ಕಾಂಗ್ರೆಸ್ ಮುಂದಿನ 30 ವರ್ಷಗಳವರೆಗೂ ವಿಪಕ್ಷ ಸ್ಥಾನದಲ್ಲಿಯೇ ಇರಲಿದೆ. ಸಾಮಾನ್ಯನೋರ್ವನಿಗೂ ಉನ್ನತ ಸ್ಥಾನ ದೊರೆಯುವುದು ಬಿಜೆಪಿಯಲ್ಲಿ ಮಾತ್ರವೇ ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. 

ಚನ್ನಗಿರಿ [ಸೆ.16]: ಪಕ್ಷದಲ್ಲಿ ಎಲ್ಲ ಕಾರ್ಯಕರ್ತರನ್ನು ಸಮಾನವಾಗಿ ನೋಡುವ ಹಾಗೂ ಸ್ಥಾನ ಮಾನ ನೀಡುವ ಪಕ್ಷವೆಂದರೆ ಅದು ಬಿಜೆಪಿ. ಒಬ್ಬ ಸಾಮಾನ್ಯ ಕಾರ್ಯಕರ್ತನೂ ಉನ್ನತ ಸ್ಥಾನಕ್ಕೆ ಏರಬಹುದು ಎನ್ನುವುದಕ್ಕೆ ದೇಶದ ಪ್ರಧಾನಿ ಮೋದಿಯೇ ಸಾಕ್ಷಿ. ಹಾಗೆಯೇ ಸಾಮಾನ್ಯ ಕಾರ್ಯಕರ್ತನಾದ ನಾನು ರಾಜ್ಯ ಬಿಜೆಪಿ ಅಧ್ಯಕ್ಷನಾಗಿರುವುದು ಕೂಡಾ ಸಾಕ್ಷಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಅವರು ಭಾನುವಾರ ರಾತ್ರಿ ಚಿತ್ರದುರ್ಗದ ಕಾರ್ಯಕ್ರಮಕ್ಕೆ ಭಾಗವಹಿಸಲು ತೆರಳುತ್ತಿದ್ದ ಮಾರ್ಗ ಮಧ್ಯೆ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಪಕ್ಷಕ್ಕೆ ಕಾರ್ಯಕರ್ತರ ಪಡೆಯೇ ದೊಡ್ಡ ಶಕ್ತಿಯಾಗಿದ್ದು, ಮುಂದಿನ 30 ವರ್ಷಗಳ ತನಕ ರಾಜ್ಯದಲ್ಲಿ ಕಾಂಗ್ರೇಸ್‌ ವಿರೋಧ ಪಕ್ಷದಲ್ಲಿಯೇ ಇರುವುದು ಎಂದರು. ಕೇಂದ್ರದಲ್ಲಿ ಪ್ರಧಾನಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವ ಬಿಜೆಪಿ ಪಕ್ಷ ರಾಜ್ಯದಲ್ಲಿ ಪ್ರಜ್ವಲಿಸುವಂತೆ ಮಾಡುವುದೆ ನನ್ನ ಗುರಿಯಾಗಿದ್ದು ಇದಕ್ಕೆ ಪಕ್ಷದ ಕಾರ್ಯಕರ್ತರ ಸಹಕಾರ ಇರಬೇಕು ಎಂದು ತಿಳಿಸಿದರು. ಪಕ್ಷದಲ್ಲಿ ಹಿರಿಯ ನಾಯಕರಾದ ಈಶ್ವರಪ್ಪ, ಸದಾನಂದ ಗೌಡ, ಎ.ಕೆ.ಸುಬ್ಬಯ್ಯ, ಪ್ರಹ್ಲಾದಜೋಷಿ ಕಟ್ಟಿದ ಪಕ್ಷದಲ್ಲಿ ಕಿರಿಯ ವಯಸ್ಸಿನ ನಾನು ಅಧ್ಯಕ್ಷನಾಗಿರುವುದೇ ನನ್ನ ಪುಣ್ಯ ಎಂದು ಹೇಳಿದರು.

ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಉತ್ಸಾಹಿ ಯುವಕ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯ. ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಶಾಸಕಸ್ಥಾನ ಗೆಲ್ಲಿಸಲು ಪಣ ತೊಟ್ಟಿರುವ ಇವರಿಗೆ ನಮ್ಮ ಬೆಂಬಲ ಸದಾ ಇರುವುದು ಎಂದು ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದ ಎದುರು ರಾತ್ರಿ ಪಟ್ಟಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಆಗಮಿಸುತ್ತಿದ್ದಂತೆಯೇ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೂವಿನ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಪಕ್ಷದ ಮಹಿಳಾ ಕಾರ್ಯಕರ್ತೆಯರು ಅರತಿ ಬೆಳಗಿ ಸ್ವಾಗತ ಕೋರಿದರು. ತಾ. ಬಿಜೆಪಿ ಅಧ್ಯಕ್ಷ ಮೆದಿಕೆರೆ ಸಿದ್ದೇಶ್‌, ಜಿಪಂ ಸದಸ್ಯೆ ಯಶೋಧಮ್ಮ ಮರುಳಪ್ಪ, ಕಾರ್ಯಕರ್ತ ಎ.ಎಸ್‌.ಬಸವರಾಜ್‌, ತುಮ್‌ ಕೋಸ್‌ ಅಧ್ಯಕ್ಷ ಶಿವಕುಮಾರ್‌, ಬುಳ್ಳಿನಾಗರಾಜ್‌, ಟಿ.ವಿ.ರಾಜು ಪಟೇಲ್‌, ಸಿ.ಎಂ.ಗುರುಸಿದ್ದಯ್ಯ, ಕಾಯಿ ಮಂಜುನಾಥ್‌, ವಿ.ಎಚ್‌.ಪಿ.ಅಧ್ಯಕ್ಷ ಕೆ.ಎಚ್‌.ಮಂಜುನಾಥ್‌, ಸಂಗಮೇಶ್‌ , ರುದ್ರೇಗೌಡ, ಕಾರ್ಯಕರ್ತರು ಹಾಗೂ ಪುರಸಭಾ ಸದಸ್ಯರು ಇದ್ದರು.