ಸಿಡಿ ಪ್ರಕರಣ ನ್ಯಾಯಾಂಗ ತನಿಖೆ ನಡೆಸಿ: ಬ್ರಿಜೇಶ್‌ ಕಾಳಪ್ಪ| ಕನ್ನಡಿಗರ ಬಗ್ಗೆ ಕೀಳು ಹೇಳಿಕೆ, ರಾಜ್ಯದ ವಿರುದ್ಧವೇ ಮಾತು| ಬೆಳಗಾವಿ ಪ್ರತ್ಯೇಕ ರಾಜ್ಯ ಎನ್ನುವ ಮೂಲಕ ಕರ್ನಾಟಕದ ಅಖಂಡತೆ ಪ್ರಶ್ನಿಸಿದ್ದ ರಮೇಶ್‌ ಜಾರಕಿಹೊಳಿ| 

ಬೆಂಗಳೂರು(ಮಾ.04): ರಮೇಶ್‌ ಜಾರಕಿಹೊಳಿ ಅವರ ರಾಸಲೀಲೆ ಸಿ.ಡಿ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ರಾಜ್ಯದ ವಿರುದ್ಧವೇ ಮಾತನಾಡಿರುವುದರಿಂದ ಅವರನ್ನು ಗಡಿಪಾರು ಮಾಡಬೇಕು ಎಂದು ಕಾಂಗ್ರೆಸ್‌ ಒತ್ತಾಯ ಮಾಡಿದೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ, ಸಿ.ಡಿ.ಯಲ್ಲಿ ರಮೇಶ್‌ ಜಾರಕಿಹೊಳಿ ಅವರು ಕನ್ನಡಿಗರ ಬಗ್ಗೆ ಕೀಳು ಹೇಳಿಕೆ ನೀಡಿದ್ದಾರೆ. ಜೊತೆಗೆ ಅಖಂಡತೆಗೆ ಧಕ್ಕೆ ತರುವಂತೆ ಮಾತನಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಈ ಹಿಂದೆ ಗುಜರಾತ್‌ನಲ್ಲಿ ಇಂತಹ ಪ್ರಕರಣ ನಡೆದಾಗ ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ಕ್ರಮ ಕೈಗೊಂಡಿದ್ದರು. ಅದೇ ರೀತಿ ರಮೇಶ್‌ ಜಾರಕಿಹೊಳಿ ವಿಚಾರದಲ್ಲೂ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನ್ಯೂಸ್ ಅವರ್; ರಮೇಶ್ ರಾಜೀನಾಮೆ, ಇನ್ನೂ ಮೂವರದ್ದು ಇದೆಯಂತೆ!

ಕೆಪಿಸಿಸಿ ವಕ್ತಾರ ಹಾಗೂ ಸುಪ್ರೀಂಕೋರ್ಟ್‌ ವಕೀಲ ಸಂಕೇತ್‌ ಏಣಗಿ ಮಾತನಾಡಿ, ರಾಜ್ಯದಲ್ಲೇ ಹುಟ್ಟಿ ಬೆಳೆದು ಎಲ್ಲ ಅಧಿಕಾರ ಅನುಭವಿಸಿರುವ ರಮೇಶ್‌ ಜಾರಕಿಹೊಳಿ ವಿಡಿಯೋದಲ್ಲಿ ಬೆಳಗಾವಿ ಪ್ರತ್ಯೇಕ ರಾಜ್ಯ ಎನ್ನುವ ಮೂಲಕ ಕರ್ನಾಟಕದ ಅಖಂಡತೆ ಪ್ರಶ್ನಿಸಿದ್ದಾರೆ. ಹೀಗಾಗಿ ಅವರನ್ನು ಗಡಿಪಾರು ಮಾಡಬೇಕು. ಸದ್ಯ ಹರಿದಾಡುತ್ತಿರುವ ವಿಡಿಯೋದಲ್ಲಿ ಒಬ್ಬರೇ ಮಹಿಳೆಯಿದ್ದಾರೋ ಅಥವಾ ಹಲವರು ಇದ್ದಾರೆಯೋ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.

ಸಂತ್ರಸ್ತೆ ದೂರು ದಾಖಲಿಸಬೇಕಿಲ್ಲ. ಅವರ ಪರವಾಗಿ ಬೇರೆಯವರು ದೂರು ದಾಖಲಿಸಲು ಅವಕಾಶವಿದೆ. ಆರೋಪಿ ಸ್ಥಾನದಲ್ಲಿ ಸಚಿವರಿದ್ದು, ಆರೋಪಿತರಿಗಿಂತಲೂ ಮಹಿಳೆಯ ವಾದಕ್ಕೆ ಮಾನ್ಯತೆ ಇದೆ. ಹಾಗಾಗಿ ಕೂಡಲೇ ತನಿಖೆ ನಡೆಸಬೇಕು. ಜತೆಗೆ ಸಂತ್ರಸ್ತೆ ಕುಟುಂಬಕ್ಕೆ ಹಾಗೂ ದಿನೇಶ್‌ ಕಲ್ಲಹಳ್ಳಿಯವರಿಗೆ ಪೊಲೀಸ್‌ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.