೆ ಈಗಲೂ ಸರ್ಕಾರ ಮಧ್ಯಪ್ರವೇಶಿಸಿ ದರ ನಿಗದಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಅದರಂತೆ ಆಗ ₹1 ಗೆ ಸಿಗುತ್ತಿದ್ದ ಊಟದಂತೆ ಈಗ ಸರ್ಕಾರ ಇಂದಿರಾ ಕ್ಯಾಂಟೀನ್‌ ಮೂಲಕ ಕಡಿಮೆ ಬೆಲೆಗೆ ಚಹಾ ಕಾಫಿ ನೀಡುವ ಮೂಲಕ ಹೋಟೆಲ್‌ಗಳಲ್ಲಿನ ಬೆಲೆಯೇರಿಕೆ ನಿಯಂತ್ರಿಸುವ ಕೆಲಸ ಮಾಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.