ಹಿಂದೂ ಧರ್ಮದಿಂದ ಬೇರ್ಪಡಿಸುವ ಸಂಚು: ಕರಾವಳಿಯ ದೈವಾರಧಕರು ಗರಂ
- ಹಿಂದೂ ಧರ್ಮದಿಂದ ಬೇರ್ಪಡಿಸುವ ಸಂಚು: ಕರಾವಳಿಯ ದೈವಾರಧಕರು ಗರಂ
- ನಟ ಚೇತನ್ ಕ್ಷಮೆಗೆ ಪಟ್ಟು, ಕೋರ್ಚ್ ಮೆಟ್ಟಿಲೇರುವ ಎಚ್ಚರಿಕೆ, ಮಾಸಾಶನ ಎಲ್ಲ ದೈವಾರಾಧಕರಿಗೆ ಸಿಗಲಿ
ಮಂಗಳೂರು (ಅ.22) : ದೈವಾರಾಧನೆ ಹಾಗೂ ದೈವಾರಾಧಕರು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದ್ದಾರೆ. ಅವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಷಡ್ಯಂತರದ ಭಾಗವೇ ಚಿತ್ರ ನಟರೊಬ್ಬರ ಹಿಂದೂ ವಿರೋಧಿ ಹೇಳಿಕೆಯಾಗಿದೆ. ಅಂತಹ ಹೇಳಿಕೆ ವಿರುದ್ಧ ಬೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕೋರ್ಚ್ ಮೆಟ್ಟಿಲೇರುವುದಾಗಿ ಕರಾವಳಿಯ ದೈವಾರಾಧಕರ ಪ್ರತಿನಿಧಿಗಳು ಹೇಳಿದ್ದಾರೆ.
ಚೇತನ್ ಗೆ ನಟನೆ ಮಾಡಲು ಗೊತ್ತಿರಬಹುದು, ಆದರೆ ನಮಗೆ ಪ್ರಾರ್ಥನೆ ಮಾಡಲು ಗೊತ್ತಿದೆ
ಪಂಬದರ ಯಾನೆ ದೈವಾರಾಧಕರ ಸೇವಾ ಸಮಾಜ ಸಂಘದ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಶುಕ್ರವಾರ ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರಾವಳಿಯಲ್ಲಿ 16 ವರ್ಗ ದೇವಾರಾಧನೆ ನಡೆಸುತ್ತಿದೆ. ಇವರಾರೂ ಆರ್ಥಿಕವಾಗಿ ಸ್ಥಿತಿವಂತರಲ್ಲ. ಕೂಲಿ ಮಾಡಿ ಜೀವನ ಪೊರೆಯುವುದೂ ಇವರಿಗೆ ಸುಲಭವಲ್ಲ. ಯಾಕೆಂದರೆ ದೈವಾರಾಧಕರು ಕೂಲಿ ಮಾಡಬಾರದು ಎಂದಿದೆ. ಹೀಗಿರುವಾಗ ದೈವಾರಾಧನೆ ಮತ್ತು ದೈವಾರಾಧಕರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳದೆ ಬಾಯಿಗೆ ಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ, ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಇದನ್ನು ಖಂಡಿಸುವುದಾಗಿ ಹೇಳಿದರು.
ಎಲ್ಲ 16 ವರ್ಗಗಳೂ ಸೇರಿ ದೈವಾರಾಧನೆ ನಡೆಯುತ್ತದೆ. ಇಲ್ಲಿ ಒಂದು ವರ್ಗ ಸೇರದಿದ್ದರೂ ದೈವಾರಾಧನೆ ಪರಿಪೂರ್ಣ ಎನಿಸದು. ಪ್ರತಿಯೊಬ್ಬ ತುಳುವರೂ ದೈವಾರಾಧನೆ ನಡೆಸುತ್ತಾರೆ. ಇಂತಹ ನಂಬಿಕೆಯನ್ನು ಘಾಸಿಗೊಳಿಸುವ ಕೆಲಸ ಯಾರೂ ಮಾಡಬಾರದು. ಆದ್ದರಿಂದ ದೈವಾರಾಧಕರ ವಿರುದ್ಧದ ಹೇಳಿಕೆಯನ್ನು ಚಿತ್ರನಟ ಚೇತನ್ ವಾಪಸ್ ತೆಗೆದುಕೊಳ್ಳಬೇಕು ಎಂದು ಕತ್ತಲ್‌ಸಾರ್ ಆಗ್ರಹಿಸಿದರು.
ದೈವಾರಾಧನೆಯಲ್ಲಿ ಮೇಲು ಕೀಳು ಎಂಬುದಿಲ್ಲ. ಎಲ್ಲ ವರ್ಗದವರೂ ದೈವಾರಾಧನೆ ನಡೆಸುತ್ತಾರೆ. ಮುಸ್ಲಿಂ, ಕ್ರೈಸ್ತರು ಕೂಡ ಕೆಲವು ಕಡೆಗಳಲ್ಲಿ ದೈವಾರಾಧನೆ ಮಾಡುತ್ತಾರೆ. ಈ ಕುರಿತ ಎಲ್ಲ ಆಪಾದನೆಗಳೂ ಸತ್ಯಕೆ ದೂರ ಎಂದು ಕತ್ತಲ್‌ಸಾರ್ ಹೇಳಿದರು.
ಮಾಸಾಶನ ವಯೋಮಾನ 55 ಇರಲಿ:
ರಾಜ್ಯ ಸರ್ಕಾರ ದೈವಾರಾಧಕರಿಗೆ ಮಾಸಿಕ 2 ಸಾವಿರ ರು. ಮಾಸಾಶನ ಘೋಷಿಸಿರುವುದು ಶ್ಲಾಘನೀಯ. ಆದರೆ ದೈವದ ಚಾಕರಿಯನ್ನು 16 ವರ್ಗಗಳು ಮಾಡುತ್ತಿರುವುದರಿಂದ ಇದನ್ನು ಎಲ್ಲರಿಗೂ ವಿಸ್ತರಿಸಿದರೆ ಉತ್ತಮ ಎಂದರು.
ದೈವಾರಾಧಕರು ಕಠಿಣ ಕೆಲಸವನ್ನು ನಿದ್ರಾಹಾರ ತೊರೆದು ಮಾಡುತ್ತಾರೆ. ಹೀಗಾಗಿ ಇವರು 50 ವರ್ಷಕ್ಕೆ ಸಂತ್ರಸ್ತರಾಗುತ್ತಾರೆ. 60 ವರ್ಷ ಮೇಲ್ಪಟ್ಟು ಬದುಕಿದವರು ಬಹಳ ಕಡಿಮೆ. ಈಗ ಮಾಸಾಶನ ಪ್ರಕಟಿಸಿದರೂ ಅದನ್ನು ಪಡೆಯುವ ಅರ್ಹ ಫಲಾನುಭವಿಗಳ ಸಂಖ್ಯೆ ಕೇವಲ ಬೆರಳೆಣಿಕೆ. ಕೊರೋನಾ ಅವಧಿಯಲ್ಲಿ ಕಲಾವಿದರಿಗೆ ಸರ್ಕಾರಿ ಅನುದಾನದ ವೇಳೆ ಅವರ ವಯೋಮಾನವನ್ನು 55 ವರ್ಷಕ್ಕೆ ಇಳಿಕೆ ಮಾಡಿತ್ತು. ಈ ಬಾರಿ ಕೂಡ ದೈವಾರಾಧಕರಿಗೆ ವಯೋಮಾನ 60ರ ಬದಲು 50 ಅಥವಾ 55ಕ್ಕೆ ನಿಗದಿಪಡಿಸಿದರೆ ಹೆಚ್ಚಿನ ಮಂದಿಗೆ ಮಾಸಾಶನ ಸಿಗಲು ಸಾಧ್ಯ ಎಂದರು.
ಚೇತನ್ ಹೇಳಿಕೆಗೆ ಶುರುವಾಯ್ತು ಕಾಂತಾರ 'ಧರ್ಮ' ಕಿಚ್ಚು
ತಾಂತ್ರಿಕ ತೊಡಕು: ದೈವಾರಾಧಕರಿಗೆ ಮಾಸಾಶನ ಪಡೆಯುವಲ್ಲೂ ತಾಂತ್ರಿಕ ತೊಡಕು ಎದುರಾಗಿದೆ. ಈಗಾಗಲೇ ವೃದ್ಧಾಪ್ಯ ವೇತನ ಪಡೆಯುತ್ತಿರುವ ಕಲಾವಿದರು ಮಾಸಾಶನಕ್ಕೆ ಅರ್ಜಿ ಸಲ್ಲಿಸುವಾಗ ಹಿಂದಿನ ಮಾಸಶನ ರದ್ದುಗೊಳಿಸಬೇಕು ಎಂದು ಅರ್ಜಿ ಸ್ವೀಕರಿಸುವವರು ಹೇಳುತ್ತಿದ್ದಾರೆ. ಒಂದು ವೇಳೆ ರದ್ದುಗೊಳಿಸಿ ಅರ್ಜಿ ಹಾಕಿದರೆ ಈ ಮಾಸಾಶನ ಸಿಗುವಾಗ ಎರಡ್ಮೂರು ತಿಂಗಳು ವರೆಗೆ ಕಾಯಬೇಕು. ಆಗ ಅತ್ತ ವೃದ್ಧಾಪ್ಯ ವೇತನವೂ ಇಲ್ಲ, ಇತ್ತ ಸರ್ಕಾರದ ಮಾಸಾಶನವೂ ಇಲ್ಲ ಎಂಬ ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಹೊಸ ಮಾಸಾಶನ ಬಂದಾಗಲೇ ಹಳೆ ಮಾಸಾಶನ ರದ್ದುಗೊಳ್ಳುವಂತೆ ಮಾಡಬೇಕು. ಇಲ್ಲದಿದ್ದರೆ ಕಲಾವಿದರ ಬದುಕು ಹೈರಾಣಾಗುವ ಸಂಭವ ಇದೆ. ಈ ತಾಂತ್ರಿಕ ತೊಡಕನ್ನು ಸರ್ಕಾರ ನಿವಾರಿಸಬೇಕು ಎಂದು ಅವರು ಆಗ್ರಹಿಸಿದರು.