ಕೊಟ್ಟೂರು(ನ.07): ರಾಜ್ಯ ಆಡಳಿತ ಇದೆ ಎಂಬ ಕಾರಣಕ್ಕಾಗಿ ಹಿಂಬಾಗಿಲ ಮೂಲಕ ಸ್ಥಳೀಯ ಆಡಳಿತವನ್ನು ವಶಪಡಿಸಿಕೊಳ್ಳಲು ಹುನ್ನಾರ ನಡೆಸಿದ್ದ ಬಿಜೆಪಿಯವರಿಗೆ ತಕ್ಕ ಪಾಠವಾಗುವಂತೆ ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತ ಕಾಂಗ್ರೆಸ್‌ ಪಕ್ಷದ ತೆಕ್ಕೆಗೆ ಬಂದಿರುವುದು ನಿಜಕ್ಕೂ ಗಮನಾರ್ಹ ವಿಷಯ. ಇದಕ್ಕಾಗಿ ಎಲ್ಲಾ ಸದಸ್ಯರು ಮತ್ತು ಪಟ್ಟಣದ ನಾಗರಿಕರನ್ನು ಅಭಿನಂದಿಸುವೆ ಎಂದು ಶಾಸಕ ಎಸ್‌. ಭೀಮಾನಾಯ್ಕ ಹೇಳಿದ್ದಾರೆ. 

ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಜಿ.ಪಂ. ಸದಸ್ಯ ಎಂ.ಎಂ.ಜೆ ಹರ್ಷವರ್ಧನ್‌ ತೋಟದಲ್ಲಿ ಶುಕ್ರವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಅವರು ಕೊಟ್ಟೂರಿನ ಜನತೆ ನಿರಂತರವಾಗಿ ಎಂ.ಎಂ.ಜೆ ಹರ್ಷವರ್ಧನ ಮುಖಂಡತ್ವಕ್ಕೆ ಬೆಂಬಲ ನೀಡಿ ಸತತವಾಗಿ ಅವರ ಬಳಗದವರೇ ಅಧಿಕಾರ ಹೊಂದುವಂತೆ ಆಶೀರ್ವದಿಸುತ್ತಾ ಬಂದಿದ್ದಾರೆ. ಜನತೆ ಈ ಬಗೆಯಲ್ಲಿ ಕಾಂಗ್ರೆಸ್‌ನ್ನು ಬೆಂಬಲಿಸುತ್ತಿದ್ದರೂ ಹಿಂಬಾಗಿಲ ಮೂಲಕ ಅಧಿಕಾರವನ್ನು ಪಡೆಯುವ ಪ್ರಯತ್ನವನ್ನು ಪುನಃ ಪುನಃ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ ಎಂದು ಅವರು ಟೀಕಿಸಿದರು. ಹೇಗಾದರೂ ಮಾಡಿ ಆಡಳಿತವನ್ನು ತಮ್ಮ ಪಕ್ಷಕ್ಕೆ ಪಡೆಯಬೇಕೆಂಬ ಆಸೆ ಹೊತ್ತು ಮರಿಯಮ್ಮನಹಳ್ಳಿ ಪ.ಪಂ. ಮೂವರು ಕಾಂಗ್ರೆಸ್‌ ಸದಸ್ಯರಿಂದ ಕ್ರಾಸ್‌ ವೋಟಿಂಗ್‌ ಮಾಡಿಸಿದ್ದಾರೆ ಎಂದು ಅವರು ಆರೋಪಿಸಿದರು. ಬಿಜೆಪಿಗರ ಆಸೆ ಆಮಿಷಗಳಿಗೆ ಒಳಗಾಗಿ ಕಾಂಗ್ರೆಸ್‌ಗೆ ದ್ರೋಹ ಬಗೆದ ಮೂವರು ಕಾಂಗ್ರೆಸ್‌ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲು ಮುಂದಾಗುವೆ ಎಂದು ಅವರು ಹೇಳಿದರು.

ವಿಜಯೇಂದ್ರ ಹೋದ ಕಡೆ ಸೋಲೇ ಇಲ್ಲ: ಬೈ ಎಲೆಕ್ಷನ್‌ ಭವಿಷ್ಯ ನುಡಿದ ಸಚಿವ

ಮರಿಯಮ್ಮನಹಳ್ಳಿ ಮತ್ತಿತರ ಕಡೆಗಳಲ್ಲಿ ಪ್ರಯತ್ನ ನಡೆಸಿದಂತೆ ಕೊಟ್ಟೂರಿನಲ್ಲಿ ಪ್ರಯತ್ನ ನಡೆಸಲು ಮುಂದಾದರು. ಆದರೆ ಕಾಂಗ್ರೆಸ್‌ನ ಯಾವೊಬ್ಬ ಸದಸ್ಯ ಅವರ ಆಶಯಗಳಿಗೆ ಸ್ಪಂದಿಸಲಿಲ್ಲ. ನವೆಂಬರ್‌ 7ರಂದು ನಡೆಯಲಿರುವ ಹಗರಿಬೊಮ್ಮನಹಳ್ಳಿ ಪುರಸಭಾ ಚುನಾವಣೆಯಲ್ಲಿ ಅಧಿಕಾರ ಕಾಂಗ್ರೆಸ್‌ ಪಕ್ಷಕ್ಕೆ ದೊರಕುವುದು ನಿಶ್ಚಿತ ಎಂದು ಅವರು ಹೇಳಿದರು. ಜಿ.ಪಂ. ಸದಸ್ಯ ಎಂ.ಎಂ.ಜೆ ಹರ್ಷವರ್ಧನ, ಕೊಟ್ಟೂರು ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆ ಭಾರತಿ ಸುಧಾಕರ್‌ಗೌಡ, ಉಪಾಧ್ಯಕ್ಷ ಶಫಿ, ಸದಸ್ಯರಾದ ತೋಟದ ರಾಮಣ್ಣ, ಜಗದೀಶ ಮತ್ತಿತರರು ಇದ್ದರು.