ಅಕ್ರಮಕ್ಕೆ ಸಪೋರ್ಟ್ ಮಾಡಿದ ಕಾನ್‌ಸ್ಟೇಬಲ್ ಅಮಾನತು
ಅಕ್ರಮ ಚಟುವಟಿಕೆಗೆ ಸಪೋರ್ಟ್ ಮಾಡಿದ್ದ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಘಟನೆ ನಡೆದಿದೆ.
ಮಧುಗಿರಿ(ಮಾ.16): ಅಕ್ರಮ ಮಧ್ಯ ಸಾಗಾಟಕ್ಕೆ ನೆರವು ನೀಡಿದ ಆರೋಪದ ಮೇರೆಗೆ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಸ್ಟೇಷನ್‌ನ ಕಾನ್‌ಸ್ಟೇಬಲ್‌ಗಳಾದ ಎಚ್. ಜಯಪ್ರಕಾಶ್ ಮತ್ತು ಎಸ್.ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ.
ಮಾ.9 ರಂದು ಮಧ್ಯರಾತ್ರಿ 12 ಗಂಟೆ ವೇಳೆ ಕೊಡಿಗೇನಹಳ್ಳಿ ವೈನ್ ಸ್ಟೋರ್ ಸಿಬ್ಬಂದಿ ಜಯಂತ್ ಮತ್ತು ಶಶಿಕುಮಾರ್ ಅವರು ಆಂಧ್ರಪ್ರದೇಶದ ಹಿಂದುಪುರಕ್ಕೆ ಅಕ್ರಮ ಮದ್ಯ ಸಾಗಿಸುತ್ತಿದ್ದಾಗ, ಜಯಪ್ರಕಾಶ್ ಮತ್ತು ಶ್ರೀನಿವಾಸ್ ಬೆಂಗಾವಲಾಗಿ ನಿಂತು ಮದ್ಯ ಸಾಗಿಸಲು ಸಹಕಾರ ನೀಡಿದ್ದರು. ಆದರೆ, ಆಂಧ್ರಗಡಿಯ ತಿರುಮಲ ದೇವರಹಳ್ಳಿ ಸಮೀಪ ಹಿಂದೂಪುರದ ಅಬಕಾರಿ ಅಧಿಕಾರಿಗಳು ಇದನ್ನು ತಡೆದು ಪ್ರಶ್ನಿಸಿದಾಗ, ಶ್ರೀನಿವಾಸ್ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.
ಅಂಬಾನಿ ಮನೆ ಸನಿಹದ ಬಾಂಬ್ ಪ್ರಕರಣ: ಅರೆಸ್ಟ್ ಆಗಿದ್ದ ಪೊಲೀಸ್ ಸಚಿನ್ ವಾಜೆ ಅಮಾನತು! ..
ಎಚ್.ಜಯಪ್ರಕಾಶ್ ಮಹಿಳಾ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ವೈನ್ ಸ್ಟೋರ್ ಸಿಬ್ಬಂದಿ ಜಯಂತ್ ಮತ್ತು ಶಶಿಕುಮಾರ್ ಹಾಗೂ ಪೋಲಿಸ್ ಕಾನ್‌ಸ್ಟೇಬಲ್ ಜಯಪ್ರಕಾಶ್ ಮೇಲೆ ಹಿಂದುಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಎಸ್.ಶ್ರೀನಿವಾಸ್ ಸಹ ಈ ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಕಾರಣ ಮತ್ತು ಮಾ.9 ರಂದು 12ಗಂಟೆ ವೇಳೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ಮತ್ತು ಅನುಮತಿ ಪಡೆಯದೆ ಅಧಿಕಾರಿಗಳ ವ್ಯಾಪ್ತಿ ಮೀರಿ ಆಂಧ್ರಪ್ರದೇಶದ ಗಡಿ ಭಾಗಕ್ಕೆ ತೆರಳಿ ಅಲ್ಲಿನ ಅಬಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದರಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿ ಮೂಲಗಳು ತಿಳಿಸಿವೆ.