ಹಾಸನ (ಫೆ.06):  ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ.ಜೆ ಗೌಡರು ತಾವು ಕೋಟ್ಯಂತರ ರು. ಮೌಲ್ಯದ ಆಸ್ತಿ ಖರೀದಿಸಿ ಉಪ ನೋಂದಣಾಧಿಕಾರಿಗಳ ಮೇಲೆ ತಮ್ಮ ಒತ್ತಡ ಹಾಕಿ ಆಸ್ತಿಯ ಸರ್ಕಾರಿ ದರಕ್ಕಿಂತ ಕಡಿಮೆ ಮೌಲ್ಯಕ್ಕೆ ನೋಂದಣಿ ಮಾಡಿಸುವ ಮೂಲಕ ಮುದ್ರಾಂಕ ಶುಲ್ಕ ವಂಚಿಸಿರುವುದನ್ನು ಖಂಡಿಸಿ ಹಾಗೂ ಉಪ ನೋಂದಣಾಧಿಕಾರಿ ಮಧು ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಮಹೇಶ್‌ ನೇತೃತ್ವದಲ್ಲಿ ಶುಕ್ರವಾರ ನಗರದ ಉಪ ನೋಂದಣಾಧಿಕಾರಿ ಕಚೇರಿ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರೀತಂ ಜೆ.ಗೌಡ ಅವರು ನಗರದ ಸಕಲೇಶಪುರ ರಸ್ತೆಯಲ್ಲಿರುವ ರಾಜರತ್ನಂ ಮ್ಯಾಚ್‌ ಇಂಡಸ್ಟ್ರೀಸ್‌ನ ಐದು ಎಕರೆ ಜಾಗವನ್ನು ಖರೀದಿಸಿದ್ದಾರೆ. ಇದರ ಮಾರುಕಟ್ಟೆಬೆಲೆ .30 ಕೋಟಿಗಿಂತ ಹೆಚ್ಚು ಇದೆ. ನೋಂದಣಿ ಮಾಡಿಸುವಾಗ ನೋಂದಣಾಧಿಕಾರಿಗಳೇ ಅದರ ಸರ್ಕಾರಿ ದರವನ್ನು .15 ಕೋಟಿ ಎಂದು ನಮೂದಿಸಿದ್ದಾರೆ. ಆದಾಗ್ಯೂ .7.5 ಕೋಟಿಗೆ ನೋಂದಣಿ ಮಾಡಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಏನಿಲ್ಲವೆಂದರೂ .30ರಿಂದ .40 ಲಕ್ಷ ಮುದ್ರಾಂಕ ಶುಲ್ಕ ವಂಚಿಸಿದಂತಾಗಿದೆ ಎಂದು ದೂರಿದರು.

ಸಬ್‌ರಿಜಿಸ್ಟ್ರಾರ್‌ ಶಾಮೀಲು:

ಸರಕಾರ ನಿಗದಿ ಮಾಡಿದ ಬೆಲೆಗಿಂತ .7 ಕೋಟಿ ಕಡಿಮೆ ಬೆಲೆಗೆ ನೊಂದಾಯಿಸುವ ವಿಚಾರದಲ್ಲಿ ಇಲ್ಲಿನ ಸಬ್‌ ರಿಜಿಸ್ಟ್ರಾರ್‌ ಮಧು ಮತ್ತು ಇತರರು ಶಾಮೀಲಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ನೋಂದಣಿ ಮಾಡುವಾಗ ಯಾವ್ಯಾವ ಆಸ್ತಿಗೆ ಎಷ್ಟುಎಂದು ಸರ್ಕಾರ ನಿಗದಿ ಮಾಡಿರುವ ಶುಲ್ಕವನ್ನು ನಮೂದಿಸಿದರೆ ಮಾತ್ರ ಕಂಪ್ಯೂಟರ್‌ ತೆಗೆದುಕೊಳ್ಳುತ್ತದೆ. ಇಲ್ಲವಾದರೆ ಅಂತಹ ಆಸ್ತಿ ನೋಂದಣಿಯೇ ಆಗುವುದಿಲ್ಲ ಎಂದು ಸಮಾನ್ಯ ಜನರಿಗೆ ಹೇಳುವ ಇಲ್ಲಿನ ಅಧಿಕಾರಿಗಳು ಶಾಸಕರ ಆಸ್ತಿಯನ್ನು ನೋಂದಣಿ ಮಾಡುವಾಗ ಹೇಗೆ ಕಂಪ್ಯೂಟರ್‌ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಕಡಿಮೆ ಅಂಕಿಸಂಖ್ಯೆ ನಮೂದಿಸಿದರೂ ಹೇಗೆ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು.

JDS ಭದ್ರಕೋಟೆಯಲ್ಲೇ BJPಗೆ ಅಧಿಕಾರ : ನಮ್ಮ ಸ್ಥಿತಿಯೂ ಹಂಗೆ ಆಗುತ್ತೆ ಎಚ್ಚರ ಎಂದ ಶಾಸಕ ...

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಎಚ್‌.ಪಿ.ಪುಟ್ಟರಾಜು, ಶಂಕರರಾಜು, ನರಸಿಂಹ, ಆರಿಫ್‌, ಅಸ್ಲಾಂ ಪಾಷ, ಕಹಿಂ, ಚಂದ್ರಶೇಖರ್‌, ರಾಘವೇಂದ್ರ ಇತರರು ಪಾಲ್ಗೊಂಡಿದ್ದರು.

ಒಂದೇ ವರ್ಷದಲ್ಲೇ ನೂರಾರು ಕೋಟಿ ಆಸ್ತಿ: ಆರೋಪ

ಬಡವರಿಗೊಂದು, ಶ್ರೀಮಂತರಿಗೊಂದು ಮತ್ತು ರಾಜಕಾರಣಿಗೊಂದು ನ್ಯಾಯ ಇಲ್ಲ. ಇದು ಎಲ್ಲರಿಗೂ ಸಮನಾದ ನ್ಯಾಯ ಸಿಗಬೇಕು. ಶಾಸಕರು ಒಂದು ವರ್ಷದಲ್ಲೆ ನೂರಾರು ಕೋಟಿ ರು. ಆಸ್ತಿ ಮಾಡಿರುವುದಾದರು ಹೇಗೆ? ಶಸಕರು ಸರ್ಕಾರಕ್ಕೆ ನ್ಯಾಯಯುತವಾಗಿ ಕಟ್ಟಬೇಕಾದ ಹಣವನ್ನು ಸಂದಾಯ ಮಾಡಬೇಕು. ಸಬ್‌ ರಿಜಿಸ್ಟ್ರಾರ್‌ ಮಧು ಎನ್ನುವ ವ್ಯಕ್ತಿ ಶಾಸಕರ ಜೊತೆ ಶಾಮೀಲಾಗಿ ಹಣವನ್ನು ದೋಚಿದ್ದಾರೆ. ಶಾಸಕರು .30 ಕೋಟಿ ವೆಚ್ಚದ ಆಸ್ತಿ ಖರೀದಿ ಮಾಡಿದ್ದು, .15 ಕೋಟಿ ಎಂದು ಉಪ ನೋಂದಣಾಧಿಕಾರಿಗಳೇ ಬೆಲೆ ಕಟ್ಟಿದರೂ ಅದಕ್ಕಿಂತ ಅರ್ಧ ಬೆಲೆಗೆ ಹೇಗೆ ನೊಂದಣಿ ಮಾಡಿದರು? ಇಷ್ಟುಮೊತ್ತದ ಹಣಕ್ಕೆ ಶಾಸಕರು ಆದಾಯ ತೆರಿಗೆ ಪಾವತರಿಸಿದ್ದಾರೆಯೇ? ಶೇ.32 ಆದಾಯ ತೆರಿಗೆಯನ್ನು ಕಟ್ಟದೇ ಸರಕಾರಕ್ಕೆ ಮೋಸ ಮಾಡಿರುವುದಾಗಿ ದೂರಿದರು.