Asianet Suvarna News Asianet Suvarna News

ಸಂವಿಧಾನವೇ ನಮಗೆ ಮೂಲ ಧರ್ಮಗ್ರಂಥ : ಸಿದ್ದರಾಮಯ್ಯ

  ಸಂವಿಧಾನ ನಮಗೆ ಧರ್ಮ ಗ್ರಂಥ ಇದ್ದ ಹಾಗೆ. ಈ ಧರ್ಮ ಗ್ರಂಥದ ಮೂಲಕ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನವನ್ನು ಸರ್ಕಾರಗಳು ಮಾಡಬೇಕು. ಇದೇ ಸರ್ಕಾರದ ಆಶಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Constitution is our basic scripture: Siddaramaiah snr
Author
First Published Jan 22, 2024, 11:50 AM IST

 ತುಮಕೂರು :  ಸಂವಿಧಾನ ನಮಗೆ ಧರ್ಮ ಗ್ರಂಥ ಇದ್ದ ಹಾಗೆ. ಈ ಧರ್ಮ ಗ್ರಂಥದ ಮೂಲಕ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನವನ್ನು ಸರ್ಕಾರಗಳು ಮಾಡಬೇಕು. ಇದೇ ಸರ್ಕಾರದ ಆಶಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸಿದ್ಧಗಂಗಾ ಕ್ಷೇತ್ರದಲ್ಲಿ ಭಾನುವಾರ ನಡೆದ ಡಾ. ಶಿವಕುಮಾರ ಮಹಾಶಿವಯೋಗಿಗಳ 5 ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, 12 ನೇ ಶತಮಾನದಲ್ಲಿ ಬಸವಾದಿ ಶರಣರು ಜಾತಿ, ವರ್ಗ ರಹಿತ ವೈಚಾರಿಕತೆಯಿಂದ ಕೂಡಿದ ಸಮಾಜ ನಿರ್ಮಿಸಲು ಈ ನಾಡಿನಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ ಎಂದು ತಿಳಿಸಿದರು.

ಬಸವಣ್ಣನವರ ಅನೇಕ ಆದರ್ಶ ತತ್ವಗಳು ಎಂದೆಂದಿಗೂ ಪ್ರಸ್ತುತ. ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯ ಮೂಲಕ ಸಾಮಾಜಿಕ ಬದಲಾವಣೆಯನ್ನು ತಂದಿದ್ದು, ಇವರ ಹೋರಾಟದ ಅಂಶವನ್ನು ನಮ್ಮ ಸಂವಿಧಾನದಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಸಾಮಾಜಿಕ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಬದಲಾವಣೆ ತರಬೇಕು ಎಂಬುದೇ ಶ್ರೀಗಳ ಆಶಯವಾಗಿತ್ತು ಎಂದು ತಿಳಿಸಿದ ಮುಖ್ಯಮಂತ್ರಿಗಳು, ಅಕ್ಷರ ಸಂಸ್ಕೃತಿಯಿಂದ ದೂರವಾದ ಜನರು ಸಮಾಜದಲ್ಲಿ ಶೋಷಣೆ, ದೌರ್ಜನಕ್ಕೆ ಒಳಗಾಗಿದ್ದಾರೆ. ಅಕ್ಷರ ಸಂಸ್ಕಾರ ಪಡೆದವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಸೇರಿದ್ದಾರೆ. ಈ ರೀತಿ ಅಕ್ಷರ ಜ್ಞಾನದ ಅಸಮಾನತೆಯಿಂದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಉಂಟಾಗಿರುವುದನ್ನು ಇಂದಿಗೂ ನಾವು ಕಾಣಬಹುದಾಗಿದೆ ಎಂದರು.

ಮನುಷ್ಯ ಮನುಷ್ಯನನ್ನು ಗೌರವಿಸಬೇಕು, ಪ್ರೀತಿಸಬೇಕು. ದ್ವೇಷಿಸುವ ವಾತಾವರಣವಿರಬಾರದು. ಕಾಯಕ ಮತ್ತು ದಾಸೋಹ ಎರಡೂ ಸಹ ಜೀವನದ ಮೌಲ್ಯಗಳು .ಇವುಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಸಿದ್ಧಗಂಗಾ ಮಠದ ಮಠಾಧಿಪತಿಯಾಗಿ ಶಿವಕುಮಾರ ಸ್ವಾಮೀಜಿ ಇವುಗಳನ್ನು ಅನುಸರಿಸುತ್ತಿದ್ದರು. 9 ರಿಂದ 10 ಸಾವಿರ ಮಕ್ಕಳಿಗೆ ಇಂದಿಗೂ ಸಹ ವಿದ್ಯೆ,ವಸತಿ, ಅಕ್ಷರ ಸೇವೆ ಸಿದ್ಧಗಂಗಾ ಮಠದಲ್ಲಿ ದೊರಕುತ್ತಿದೆ. ಇದು ಸಾಮಾನ್ಯ ಸಂಗತಿಯೇನಲ್ಲ. ಜ್ಞಾನ ವಿಕಾಸದಿಂದ ಮಾತ್ರ ನಾವು ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯ ಎಂಬುದು ಶ್ರೀಗಳ ಅಭಿಮತವಾಗಿತ್ತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ತಾವು ಸಹ ಬಸವಾದಿ ಶರಣರ ಆದರ್ಶದ ಮೇಲೆ ನಂಬಿಕೆ ಇಟ್ಟವರು. ಆದುದರಿಂದಲೇ ಸಮಾಜದಲ್ಲಿನ ಜನರಿಗಾಗಿ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬಲಾಗುತ್ತಿದೆ. ಪ್ರಸ್ತುತ 38, 000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಾಗಿ ಖರ್ಚು ಮಾಡಲಾಗುತ್ತಿದೆ ಮತ್ತು ಮುಂದಿನ ವರ್ಷ 68,000 ಕೋಟಿ ರು. ಗಳನ್ನು ಖರ್ಚು ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಬಸವ ತತ್ವವನ್ನು ಚಾಚು ತಪ್ಪದೇ ಪಾಲಿಸಿ, ಲಕ್ಷಾಂತರ ಮಕ್ಕಳಿಗೆ ಅನ್ನ,ಆಶ್ರಯ ನೀಡಿ ಮಹಾನ್ ಕಾರ್ಯ ಮಾಡಿದ ಮಹಾನ್ ಯೋಗಿ ಶಿವಕುಮಾರ ಸ್ವಾಮೀಜಿಯವರಾಗಿದ್ದಾರೆ. ತ್ರಿವಿಧ ದಾಸೋಹವನ್ನು ದಶಕಗಳ ಕಾಲ ಮಾಡಿದ್ದಾರೆ. ಮಕ್ಕಳು ಇಂದಿಗೂ ಸಹ ಶಿಕ್ಷಣವನ್ನು ಮಠದಲ್ಲಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, 12 ನೇ ಶತಮಾನದಲ್ಲಿ ಸಮಾಜವನ್ನು ತಿದ್ದಲು ಸಾಮಾಜಿಕ ಹರಿಕಾರರಾಗಿ ಬಸವಾದಿ ಶರಣರು ಹೋರಾಡಿದ್ದಾರೆ, ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡಲು ಶ್ರಮಿಸಿದ್ದಾರೆ ಎಂದು ತಿಳಿಸಿದರು . ಬಸವಾದಿ ಶರಣರ ತತ್ವ, ಆದರ್ಶಗಳಲ್ಲಿ ಇಂದಿಗೂ ಸಹ ನಂಬಿಕೆಯನ್ನು ಇಟ್ಟುಕೊಂಡಿರುವ ನಮ್ಮ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಸರ್ಕಾರದ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರಗಳನ್ನಿಟ್ಟು ಆದರ್ಶ ಮೆರೆದಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್ ಬಸವರಾಜು, ಶಾಸಕರಾದ ಸುರೇಶ್ ಗೌಡ ,ಜ್ಯೋತಿ ಗಣೇಶ್ ,ರಾಜೇಂದ್ರ ರಾಜಣ್ಣ, ಗುಬ್ಬಿ ಶಾಸಕ ಶ್ರೀನಿವಾಸ್, ನೆಲಮಂಗಲ ಶಾಸಕ ಶ್ರೀನಿವಾಸ್, ಪಾವಗಡ ಶಾಸಕ ವೆಂಕಟೇಶ್, ಮೇಯರ್ ಪ್ರಭಾವತಿ, ನವದೆಹಲಿಯ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ, ಜಿಲ್ಲಾಧಿಕಾರಿ ಶುಭಕಲ್ಯಾಣ, ಜಿಲ್ಲಾ ಪಂಚಾಯತ್ ಸಿಇಜಿ ಪ್ರಭು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಮನ ಪ್ರತಿಷ್ಠಾಪನೆ ವೇಳೆ ಶ್ರೀಗಳ ಅನುಪಸ್ಥಿತಿ ಕಾಡುತ್ತಿದೆ

ಸಿದ್ಧಗಂಗಾ ಶ್ರೀಗಳ 5ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾತನಾಡಿ , ದಾಸೋಹ, ತತ್ವವನ್ನು ಇಡೀ ಪ್ರಪಂಚಕ್ಕೆ ಸಾರಿ ಅನ್ನ, ಆಶ್ರಯ, ಅಕ್ಷರದ ಮೂಲಕ ಮಕ್ಕಳ ಬಾಳಿಗೆ ಬೆಳಕು ನೀಡಿದವರು ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರು. ಅನ್ನದ ಮಹತ್ವ ಶ್ರೀಗಳಿಗೆ ಬಹಳ ಚೆನ್ನಾಗಿ ಗೊತ್ತಿತ್ತು, ಆದ್ದರಿಂದಲೇ ತಮ್ಮನ್ನು ಕಾಣಲು ಬಂದವರಿಗೆ ಮೊದಲು ಅವರು ಪ್ರಸಾದವಾಯಿತೇ? ಎಂದು ಕೇಳುತ್ತಿದ್ದರು ಎಂದು ಸ್ಮರಿಸಿದರು. ಅಯೋಧ್ಯೆಯಲ್ಲಿ ನಾಳೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು, ಈ ಶುಭ ಸಂದರ್ಭವನ್ನು ಎಲ್ಲರೂ ಕಣ್ಣು ತುಂಬಿಕೊಳ್ಳೋಣ. ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿ ಶ್ರೀಗಳ ಅನುಪಸ್ಥಿತಿ ಕಾಡುತ್ತಿದೆ ಎಂದು ಹೇಳಿದರು.

ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿ ಬಸವಣ್ಣ

ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, 12 ನೇ ಶತಮಾನದಲ್ಲಿ ಬಸವಣ್ಣ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಅನೇಕ ಆದರ್ಶಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಆ ಆದರ್ಶಗಳನ್ನು ಯಾರಾದರೂ ತಪ್ಪದೇ ಪಾಲಿಸಿದ್ದಾರೆಂದರೆ ಅದು ಶಿವಕುಮಾರ ಸ್ವಾಮೀಜಿ ಮಾತ್ರ. ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ವಸತಿ ನೀಡಿ ಅವರ ಬಾಳಿಗೆ ಬೆಳಕು ನೀಡಿದ್ದಾರೆ ಎಂದು ತಿಳಿಸಿದರು.

ಇತ್ತೀಚಿನ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ದೇಶದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಸ್ವಾಮಿ ವಿವೇಕಾನಂದರನ್ನು ಮಾಡಲಾಗಿದೆ. ಅದರಂತೆ ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಬಸವಣ್ಣನವರನ್ನು ಘೋಷಿಸಿ ಮುಖ್ಯಮಂತ್ರಿಗಳು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಬಸವಣ್ಣನವರ ಅನುಯಾಯಿ ಅಲ್ಲಮ ಪ್ರಭು ಅವರ ಹೆಸರನ್ನು ಉದ್ಯಾನವನಕ್ಕೆ ನಾಮಕರಣ ಮಾಡಲು ತೀರ್ಮಾನಿಸಿದ್ದು, ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅನ್ನಭಾಗ್ಯ ಯೋಜನೆ ಮೂಲಕ ಅನ್ನ, ಅಕ್ಷರ ಸೇವೆಯನ್ನು ರಾಜ್ಯಾದ್ಯಂತ ಬಡಮಕ್ಕಳಿಗೆ ನೀಡುತ್ತಿದ್ದು, ಈ ಮೂಲಕ ಬಸವಣ್ಣನವರ ಆದರ್ಶ ಪಾಲಿಸುತ್ತಿದ್ದಾರೆ ತಿಳಿಸಿದರು.

ಇಂದಿಗೂ ಸಹ ಜಾತಿ ವ್ಯವಸ್ಥೆಯಲ್ಲಿ ಜೀವನ ಮಾಡುತಿದ್ದೇವೆ. ಸಮಾಜದಲ್ಲಿನ ಜಾತಿ, ಮೇಲು ಕೀಳು, ನಿರ್ಮೂಲನೆ ಮಾಡಬೇಕು ಎಂದು ತನ್ನನ್ನೇ ತಾನು ಅರ್ಪಿಸಿಕೊಂಡಂತಹವರು ಬಸವಣ್ಣನವರು. ಇಂದಿಗೂ ಅವರ ಆದರ್ಶಗಳು ಪ್ರಸ್ತುತ. ಲಕ್ಷಾಂತರ ವಿದ್ಯಾರ್ಥಿಗಳು ಈ ಮಠದಲ್ಲಿ ಓದಿದ್ದಾರೆ. ಅನೇಕರು ಅಧಿಕಾರಿಗಳಾಗಿ, ವಿಜ್ಞಾನಿಗಳಾಗಿ, ವೈದ್ಯಾಧಿಕಾರಿಗಳಾಗಿ, ಸಾಮಾಜಿಕ ಹೊಣೆಗಾರಿಕೆ ಹೊತ್ತಿದ್ದು, ಇವರನ್ನು ನಾವು ಇಡೀ ವಿಶ್ವದಾದ್ಯಂತ ಕಾಣಬಹುದಾಗಿದೆ ಎಂದರು.

ಪ್ರಕೃತಿಯ ಬಗ್ಗೆ ಶ್ರೀಗಳಿಗೆ ಅಪಾರ ಪ್ರೀತಿ

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ತಮ್ಮ ಕೆಲಸ ಕಾರ್ಯ ,ಸಾಧನೆಗಳ ಮೂಲಕ ಇಂದಿಗೂ ಅಜರಾಮರಾಗಿದ್ದಾರೆ. ಮಠದಿಂದ ಸ್ವಾಮೀಜಿ ಅಲ್ಲ ಸ್ವಾಮೀಜಿಯಿಂದ ಮಠ ಎಂಬುದನ್ನು ತೋರಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಮಠದ ಆವರಣದಲ್ಲಿ ಎರಡು ಕೋಟಿ ರು. ವೆಚ್ಚದಲ್ಲಿ ಸ್ಮೃತಿ ಉದ್ಯಾನವನವನ್ನು ಇಂದು ಸನ್ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿರುವುದು ನಮ್ಮೆಲ್ಲರ ಸೌಭಾಗ್ಯ. ಪರಮಪೂಜ್ಯ ಶಿವಕುಮಾರ ಸ್ವಾಮೀಜಿ ಪ್ರಕೃತಿ ಮತ್ತು ಅರಣ್ಯದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು ಎಂದು ಸ್ಮರಿಸಿದರು.

ಅರಣ್ಯ ಇಲಾಖೆ ವತಿಯಿಂದ ೫ ಕೋಟಿ ಸಸಿಗಳನ್ನು ರಾಜ್ಯಾದ್ಯಂತ ನೆಡಲಾಗಿದೆ . ಇರುವುದೊಂದೇ ಭೂಮಿ ಅದನ್ನು ಉಳಿಸಿ ನಾಡನ್ನು ಕಟ್ಟೋಣ ಎಂದು ಕರೆ ನೀಡಿದರು.

Follow Us:
Download App:
  • android
  • ios