'ಸರ್ಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ'
ರಾಜ್ಯ ಸರ್ಕಾರ ಮಾಡಬೇಕಾದ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಹಸ್ತ ಕಾರ್ಯಕ್ರಮ ಜಾರಿ ತಂದಿದೆ ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಹೇಳಿದ್ದಾರೆ.
ಹನೂರು (ಆ.30): ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜನರ ಹಿತರಕ್ಷಣೆಗೆ ಅವಿರತವಾಗಿ ಶ್ರಮಿಸುತ್ತಿದೆ. ಜನತೆ ಆರೋಗ್ಯ ಹಿತದೃಷ್ಟಿಯಿಂದ ನೂತನವಾಗಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ತಿಳಿಸಿದರು.
ಶನಿವಾರ ಮಧ್ಯಾಹ್ನ ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹನೂರು- ರಾಮಾಪುರ ಬ್ಲಾಕ್‌ನಿಂದ ಏರ್ಪಡಿಸಲಾಗಿದ್ದ ಆರೋಗ್ಯ ಹಸ್ತ ಕೊರೋನಾ ವಾರಿಯರ್ಸ್‌ಗೆ ತರಬೇತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕಾರ್ಯಕ್ರಮ ಎಲ್ಲರನ್ನು ತಲುಪಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಕೊರೋನಾ ವಾರಿಯರ್ಸ್‌ಗಳ ಜೊತೆ ಸ್ಥಳಿಯ ಜನಪ್ರತಿನಿಧಿಗಳು, ಕಾರ್ಯಕರ್ತರು ಸಹಕರಿಸಬೇಕು. ಕೊರೋನಾ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲರಾದ ಕಾರಣ ಇಂತಹ ಪರಿಸ್ಥಿತಿ ಉದ್ಭವಿಸಿತು ಎಂದರು.
ಕೊರೋನಾ ವಾರಿಯರ್‌ಗಳು ಧೈರ್ಯವಾಗಿ ಜನರ ಆರೋಗ್ಯ ತಪಾಸಣೆ ನಡೆಸಿ, ಕೊರೊನಾ ವಾರಿಯರ್‌ಗಳಿಗೆ ಇನ್ಸುರೆನ್ಸ್ ಸಹ ಕೆಪಿಸಿಸಿ ವತಿಯಿಂದ ಮಾಡಿಸಲಾಗುವುದು ಎಂದ ಅವರು ಕೊರೋನಾ ಸೋಂಕಿನ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ನಮ್ಮ ಭಾಗಕ್ಕೆ ಬಂದು ತರಕಾರಿ ಹಣ್ಣು ಹಂಪಲುಗಳನ್ನು ಖರೀದಿಸಿ ರೈತರು ಮತ್ತು ಸಾರ್ವಜನಿಕರ ನೆರವಿಗೆ ನಿಂತರು. ಆದರೆ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ, ಶಂಖ ಊದಿ, ಜಾಗಟೆ ಬಾರಿಸಿ ದೀಪ ಹಚ್ಚಿ ಎನ್ನುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿದರು ಎಂದು ವ್ಯಂಗ್ಯವಾಡಿದರು. ಶಾಸಕ ಆರ್.ನರೇಂದ್ರ ಮಾತನಾಡಿದರು.
ಕೇಂದ್ರದಿಂದ ಹೊಣೆಗೇಡಿತನ ಪ್ರದರ್ಶನ: ಕುಮಾರಸ್ವಾಮಿ ಟೀಕಾಪ್ರಹಾರ..
ದೂರವಾಣಿ ಮುಖಾಂತರ ಕೊರೊನಾ ವಾರಿಯರ್ಸ್‌ಗಳನ್ನು ಪ್ರೋತ್ಸಾಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್: ಕೊರೋನಾ ವಾರಿಯರ್ಸ್‌ಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಮಧ್ಯೆ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣರವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮಾಡಿದ ವೇಳೆ ಕೊರೋನಾ ವಾರಿಯರ್‌ಗಳಿಗೂ ಪ್ರೋತ್ಸಾಹಿಸಿದ ನುಡಿಗಳನ್ನಾಡಿದ್ದು ವಿಶೇಷವಾಗಿತ್ತು.
ಡಾ.ರೂಪೇಶ್ ಕೊರೊನಾ ವಾರಿಯರ್ಸ್‌ಗಳು ಪಾಲಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಿದರು. ಇದೇ ವೇಳೆ ಕೊರೋನಾ ವಾರಿಯರ್ಸ್‌ಗಳಿಗೆ, ಆರೋಗ್ಯ ರಕ್ಷ ಕವಚಗಳನ್ನು ಒಳಗೊಂಡ ವಸ್ತುಗಳು ಸೇರಿದಂತೆ ಕೊರೋನಾ ಸೋಂಕು ಪತ್ತೆ ಹಚ್ಚುವ ಸಲಕರಣೆಗಳನ್ನು ಆಯಾ ಗ್ರಾ.ಪಂ. ಕೊರೋನಾ ವಾರಿಯರ್ಸ್‌ಗಳಿಗೆ ಶಾಸಕ ಮತ್ತು ಮಾಜಿ ಸಂಸದರು ವಿತರಿಸಿದರು.