ಬಿಜೆಪಿಯಿಂದ ಸಂವಿಧಾನದ ಆಶಯ ಮರೆಮಾಚುವ ಷಡ್ಯಂತ್ರ
ಬಿಜೆಪಿ ಸರ್ಕಾರ ಸಂವಿಧಾನದ ಆಶಯವನ್ನು ಮರೆಮಾಚುವ ಷಡ್ಯಂತ್ರ ಮಾಡುತ್ತದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಆರೋಪಿಸಿದರು.
ಕೊಪ್ಪಳ ; ಬಿಜೆಪಿ ಸರ್ಕಾರ ಸಂವಿಧಾನದ ಆಶಯವನ್ನು ಮರೆಮಾಚುವ ಷಡ್ಯಂತ್ರ ಮಾಡುತ್ತದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಆರೋಪಿಸಿದರು.
ತಾಲೂಕಿನ ಅಗಳಕೇರಾ, ಶಿವಪುರ, ಹೊಸಬಂಡಿಹರ್ಲಾಪುರ, ಹಳೇಬಂಡಿಹರ್ಲಾಪುರ, ಬಸಾಪುರ, ನಾರಾಯಣಪೇಟೆ, ರಾಮಜಾರಾಮ್ ಪೇಟೆ, ಮಹಮ್ಮದ್ ನಗರ, ಕವಳಿ ಅಯೋಧ್ಯಾ ಗ್ರಾಮಗಳಲ್ಲಿ .1.45 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಹಾಗೂ ಶಾಲಾ ಕೊಠಡಿ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ, ಅಂಗನವಾಡಿ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, 70 ವರ್ಷದ ಕಾಂಗ್ರೆಸ್ ಅವಧಿಯ ಸಾಧನೆಗಳನ್ನು ಮತ್ತು ಯೋಜನೆಗಳನ್ನು ಮರೆಮಾಚಲು ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಸಂವಿಧಾನವು ನಮಗೆ ಕೊಟ್ಟಿರುವ ಮೀಸಲಾತಿಗೆ ಧಕ್ಕೆ ತರುವ ಹುನ್ನಾರ ಮಾಡುತ್ತಿದೆ. ಇದು ಒಂದು ದೊಡ್ಡ ಷಡ್ಯಂತ್ರವಾಗಿದೆ. ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ಸರ್ಕಾರ ಬಂದು 3.5 ವರ್ಷ ಕಳೆಯಿತು. ಇಲ್ಲಿಯ ತನಕ ಒಂದೇ ಒಂದು ಆಶ್ರಯ ಮನೆಯನ್ನೂ ನೀಡುವ ಕೆಲಸ ಮಾಡಿಲ್ಲ. ಜಿಪಂ ಹಾಗೂ ತಾಪಂಗಳ ಅವಧಿ ಮಗಿದು ಒಂದು ವರ್ಷ ಕಳೆದರೂ ಚುನಾವಣೆ ನಡೆಸುವ ಕೆಲಸ ಸರ್ಕಾರ ಮಾಡಿಲ್ಲ. ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ತಾಪಂ ಹಾಗೂ ಜಿಪಂ ಪಾತ್ರವು ಪ್ರಮುಖ. ಈ ನಿಟ್ಟಿನಲ್ಲಿ ಚುನಾವಣೆಗಳನ್ನು ನಡೆಸಿ ಅಭಿವೃದ್ಧಿ ಮಾಡುವ ಇರಾದೆ ಈ ಸರ್ಕಾರಕ್ಕಿಲ್ಲ ಎಂದು ಗುಡುಗಿದರು.
ನನ್ನ ಸಣ್ಣವಯಸ್ಸಿನಲ್ಲಿ ನನ್ನನ್ನು ಎರಡು ಬಾರಿ ಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿದ್ದೀರಿ, ತಮ್ಮ ಋುಣ ನನ್ನ ಮೇಲಿದೆ. ಸಾಮಾಜಿಕ, ಶೈಕ್ಷಣಿಕವಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ನಿಮ್ಮ ಋುಣವನ್ನು ತೀರಿಸುವ ಕೆಲಸ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಕೊಪ್ಪಳ ವಿಧಾನಸಭೆ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದರು.
ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಿ:
ಈಗಾಗಲೇ ನಾಲ್ಕನೇ ಅಲೆಯ ಸುದ್ದಿಯನ್ನು ಮಾಧ್ಯಮದ ಮೂಲಕ ತಿಳಿದುಕೊಳ್ಳುತ್ತಿದ್ದೇವೆ. ಆದ್ದರಿಂದ ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಲಸಿಕೆಯನ್ನು ತೆಗೆದುಕೊಂಡವರು ಮುನ್ನೆಚ್ಚೆರಿಕೆಯ ಕ್ರಮವಾಗಿ ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತಾಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದುಂಡೇಶ ತುರಾದಿ, ಎಇಇ ವಿಲಾಸ್ ಬೋಸ್ಲೆ, ಜಿಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ, ಟಿ. ಜನಾರ್ದನ ಹುಲಿಗಿ, ನಗಾರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ತಾಪಂ ಮಾಜಿ ಅಧ್ಯಕ್ಷ ಬಾಲಚಂದ್ರನ್ ಮುನಿರಾಬಾದ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ ರಾಜು, ಯಂಕಪ್ಪ ಹೊಸಳ್ಳಿ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ಯೂತ್ ಕಾಂಗ್ರೆಸ್ ಅಧ್ಯಕ್ಷ ಗವಿಸಿದ್ದನಗೌಡ, ಪ್ರಮುಖರಾದ ನಾಗರಾಜ ಪಟವಾಗಿ, ಚಂದಕೃಷ್ಣ, ರಂಗನಾಬ, ಯಮನೂರಪ್ಪ ವಡ್ಡರ್, ಸೀನಣ್ಣ ಶಿವಪುರ, ಧರ್ಮರಾಜ ಕಂಪಸಾಗರ, ಅಶೋಕ ಹಿಟ್ನಾಳ, ವಕ್ತಾರ ಅಕ್ಬರ್ ಪಲ್ಟನ್ ಇತರರಿದ್ದರು.
ಭಿನ್ನಮತ ಜೆಡಿಎಸ್‌ಗೆ ಲಾಭ
ಅಥಣಿ : ನಾನು ಯಾರನ್ನು ಸೋಲಿಸಲು ಜೆಡಿಎಸ್ ಪಕ್ಷ ಸೇರಿಲ್ಲ, ಸ್ಥಳೀಯ ಕಾಂಗ್ರೆಸ್ ಮುಖಂಡರ ವರ್ತನೆ ಹಾಗೂ ಗುಂಪುಗಾರಿಕೆಗೆ ಮನನೊಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲಿ ಭಿನ್ನಮತ, ಗುಂಪುಗಾರಿಕೆ ಹೆಚ್ಚಿದ್ದು, ಅದರ ಲಾಭ ನಮ್ಮ ಜೆಡಿಎಸ್ ಪಕ್ಷಕ್ಕೆ ದೊರಕಲಿದೆ ಎಂದು ಮಾಜಿ ಶಾಸಕ ಷಹಜಹಾನ್ ಡೊಂಗರಗಾಂವ ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ (JDS) ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಯುಕ್ತ ಅಥಣಿ ಜೆಡಿಎಸ್ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸನ್ಮಾನ, ಸ್ವೀಕರಿಸಿ ಮಾತನಾಡಿದ ಅವರು, ಸ್ಥಳೀಯ ಕಾಂಗ್ರೆಸ್ (congress) ಮುಖಂಡರು ತಮ್ಮ ವೈಯಕ್ತಿಕ ಪ್ರಚಾರದಲ್ಲಿ ತೊಡಗಿದ್ದಾರೆ. ಸಮಯ ಸಂದರ್ಭ ನೋಡಿ ಕಾಲೆಳೆಯುವ ಪ್ರಯತ್ನ ಮಾಡುತ್ತಾರೆ. ಪಕ್ಷಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಹೋರಾಟ ಸಂಘಟನೆ, ಕಾರ್ಯಕ್ರಮಗಳ ಪರಿಚಯ ಮಾಡುತ್ತಿಲ್ಲ. ರಾಜಕೀಯ ಅನುಭವ ಇರುವ ನಮಗೆ ಒಂದು ಸಲಹೆ ಕೇಳುವುದಿಲ್ಲ. ಕಾರ್ಯಕ್ರಮಗಳಲ್ಲಿ ಮಾತನಾಡಲು ನನಗೆ ಅವಕಾಶ ಕೊಡುವುದಿಲ್ಲ. ಹೀಗಾಗಿ ಮನನೊಂದು ನಾನು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷವನ್ನು ಸೇರಿಕೊಂಡಿದ್ದೇನೆ ಎಂದು ತಮ್ಮ ಅಳಲು ತೋಡಿಕೊಂಡರು.