‘ಅಗ್ನಿಪಥ್’ ವಿರುದ್ಧ ಪ್ರತಿ ಕ್ಷೇತ್ರದಲ್ಲೂ ಪ್ರತಿಭಟನೆ: ರಮಾನಾಥ ರೈ
* ಸೈನ್ಯಕ್ಕೆ ಪ್ರತಿ ವರ್ಷ 60-70 ಸಾವಿರ ಸೈನಿಕರನ್ನು ನೇಮಕ
* ಕಳೆದೆರಡು ವರ್ಷಗಳಿಂದ ಕೊರೋನಾ ಕಾರಣದಿಂದ ನೇಮಕಾತಿ ಮಾಡಿಲ್ಲ
* ನೇಮಕಾತಿಯನ್ನೇ ರದ್ದು ಮಾಡಿ ಅಗ್ನಿಪಥ್ ಮಾಡಿದ ಉದ್ದೇಶ ಏನು?
ಮಂಗಳೂರು(ಜೂ.28): ಸೈನಿಕರನ್ನು 4 ವರ್ಷ ಕಾಲ ಹೊರಗುತ್ತಿಗೆ ನೇಮಕಾತಿ ಮಾಡುವ ‘ಅಗ್ನಿಪಥ್’ ಯೋಜನೆಯಿಂದ ದೇಶದ ನಿರುದ್ಯೋಗಿಗಳಿಗೆ ಯಾವ ಸಹಾಯವೂ ಆಗಲ್ಲ, ಸೇನೆಯ ಸಾಮರ್ಥ್ಯ ವೃದ್ಧಿಯೂ ಆಗುವುದಿಲ್ಲ. ಇದರ ವಿರುದ್ಧ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈನ್ಯಕ್ಕೆ ಪ್ರತಿವರ್ಷ 60-70 ಸಾವಿರ ಸೈನಿಕರನ್ನು ನೇಮಕಾತಿ ಮಾಡಲಾಗುತ್ತದೆ. ಆದರೆ ಕಳೆದೆರಡು ವರ್ಷಗಳಿಂದ ಕೊರೋನಾ ಕಾರಣದಿಂದ ನೇಮಕಾತಿ ಮಾಡಿಲ್ಲ. ಆದರೆ ನೇಮಕಾತಿಯ ಪ್ರಕ್ರಿಯೆ ನಡೆದು ಮೆಡಿಕಲ್ ಪರೀಕ್ಷೆಯನ್ನೂ ಮಾಡಿ ಅಭ್ಯರ್ಥಿಗಳು ನೇಮಕಾತಿಗಾಗಿ ಕಾಯುತ್ತಿದ್ದರು. ಆ ನೇಮಕಾತಿಯನ್ನೇ ರದ್ದು ಮಾಡಿ ಅಗ್ನಿಪಥ್ ಮಾಡಿದ ಉದ್ದೇಶ ಏನು? ಇದು ಖಂಡನೀಯ ಎಂದರು.
'ಕಟೀಲ್ ಮಿಮಿಕ್ರಿ ಮಾಡುವ ಎಕ್ಸ್ ಪರ್ಟ್‌ಗಳು ಇದ್ದಾರೆಯೇ?'
ನಿಯಮ ಪ್ರಕಾರ 5 ವರ್ಷ ಸರ್ಕಾರಿ ಉದ್ಯೋಗ ಮಾಡಿದರೆ ಅವರಿಗೆ ನಿವೃತ್ತಿ ಪಿಂಚಣಿ, ಇತರ ಸೌಲಭ್ಯಗಳನ್ನು ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಅಗ್ನಿಪಥ್ ಅವಧಿಯನ್ನು 4 ವರ್ಷಕ್ಕೆ ಸೀಮಿತಗೊಳಿಸಿದ್ದಾರೆ ಎಂದು ಆರೋಪಿಸಿದ ರಮಾನಾಥ ರೈ, 4 ವರ್ಷ ಸೇವೆಯ ಬಳಿಕ ಸೆಕ್ಯೂರಿಟಿ ಗಾರ್ಡ್ ಇತ್ಯಾದಿ ಕೆಲಸ ಸಿಗುತ್ತದೆ ಎಂದು ಕೆಲವರು ಹೇಳುತ್ತ ಸೈನ್ಯಕ್ಕೆ ಅವಮಾನ ಮಾಡುತ್ತಿದ್ದಾರೆ. ಕೆಲಸ ನೀಡುವ ಭರವಸೆ ನೀಡಿದವರು ಇದುವರೆಗೆ ತಾವು ನೀಡಿದ ಭರವಸೆಗಳಲ್ಲಿ ಯಾವುದನ್ನು ಈಡೇರಿಸಿದ್ದಾರೆ ಎಂದು ಪ್ರಶ್ನಿಸಿದರು.
ಅಗ್ನಿಪಥ್‌ನಿಂದ ನಿವೃತ್ತಿ ಆದವರಿಗೆ ಬಹುತೇಕ ಮಿಲಿಟರಿ ಸೌಲಭ್ಯಗಳು ಸಿಗುವುದಿಲ್ಲ. ಮಿಲಿಟರಿ ಕ್ಯಾಂಟೀನ್, ಮೆಡಿಕಲ್ ಸೌಲಭ್ಯ ಆದೇಶ ಪ್ರತಿಯಲ್ಲಿಲ್ಲ. ಸೈನಿಕರ ಬ್ಯಾಜ್ ಸಿಗಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಅಧಿಕಾರ ಪಡೆದವರು ಅದನ್ನೀಗ ಮರೆತಿದ್ದಾರೆ. ಮೋದಿ ವಿರೋಧಿಸುವವರು ದೇಶ ವಿರೋಧಿ ಎನ್ನುತ್ತಾರೆ. ಆದರೆ ಈ ಹೊರಗುತ್ತಿಗೆಯ ಸೇನಾ ನೇಮಕಾತಿಯನ್ನು ದೇಶಪ್ರೇಮಿಗಳು ಒಪ್ಪಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಾಹುಲ್ ಹಮೀದ್, ಜಯಶೀಲ ಅಡ್ಯಂತಾಯ, ಶಾಲೆಟ್ ಪಿಂಟೊ, ಹರಿನಾಥ್ ಬೋಂದೆಲ್, ನೀರಜ್‌ಪಾಲ್, ನವೀನ್ ಡಿಸೋಜ, ಅಪ್ಪಿ ಮತ್ತಿತರರಿದ್ದರು.