ನಂಜನಗೂಡು (ನ.20):  ಇಲ್ಲಿನ ಟಿಎಪಿಸಿಎಂಎಸ್‌ನ ನೂತನ ಅಧ್ಯಕ್ಷರಾಗಿ ಎಂಡಿಸಿಸಿ ಬ್ಯಾಂಕಿನ ನಿರ್ದೇಶಕರು ಆಗಿರುವ ಕುರಹಟ್ಟಿಕೆ.ಜಿ. ಮಹೇಶ್‌, ಉಪಾಧ್ಯಕ್ಷರಾಗಿ ಚಿನ್ನಂಬಳ್ಳಿ ರಾಜು ಅವಿರೋಧವಾಗಿ ಆಯ್ಕೆಯಾದರು.

ನಂಜನಗೂಡು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ 12 ಮಂದಿ ನಿರ್ದೇಶಕರ ಪೈಕಿ 11 ನಿರ್ದೇಶಕರು ಕಾಂಗ್ರೆಸ್‌ ಬೆಂಬಲಿತರು ಆಯ್ಕೆಯಾಗಿದ್ದರು. ಒಬ್ಬರು ಮಾತ್ರ ಬಿಜೆಪಿ ಬೆಂಬಲಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಟಿಎಪಿಸಿಎಂಎಸ್‌ ಕಚೇರಿಯಲ್ಲಿ ಚುನಾವಣೆ ಅಧಿಕಾರಿ ಹಾಗೂ ತಹಸಿಲ್ದಾರ್‌ ಕೆ.ಎಂ. ಮಹೇಶ್‌ಕುಮಾರ್‌ ನೇತೃತ್ವದಲ್ಲಿ ಬೆಗ್ಗೆ 11ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಅಧ್ಯಕ್ಷ ಸ್ಥಾನಕ್ಕೆ ಕೆ.ಜಿ. ಮಹೇಶ್‌, ಉಪಾಧ್ಯಕ್ಷ ಸ್ಥಾನಕ್ಕೆ ಚಿನ್ನಂಬಳ್ಳಿ ರಾಜು ನಾಮಪತ್ರ ಸಲ್ಲಿಸಿದರು.

ಸಂಪುಟ ವಿಸ್ತರಣೆ ಸರ್ಕಸ್: ಬಿಜೆಪಿ ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ?

ನಿಗದಿಯಂತೆ   ಸಭೆ ನಡೆಸಿದ ಚುನಾವಣೆ ಅಧಿಕಾರಿ ಕೆ.ಎಂ. ಮಹೇಶ್‌ಕುಮಾರ್‌ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ನಾಮಪತ್ರ ಸಲ್ಲಿಸಿದವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕರಾದ ಎಸ್‌.ಎಂ. ಕೆಂಪಣ್ಣ, ಸರ್ಕಾರದ ನಾಮನಿರ್ದೇಶನ ಸದಸ್ಯರಾದ ಹಾಡ್ಯ ಶಂಕರ್‌ ಗೈರು ಹಾಜರಾಗಿದ್ದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾಧಿ ಮತ್ತೆ ಕಾಂಗ್ರೆಸ್‌ ಒಲಿಯುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ, ಜೈಕಾರ ಕೂಗಿದರಲ್ಲದೇ ನೂರಾರು ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಮಾಜಿ ಶಾಸಕ ಕಳಲೆ ಎನ್‌. ಕೇಶವಮೂರ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಬದ್ದತೆಯಿಂದ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು. ನೂತನ ಅಧ್ಯಕ್ಷ ಕೆ.ಜಿ. ಮಹೇಶ್‌ ಮಾತನಾಡಿ, 3 ಬಾರಿ ಅಧ್ಯಕ್ಷರಾಗಲು ಕಾರಣರಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಂಸದ ಆರ್‌. ಧ್ರುವನಾರಯಣ್‌, ಶಾಸಕ ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರ ಸಹಕಾರವೇ ಕಾರಣ. ಟಿಎಪಿಸಿಎಂಎಸ್‌ ಅಭಿವೃದ್ದಿಗಾಗಿ ಅನೇಕ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದರು.