ಕಾರವಾರ [ಮಾ.13]:  ಇಲ್ಲಿನ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಬಿಜೆಪಿ ಪೈಪೋಟಿಗೆ ಇಳಿದಿವೆ. ಅಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಅ(ಬಿಸಿಎ), ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ (ಜನರಲ್) ಮೀಸಲಾತಿ ಪ್ರಕಟವಾಗಿದ್ದು, ಶತಾಯಗತಾಯ ತಮ್ಮ ಸುಪರ್ಧಿಗೆ ತೆಗೆದುಕೊಳ್ಳಲು ಹಾಲಿ ಮತ್ತು ಮಾಜಿ ಶಾಸಕರ ನಡುವೆ ಜಿದ್ದಾಜಿದ್ದಿ ಪ್ರಾರಂಭವಾಗಿದೆ.

ಅಧಿಕಾರದ ಚುಕ್ಕಾಣಿ ಹಿಡಿಯಲು ಒಟ್ಟೂ  17 ಪ್ರತಿನಿಧಿಗಳ ಬೆಂಬಲ ಬೇಕಿದ್ದು, ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ನೀಡಿದರೆ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಆನಂದ ಅಸ್ನೋಟಿಕರ್ ಹೇಳಿಕೆ ನೀಡಿದ್ದರು. ಆದರೂ ಒಟ್ಟೂ 15 ಅಭ್ಯರ್ಥಿಗಳ ಸಂಖ್ಯೆ ದಾಟುವುದಿಲ್ಲ. ಸ್ಪಷ್ಟ ಬಹುಮತಕ್ಕೆ ಇಬ್ಬರು ಸದಸ್ಯರು ಬೇಕು. ಪಕ್ಷೇತರರನ್ನು ಸೆಳೆದುಕೊಂಡರೆ ಮಾತ್ರ ಜೆಡಿಎಸ್ ಕನಸು ನನಸಾಗುತ್ತದೆ. 

ಬಿಜೆಪಿ ಬೆಂಬಲಿತ 11 ಪ್ರತಿನಿಧಿಗಳು ಆಯ್ಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿ ಪಿ.ಪಿ. ನಾಯ್ಕ, ಸುಜಾತಾ ಥಾಮ್ಸೆ ಈಗಾಗಲೇ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇವರನ್ನು ಸೇರಿ 13 ಸದಸ್ಯರಾಗಲಿದ್ದು, ಸಂಸದರ, ಶಾಸಕರ ಮತ ಸೇರಿ 15 ಮತ ಸಿಗಲಿದೆ. ಇನ್ನೂ ಎರಡು ಪ್ರತಿನಿಧಿಗಳ ಬೆಂಬಲ ಬಿಜೆಪಿ  ಪಡೆದುಕೊಳ್ಳಲು ಕಸರತ್ತು ಮಾಡಬೇಕಿದೆ. ಪ್ರೇಮಾನಂದ ಗುನಗ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಕಡಿಮೆಯಿದ್ದು, ಜೆಡಿಎಸ್ ಬೆಂಬಲಿತರ ಅವಶ್ಯಕತೆ ಆಗುತ್ತದೆ. 

ಶಾಸಕಿ ರೂಪಾಲಿ ನಾಯ್ಕ ಕೂಡಾ ನಗರಸಭೆಯಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯುವ ಬಗ್ಗೆ ಪ್ರಯತ್ನ ನಡೆಸುತ್ತಿದ್ದಾರೆ. ಎರಡೂ ಪಕ್ಷಗಳ ಮುಖಂಡರಿಂದ ತೆರೆಮರೆಯ ಕಸರತ್ತು ಆರಂಭವಾಗಿದೆ. 

ಅಧ್ಯಕ್ಷ ಹುದ್ದೆ ಸಾಧ್ಯತೆ: ಮಾಜಿ ಶಾಸಕ ಸತೀಶ ಸೈಲ್‌ಗೆ ಮೋಹನ ನಾಯ್ಕರನ್ನು ಅಧ್ಯಕ್ಷ ಗಾಧಿಯ ಮೇಲೆ ಕೂರಿಸಬೇಕೆನ್ನುವ ಉದ್ದೇಶವಿದೆ ಎನ್ನಲಾಗುತ್ತಿದ್ದು, ಈ ಹಿಂದೆ ಅಧ್ಯಕ್ಷರಾಗಿದ್ದ, 4 ನೇ ಬಾರಿಗೆ ಆಯ್ಕೆಯಾದ ಗಣಪತಿ ನಾಯ್ಕ, ಸತತ ಮೂರನೇ ಬಾರಿಗೆ ಆಯ್ಕೆಯಾದ ಹಾಗೂ ಅತಿ ಹೆಚ್ಚು ಅಂತರದ ಗೆಲುವು ಸಾಧಿಸಿದ ಸಂದೀಪ ತಳೇಕರ ಕೂಡಾ ಆಕಾಂಕ್ಷಿಗಳಾಗಿರುವುದರಿಂದ ಇಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕಾಗುತ್ತದೆ.

ಬಿಎಸ್‌ವೈ ವಿರುದ್ಧವೇ ಬಿಜೆಪಿ ಶಾಸಕರು ಗರಂ...

ಇನ್ನು ಬಿಜೆಪಿಯಿಂದ ರವಿರಾಜ ಅಂಕೋಲೆಕರ, ಪಿ.ಪಿ. ನಾಯ್ಕ, ನಂದಾ ನಾಯ್ಕ ಅಧ್ಯಕ್ಷ ಹುದ್ದೆಗೆ ಮುಂಚೂಣಿಯಲ್ಲಿದ್ದು, ಪಕ್ಷೇತರರಾಗಿ ಗೆಲುವು ಸಾಧಿಸಿದ ಪಿ.ಪಿ. ನಾಯ್ಕಗೆ ಹೆಚ್ಚಿನ ಅವಕಾಶವಿದೆ. ಸಂಸದರು, ಶಾಸಕರು ಇರುವುದರಿಂದ ಬಿಜೆಪಿಗೆ ಹೆಚ್ಚಿನ ಅವಕಾಶವಿದೆ. ಆದರೆ ಅದನ್ನು ಶಾಸಕಿ ರೂಪಾಲಿ ಅದನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಎನ್ನುವುದರ ಮೇಲೆ ಅವಲಂಭಿತವಾಗಿದೆ.

ತೆರೆಮರೆಯಲ್ಲಿ ಕಸರತ್ತು

11 ಸದಸ್ಯರನ್ನು ಹೊಂದಿರುವ ಸೈಲ್ ತಮ್ಮ ಪಕ್ಷದ ಅಧಿಕಾರ ಬಿಡುಕೊಡಲು ಒಪ್ಪುವ ಸಾಧ್ಯತೆಯೂ ಕಡಿಮೆ. ಆದರೆ ಗದ್ದುಗೆ ಏರಲು 6 ಜನರ ಬೆಂಬಲ ಬೇಕಿದ್ದು, ಸತೀಶ ಸೈಲ್ ಈಗಾಗಲೇ ಪಕ್ಷೇತರ ಅಭ್ಯರ್ಥಿಗಳನ್ನು ಹಾಗೂ ಜೆಡಿಎಸ್ ಬೆಂಬಲಿತರನ್ನು ತಮ್ಮ ಕಡೆಗೆ ಸೆಳೆದುಕೊಳ್ಳಲು ಪ್ರಯತ್ನ ಶೀಲರಾಗಿದ್ದಾರೆ. 4 ಜನ ಪಕ್ಷೇತರ ಬೆಂಬಲ ಪಡೆದರೂ 2 ಸದಸ್ಯರು ಕಡಿಮೆ ಆಗಲಿದ್ದಾರೆ. ಹೀಗಾಗಿ ಜೆಡಿಎಸ್ 2 ಪ್ರತಿನಿಧಿಗಳು ಕಾಂಗ್ರೆಸ್‌ಗೆ ಬೆಂಬಲಿಸಿದರೆ ಮಾತ್ರ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.