ಕಾಂಗ್ರೆಸ್‌ನವರು ಮೂಗಿಗೆ ತುಪ್ಪ ಸವರುತ್ತಾರೆ : ನಾರಾಯಣಸ್ವಾಮಿ
ಕಾಂಗ್ರೆಸ್‌ನವರು ಮೂಗಿಗೆ ತುಪ್ಪ ಸವರುವುದನ್ನು ಬಿಟ್ಟು ಬೇರೆ ಏನು ಮಾಡುವುದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ತುಮಕೂರು : ಕಾಂಗ್ರೆಸ್‌ನವರು ಮೂಗಿಗೆ ತುಪ್ಪ ಸವರುವುದನ್ನು ಬಿಟ್ಟು ಬೇರೆ ಏನು ಮಾಡುವುದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ತುಮಕೂರು ಗ್ರಾಮಾಂತರದ ಶಕ್ತಿಸೌಧದಲ್ಲಿ ನಡೆದ ಛಲವಾದಿ ಸಮಾವೇಶದಲ್ಲಿ ಮಾತನಾಡಿದರು. ನಮಗೆ ನೆಕ್ಕೋದಕ್ಕೂ ಆಗಲ್ಲ, ಸುಮ್ನೇ ಇರೋಕೂ ಆಗಲ್ಲ ಎನ್ನುವಂತಹ ಸ್ಥಿತಿ ದಲಿತರಿಗೆ ನಿರ್ಮಾಣವಾಗಿದೆ. ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್, ದಲಿತರಿಗೆ ಅಧಿಕಾರ ನೀಡುತ್ತದೆಯೇ ಎಂದರು.
ನಾನು ದಾರಿ ತಪ್ಪಿ 40 ವರ್ಷ ಕಾಂಗ್ರೆಸ್‌ನಲ್ಲಿದ್ದೆ. ಬರೀ ವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಾರೆಯೇ ಹೊರತು ಮತ್ತೇನೂ ಮಾಡುವುದಿಲ್ಲ. ಅಂಬೇಡ್ಕರ್ ಎಷ್ಟೇ ತೊಂದರೆ, ನೋವು ಆದರೂ ಸಹ ಎಲ್ಲವನ್ನು ನುಂಗಿಕೊಂಡು ದೇಶದ ಜನರನ್ನು ಸಹೋದರತ್ವದಿಂದ ಬಾಳುವಂತಹ ಸಂವಿಧಾನ ನೀಡಿದರು. ಇದನ್ನು ಸಹಿಸದ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸೋಲಿಸಿತು ಎಂದರು.
ಕಾಂಗ್ರೆಸ್ ಅನ್ನುವುದು ಜೈಲು, 40 ವರ್ಷ ಜೈಲಿನಲ್ಲಿ ಇದ್ದಂತೆ ಇದ್ದೆ. ನಾನು ರಾಜಕೀಯಕ್ಕೆ ಬರುವಾಗ ಬಿಜೆಪಿ ಇರಲಿಲ್ಲ. ಕಾಂಗ್ರೆಸ್ ಅಧಿಕಾರ ಮಾಡುತ್ತಿತ್ತು. ದಾರಿ ತಪ್ಪಿ ಹೋಗಿ ಸೇರಿದ ಮೇಲೆಯೇ ಗೊತ್ತಾಗಿದ್ದು, ಅದು ಸುಡುವ ಮನೆ ಎಂದು. ಅಂಬೇಡ್ಕರ್ ಸಹ ಕಾಂಗ್ರೆಸ್‌ಗೆ ದಲಿತರು ಹೋಗಬಾರದು, ಬೆಂಬಲಿಸಬಾರದು ಎಂದು ಹೇಳಿದ್ದನ್ನು ಹಿರಿಯರು ಯಾರು ಹೇಳಲಿಲ್ಲ ಎಂದರು.
ಕಾಂಗ್ರೆಸ್ ಮೀಸಲಾತಿ ಪಟ್ಟಿಗೆ ಅನೇಕ ಜಾತಿಗಳನ್ನು ಸೇರಿಸಿದರು. ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಲಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ, ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡುವ ಮೂಲಕ ಸೌಲಭ್ಯ ನೀಡಿದ್ದ ಬಸವರಾಜ ಬೊಮ್ಮಾಯಿ ಸರ್ಕಾರ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ಜೆಡಿಎಸ್ ದಲಿತರನ್ನು ಹತ್ತಿರ ಸೇರಿಸುವುದಿಲ್ಲ:
ಜನತಾದಳದವ್ರು ದಲಿತರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ. ನೂರೋ, ಇನ್ನೋರೋ ಕೊಟ್ಟರೆ ವೋಟು ಹಾಕ್ತಾರೆ ಎಂದು ಭಾವಿಸಿದ್ದಾರೆ. ಛಲವಾದಿಗಳು ಪ್ರೀತಿ, ವಿಶ್ವಾಸಕ್ಕೆ ಸೋಲುತ್ತಾರೆ ಹೊರತು ಹಣಕ್ಕೆ ಅಲ್ಲ ಎನ್ನುವುದನ್ನು ತೋರಿಸಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಮಾದಿಗ ಮತ್ತು ಛಲವಾದಿ ಸಮುದಾಯಕ್ಕೆ ಸಮಾನವಾಗಿ ಅಧಿಕಾರ ಹಂಚುವ ಮೂಲಕ ಗ್ರಾಮಾಂತರದಲ್ಲಿ ದಲಿತರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿತ್ತು. ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಇಂದು ಗ್ರಾಮಾಂತರದಲ್ಲಿ ದಲಿತ ವರ್ಗದ ಯುವಕರನ್ನು ಹೆಂಡ, ಮಾಂಸಕ್ಕೆ ಸೀಮಿತಗೊಳಿಸಲಾಗುತ್ತಿದೆ. ಸಮುದಾಯದ ಅಭಿವೃದ್ಧಿಗಾಗಿ ಕಟ್ಟಿಸಿದ ಶಾಲೆಗಳು ಹಾಳು ಬಿದ್ದಿವೆ. ಶಿಕ್ಷಣದ ಗುಣಮಟ್ಟಕುಸಿದಿದ್ದು, ಅಂಬೇಡ್ಕರ್ ಆಶಯಗಳಿಂದ ವಂಚಿಸಲಾಗುತ್ತಿದೆ ಎಂದರು.
ನಾನು ಶಾಸಕನಾಗಿ ಆಯ್ಕೆ ಆದರೆ ಛಲವಾದಿ ಸಮುದಾಯಕ್ಕೆ ಎಲ್ಲ ನೇಮಕಾತಿ ಮತ್ತು ನಾಮನಿರ್ದೇಶನ ಅಧಿಕಾರ ಸ್ಥಾನಗಳಿಗೆ ಮೀಸಲು ನೀಡುವ ಮೂಲಕ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಎರಡು ಎಕರೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಗಂಗಾಜಿನೇಯ, ಹೊಳಕಲ್ಲು ಗ್ರಾ.ಪಂ ಮಾಜಿ ಸದಸ್ಯ ಗಿರೀಶ್, ರತ್ನಮ್ಮ ಇತರರಿದ್ದರು.