ಪಿತೂರಿ ನಡೆಸುವವರೇ ಇಂದಿನ ಹೀರೋಗಳು: ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ
ಸಮಾಜದ ಸದ್ಯದ ಪರಿಸ್ಥಿತಿಯಲ್ಲಿ ಇತಿಹಾಸ ನಿರ್ಮಾಣ ಮಾಡುವವರು ಹೀರೋಗಳಲ್ಲ, ಪಿತೂರಿ ನಡೆಸುವವರೇ ಹೀರೋಗಳೆಂದು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ತುಮಕೂರು : ಸಮಾಜದ ಸದ್ಯದ ಪರಿಸ್ಥಿತಿಯಲ್ಲಿ ಇತಿಹಾಸ ನಿರ್ಮಾಣ ಮಾಡುವವರು ಹೀರೋಗಳಲ್ಲ, ಪಿತೂರಿ ನಡೆಸುವವರೇ ಹೀರೋಗಳೆಂದು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಯಾಕೆ ಹೋಗಬೇಕು, ಕೆಲಸ ಮಾಡಬೇಕು ಅಂತ ಅನ್ನಿಸುತ್ತದೆ. ಸದಾ ರಾಜಕಾರಣ ಮಾಡುವ ನನ್ನಂತಹವರಿಗೆ ಬೇಸರವಾಗುತ್ತಿದೆ ಎಂದರು.
ಜನರ ಮನಸಿಗೆ ಹೋಗಿರುವುದನ್ನು ಬದಲಾವಣೆ ಮಾಡುವುದು ಕಷ್ಟ. ದೇವೇಗೌಡರು ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಜಿಲ್ಲೆಯಲ್ಲಿ ಅತಿ ಹೆಚ್ಚು ಜೆಡಿಎಸ್ ಮತಗಳಿದ್ದವು. ಸ್ಥಳೀಯವಾಗಿ ಅಭ್ಯರ್ಥಿ ಗೆಲ್ಲಿಸಬೇಕು ಅಂತ ತೀರ್ಮಾನ ಮಾಡಿದಾಗ ಜನರು ಜಾತಿ, ಪಕ್ಷ ಬಿಟ್ಟು ಮತ ಹಾಕಿರುವವರು ಎಂದರು.
ಈಗ ಜಿಲ್ಲೆಯಲ್ಲಿ ಬಿಜೆಪಿ ಸ್ಥಾನ ಕಳೆದುಕೊಂಡಿದೆ. ನಾವು ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ, ಉತ್ಸಾಹ ಬಂದಿದೆ. ವಾಸ್ತವಾಂಶಗಳು ಅರ್ಥವಾಗುತ್ತಿಲ್ಲ, ಮುಂದೆ ಒಳ್ಳೆಯದಾಗಬಹುದು, ಆಗದೇ ಇರಬಹುದು. ನಮ್ಮ ಸ್ವಂತ ಶಕ್ತಿಯ ಮೇಲೆ ಚುನಾವಣೆ ಎದುರಿಸಬೇಕು ಎಂದರು.
ಮಾಜಿ ಸಚಿವ ಬಿ.ಸಿ. ನಾಗೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷವೇ ರಾಮಮಂದಿರ ಉದ್ಘಾಟನಾ ಮಾಡುತ್ತಾರೆ ಎಂದು ನಮಗ್ಯಾರಿಗೂ ತಿಳಿದಿರಲಿಲ್ಲ. 370ನೇ ವಿಧಿಯನ್ನು ತೆಗೆಯುತ್ತಾರೆಂದು ನಾವ್ಯಾರೂ ಅಂದುಕೊಂಡಿರಲಿಲ್ಲ. ಬಿಜೆಪಿ ಯೋಜನೆಗಳನ್ನು ನೋಡಿ ವಿರೋಧ ಪಕ್ಷಗಳ ಸ್ಥಿತಿ ಯಾವ ಮಟ್ಟಕ್ಕೆ ಬಂದಿದೆ ಎಂಬುದು ಈಗಾಗಲೇ ಗೊತ್ತಾಗುತ್ತಿದೆ. ಸಂಸತ್ ನೊಳಗೇ ನಿಂತುಕೊಂಡು ಬಿಜೆಪಿ 400 ಸೀಟು ಗೆಲ್ಲುತ್ತದೆ ಎಂದು ಹೇಳುವ ಪರಿಸ್ಥಿತಿ ಕಾಂಗ್ರೆಸ್ ನಾಯಕರಿಗೆ ಬಂದಿದೆ. ಆದ್ದರಿಂದ ಜನಪರ ಕಾರ್ಯಕ್ರಮಗಳಿಂದಲೇ ಬಿಜೆಪಿಗೆ ಶಕ್ತಿ ಬಂದಿದೆ. ಬಿಜೆಪಿ ಕಾರ್ಯಕ್ರಮಗಳನ್ನು ಮನೆ ಮನೆಗೆ ಮುಟ್ಟಿಸುತ್ತೇವೆ. ಹೋರಾಟಗಳ ಮೂಲಕ ಬಿಜೆಪಿಯನ್ನು ಗೆಲ್ಲಿಸಬೇಕು. ಬಿಜೆಪಿ ಪ್ರತಿ ಬೂತ್‌ನಲ್ಲೂ ಗೆಲ್ಲಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದರು.
ಮಾಜಿ ಸಚಿವ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಗೋಪಾಲಯ್ಯಮಾತನಾಡಿ, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸೋಣ ಎಂದರು.
ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಪ್ರತಿ ಮನೆ ಮನೆಗೂ ಹೋಗಿ ಪ್ರಚಾರ ಮಾಡೋಣ. ಮೋದಿ ಅವರ ಯೋಜನೆಗಳನ್ನು ಜನರಿಗೆ ತಿಳಿಸೋಣ. ಮತ್ತೊಮ್ಮೆ ಮೋದಿ ಅವರಿಗೆ ಅಧಿಕಾರ ನೀಡೋಣ ಎಂದು ಅವರು ಹೇಳಿದರು.
ರಾಜ್ಯ ಬರಗಾಲದಿಂದ ತತ್ತರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಕೇಂದ್ರ ಹಣ ಕೊಟ್ಟಿಲ್ಲ ಎಂದು ಹೇಳತ್ತಾ ರಾಜ್ಯ ಸರ್ಕಾರ ಕಾಲ ಹರಣ ಮಾಡುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವ ಮೂಲಕ ರಾಜ್ಯದ ಜನತೆ ಬುದ್ದಿ ಕಲಿಸಲಿದ್ದಾರೆ ಎಂದರು.
ಇಡೀ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಕಾರ್ಯಕಾರಣಿ ಸಭೆ ನಡೆಸಲಾಗುತ್ತಿದೆ. ಆ ಹಿನ್ನೆಲೆ ತುಮಕೂರಿನಲ್ಲಿಯೂ ಸಹ ಕಾರ್ಯಕಾರಣಿ ಸಭೆ ನಡೆಸಲಾಗುತ್ತಿದೆ ಎಂದರು.
ಮಾಧುಸ್ವಾಮಿ ನನ್ನ ಸಾಮರಸ್ಯದಿಂದಾಗಿ ಜಿಲ್ಲೆಗೆ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಹೇಮಾವತಿ ನೀರನ್ನು ಕೊಟ್ಟಿದ್ದೇವೆ ಎಂದರು.
ರೈತರ ಅಭ್ಯುದಯಕ್ಕೆ ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನೀರು ತಲುಪಿಸುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆಯ ಕಾಮಗಾರಿ ಚಾಲ್ತಿಯಲ್ಲಿದೆ ಎಂದರು.
ಹತ್ತು ಕೆಜಿ ಅಕ್ಕಿ ಕೊಡುವ ಯೋಜನೆ ಪ್ರಾರಂಭವಾಗಿದ್ದು ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರಿಂದಲೇ, ಈ ಯೋಜನೆಯಿಂದ ಬಡವರ ಹಸಿವು ನೀಗಿಸಲಾಗಿದೆ ಎಂದು ಅವರು ತಿಳಿಸಿದರು.
ಇಡೀ ದೇಶದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಎಲ್.ಕೆ. ಅಡ್ವಾಣಿಯವರಿಗೆ ಭಾರತ ರತ್ನ ಕೊಟ್ಟಿರುವುದು ಖುಷಿಯ ವಿಚಾರವಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾಜಿ ಶಾಸಕಿ ರೂಪಾಲಿ ನಾಯಕ್, ಶಾಸಕ ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್, ಎಂ.ಬಿ. ನಂದೀಶ್, ಎಂ.ಡಿ. ಲಕ್ಷ್ಮೀನಾರಾಯಣ್, ಡಿ. ಕೃಷ್ಣಕುಮಾರ್, ದಿಲೀಪ್‌ಕುಮಾರ್, ವೈ.ಎಚ್. ಹುಚ್ಚಯ್ಯ ಮತ್ತಿತರರು ಭಾಗವಹಿಸಿದ್ದರು.