ಮದ್ದೂರು (ಡಿ.19):  ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಗೆಲುವು ಪಕ್ಷವನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸುವ ಭೂಮಿಕೆಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಧನ್‌  ಹೇಳಿದರು.

ಪಟ್ಟಣದ ಶಿವಪುರದ ಖಾಸಗಿ ಹೊಟೇಲ್‌ನಲ್ಲಿ ತಾಲೂಕಿನ ಆತಗೂರು ಹೋಬಳಿಯ ಕದಲೂರು ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಆಯ್ಕೆಯಾದ 9 ಮಂದಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಒಮ್ಮೆ ಆಡಳಿತ ಮತ್ತೊಮ್ಮೆ ವಿರೋಧ ಪಕ್ಷದಲ್ಲಿ ಇರುವುದು ಸಹಜ. ಮುಖಂಡರು ಮತ್ತು ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಒಳ್ಳೆಯ ಭವಿಷ್ಯವಿದೆ. ನಿರಾಶರಾಗದೆ ಪಕ್ಷವನ್ನು ಬೇರುಮಟ್ಟದಿಂದ ಸದೃಢಗೊಳಿಸಬೇಕು ಎಂದರು.

ಸಂವಿಧಾನಕ್ಕೆ ತಿದ್ದು ಪಡಿ ತರುವ ಮೂಲಕ ಪಂಚಾಯತ್‌ ರಾಜ್‌ ಕಾಯ್ದೆಗೆ ಬಲ ನೀಡಿದ್ದ ಮಾಜಿ ಪ್ರಧಾನಿ ರಾಜೀವ್‌ ಸರ್ಕಾರದ ಕಾರ್ಯಕ್ರಮಗಳನ್ನು ಗ್ರಾಮಕ್ಕೆ ತಲುಪಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಮಹಿಳೆಯರ ಮೀಸಲಾತಿ ಹಾಗೂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿ ಮಹಿಳೆಯರು ಅಧಿಕಾರ ನಡೆಸಬಹುದು ಎಂಬುವುದನ್ನು ಸಾಬೀತು ಪಡಿಸಿದೆ ಎಂದು ಹೇಳಿದರು.

ಕಾಂಗ್ರೆಸ್ ಸಂಬಂಧವನ್ನೇ ಮುರಿದ್ಕೊಂಡು ಜೆಡಿಎಸ್‌ ಸೇರಲು ತೀರ್ಮಾನಿಸಿದ ಹಿರಿಯ ನಾಯಕ ...

ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಈಗಾಗಲೇ ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಬಿಜೆಪಿ ದೇಶದ ಜನರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪ್ರಚೋದನೆ ಮಾಡಿ ಕೋಮು ಸಂಘರ್ಷ ಉಂಟುಮಾಡಲು ಯತ್ನಿಸುತ್ತಿದೆ. ಕಾರ್ಯಕರ್ತರು ಈ ಬಗ್ಗೆ ಜನರಿಗೆ ಮನವರಿಗೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ ಸ್ವಗ್ರಾಮ ಕದಲೂರು ಗ್ರಾಪಂನಲ್ಲಿ ಕಳೆದ 30 ವರ್ಷಗಳಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿರುವುದು ಹೆಗ್ಗಳಿಕೆಯ ಯಾಗಿದೆ. ಮುಂದಿನ ದಿನಗಳಲ್ಲೂ ಹೋಬಳಿಯಲ್ಲಿ ಕಾಂಗ್ರೆಸ್‌ ಬೆಂಬಲಿತ ಗೆಲುವಿಗೆ ಕಾರ್ಯಕರ್ತರು ಪಣತೊಡಬೇಕೆಂದು ಕಿವಿಮಾತು ಹೇಳಿದರು.

ಈ ವೇಳೆ ಕೆಪಿಸಿಸಿ ಕಾರ್ಯದರ್ಶಿ ಸಂಪಗಿ, ಕೆಪಿಸಿಸಿ ಸದಸ್ಯ ಎಸ್‌.ಗುರುಚರಣ್‌, ವೀಕ್ಷಕ ಎಂ.ಎಸ್‌. ಆತ್ಮಾನಂದ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌, ಮಹಿಳಾ ಸಂಘಟದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ಮದ್ದೂರು ಕ್ಷೇತ್ರದ ವೀಕ್ಷಕ ಸಿ.ಎಂ.ದ್ಯಾವಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾ.ಪಂ ಸದಸ್ಯ ಕೆ.ಆರ್‌. ಮಹೇಶ್‌ ಇದ್ದರು.

ಅವಿರೋಧ ಆಯ್ಕೆ

ಗ್ರಾಪಂನ 12 ಸ್ಥಾನಗಳಲ್ಲಿ ಕಾಂಗ್ರೆಸ್‌ 9, ಜೆಡಿಎಸ್‌ 3 ಮಂದಿ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಚಿಕ್ಕರಾಮೇಗೌಡ, ಶಿವಣ್ಣ, ಗುರುಪ್ರಸಾದ್‌, ತಿಮ್ಮೇಗೌಡ, ಸುನೀಲ್‌ ಕುಮಾರ್‌ , ರತ್ನಮ್ಮ, ಪಾಪಯ್ಯ, ಜಯಲಕ್ಷ್ಮಮ್ಮ, ಸರೋಜ, ಜೆಡಿಎಸ್‌ ಬೆಂಬಲಿತ ರಾಣಿ, ಬೋರಮ್ಮ, ಪ್ರೇಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.