ಗಲಭೆ ಸ್ಥಳಕ್ಕೆ ನಾವಾಗಿಯೇ ಹೋಗಿರಲಿಲ್ಲ: ಶಾಸಕ ರಿಜ್ವಾನ್‌ ಅರ್ಷದ್‌| ಹಿರಿಯ ಪೊಲೀಸ್‌ ಅಧಿಕಾರಿಗಳ ಮನವಿ ಮೇರೆಗೆ ಸ್ಥಳಕ್ಕೆ ಹೋಗಿದ್ದೇವು| ಎನ್‌ಐಎಗೆ ವಾಸ್ತವ ಸ್ಥಿತಿ ಬಗ್ಗೆ ಮಾಹಿತಿ ಕೇಳಿತ್ತು ಅಷ್ಟೇ ಎಂದ ಅರ್ಷದ್‌| 

ಬೆಂಗಳೂರು(ಅ.16): ಡಿ.ಜೆ.ಹಳ್ಳಿ ಗಲಭೆ ಸಂಬಂಧ ಎನ್‌ಐಎ ಅಧಿಕಾರಿಗಳು ನನ್ನನ್ನು ಕರೆದಿದ್ದು ಅಚ್ಚರಿ ಮೂಡಿಸಿದೆ. ಡಿ.ಜೆ.ಹಳ್ಳಿ ಗಲಭೆ ಸ್ಥಳಕ್ಕೆ ಭೇಟಿ ನೀಡಿದ್ದೆವು ಎಂಬ ಕಾರಣಕ್ಕೆ ಕರೆದಿದ್ದರು. ಆದರೆ, ನಾವು ಹಿರಿಯ ಪೊಲೀಸ್‌ ಅಧಿಕಾರಿಗಳು ಶಾಂತಿ ಕಾಪಾಡಲು ನೆರವಾಗುವಂತೆ ಆಹ್ವಾನಿಸಿದ್ದರಿಂದ ಹೋಗಿದ್ದೆವು ಎಂದು ಶಿವಾಜಿನಗರ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ಹೇಳಿದ್ದಾರೆ.

ಮಾಧ್ಯಮಗಳು ನಮ್ಮ ವಿರುದ್ಧ ತನಿಖೆ ನಡೆಸುತ್ತಿರುವುದಾಗಿ ಸುಳ್ಳು ವರದಿ ಮಾಡುತ್ತಿವೆ. ವಾಸ್ತವವಾಗಿ ಘಟನಾ ಸ್ಥಳದಲ್ಲಿ ಏನಾಯಿತು ಎಂಬುದರ ಬಗ್ಗೆ ನಮ್ಮಿಂದ ಮಾಹಿತಿ ಪಡೆಯಲಷ್ಟೇ ಎನ್‌ಐಎ ಅಧಿಕಾರಿಗಳು ಕರೆದಿದ್ದರು. ಈ ಬಗ್ಗೆ ಎಲ್ಲಾ ಮಾಹಿತಿಯನ್ನೂ ಒದಗಿಸಿದ್ದೇವೆ. ಅಂತಿಮವಾಗಿ ನಿಷ್ಪಕ್ಷಪಾತ ಹಾಗೂ ಪಕ್ಷಾತೀತವಾಗಿ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಒತ್ತಾಯ ಎಂದರು.

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಟ್ವಿಸ್ಟ್‌: ಕಾಂಗ್ರೆಸ್‌ ಶಾಸಕರಿಬ್ಬರಿಗೆ NIA ಬಿಗ್‌ ಶಾಕ್‌..!

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಐಎ ಅಧಿಕಾರಿಗಳು ಸ್ಥಳಕ್ಕೆ ನೀವು ಭೇಟಿ ನೀಡಿದಾಗ ವಾತಾವರಣ ಹೇಗಿತ್ತು ಎಂದು ಪ್ರಶ್ನಿಸಿದರು. ಅದನ್ನು ಹೇಳಿದರೆ ತಮ್ಮ ತನಿಖೆಗೆ ಅನುಕೂಲವಾಗಲಿದೆ ಎಂದು ಹೇಳಿದರು. ಹೀಗಾಗಿ ನಮಗೆ ಗೊತ್ತಿರುವ ಮಾಹಿತಿಯನ್ನು ನಾನು ಹಾಗೂ ಮಾಜಿ ಸಚಿವ ಜಮೀರ್‌ ಅಹಮದ್‌ಖಾನ್‌ ತಿಳಿಸಿದ್ದೇವೆ. ಇದನ್ನು ಹೊರತು ಪಡಿಸಿ ಬೇರೇನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಎನ್‌ಐಎ ನಮ್ಮನ್ನು ಕರೆದಿರುವುದಕ್ಕೆ ಅಚ್ಚರಿಯಾಗಿದೆ. ಏಕೆಂದರೆ, ಘಟನೆಯ ಸಂಧರ್ಭದಲ್ಲಿ ನಾವು ಅಲ್ಲಿಗೆ ಹೋಗಿರಲಿಲ್ಲ. ಬಳಿಕ ಹಿರಿಯ ಪೊಲೀಸ್‌ ಅಧಿಕಾರಿಗಳು ಕರೆದಿದ್ದರಿಂದ ಹೋದೆವು. ಇಲ್ಲದಿದ್ದರೆ ನಾವು ಹೋಗುತ್ತಲೇ ಇರಲಿಲ್ಲ. ಈ ಬಗ್ಗೆ ಎಲ್ಲವನ್ನೂ ತಿಳಿಸಿದ್ದೇವೆ. ತನಿಖೆ ನಡೆಯುತ್ತಿರುವ ಹಂತದಲ್ಲಿ ಏನೂ ಹೇಳಲು ಆಗುವುದಿಲ್ಲ. ತನಿಖೆ ಎಲ್ಲಿಗೆ ಹೋಗುತ್ತದೆ ಎಂಬುದನ್ನು ನೋಡಬೇಕು. ಒಟ್ಟಿನಲ್ಲಿ ಸೂಕ್ತ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ನಿರಪರಾಧಿಗಳನ್ನು ಬಿಡಬೇಕು ಎಂದರು.