ಬೆಳಗಾವಿ, (ಫೆ.14): ಇನ್ಮುಂದೆ ಹುಟ್ಟಿದ ದಿನವಾದ ಫೆ.14ರಂದು ನನ್ನ ಬರ್ತ್​ಡೇ ಆಚರಣೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ಮೇ 12ರಂದು ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತೇನೆ ಎಂದು ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿರುವ ಶಾಸಕಿ ಹೆಬ್ಬಾಳ್ಕರ್ 2018, ಮೇ 12ರ ಚುನಾವಣೆಯ ದಿನಂದಂದು ನನಗೆ ನೀವೆಲ್ಲ ಮತದಾನ ಮಾಡಿ ಪ್ರಚಂಡ ಗೆಲವು ದಾಖಲಿಸಿಕೊಟ್ಟಿದ್ದೀರಾ, ಆ ದಿನವನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. 

ಹೀಗಾಗಿ ಇನ್ನು ಮುಂದೆ ಮೇ 12 ರಂದೇ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ಇದೇ ಮೊದಲ ಬಾರಿಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. 

ಈ ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆಯ ಮತದಾನದ ದಿನವನ್ನು ಹುಟ್ಟಿದ ದಿನ ಎಂದು ಘೋಷಣೆ ಮಾಡಿಕೊಂಡಿದ್ದಾರೆ. 

ಮೇ.12ನ್ನು ಮತದಾರರು ನೀಡಿದ ಮರುಜನ್ಮ ಎಂದು ಭಾವಿಸಿ, ಅವತ್ತು ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ. 

ಹಾಗೇ ಇಂದು ತಮ್ಮ ಹುಟ್ಟುಹಬ್ಬ ಆಚರಣೆ ಮಾಡದಂತೆ ಬೆಂಬಲಿಗರ ಬಳಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.