ಪಕ್ಷದ್ರೋಹಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ|ಸರ್ಕಾರ ಬದಲಾವಣೆಗೆ ಕಾರಣವಾಗುವ ಉಪಚುನಾವಣೆ- ಎಚ್‌.ಕೆ. ಪಾಟೀಲ್‌| ಬಿಜೆಪಿ ಆಡಳಿತ ಡಿ. 10ಕ್ಕೆ ಮುಗಿಯಲಿದೆ| ಕುಮಾರಸ್ವಾಮಿ ಜಾತ್ಯತೀಯ ಪಕ್ಷದ ಜತೆ ಇರುವ ನಂಬಿಕೆ ಇದೆ| ಉಪಚುನಾವಣೆಯ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇರುವುದಿಲ್ಲ|

ಹಾವೇರಿ(ನ.23): ಈ ಉಪಚುನಾವಣೆ ಪಕ್ಷದ್ರೋಹಿಗಳಿಗೆ, ರಾಜಕಾರಣದಲ್ಲಿ ದುರ್ವರ್ತನೆ ತೋರಿದವರಿಗೆ ತಕ್ಕ ಪಾಠ ಕಲಿಸಲಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 10-12 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಜಿಲ್ಲೆಯ ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಉಸ್ತುವಾರಿ, ಶಾಸಕ ಎಚ್‌.ಕೆ. ಪಾಟೀಲ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉಪಚುನಾವಣೆ ಸರ್ಕಾರ ಬದಲಾವಣೆಗೆ ಕಾರಣವಾಗಲಿದೆ. ತನ್ಮೂಲಕ ಈ ಉಪಚುನಾವಣೆ ರಾಜ್ಯ ರಾಜಕೀಯದ ಭವಿಷ್ಯದ ದಿಕ್ಸೂಚಿಯಾಗುವ ಜತೆಗೆ ಮಹತ್ತರ ಬದಲಾವಣೆಗೂ ಕಾರಣವಾಗಲಿದೆ. ಉಪಚುನಾವಣೆ ಆನಂತರ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉಪಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಸಹ ಗೆಲ್ಲುವುದಿಲ್ಲ. ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ. ಬಿಜೆಪಿ ಸರ್ಕಾರದ ಅವಧಿ ಡಿ. 10ಕ್ಕೆ ಮುಗಿಯಲಿದ್ದು, ಎಲ್ಲರೂ ನೈತಿಕ ಹೊಣೆಹೊತ್ತು ಕೆಳಗಿಳಿಯುವ ಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೆ ಬಿಜೆಪಿಯವರು ಆಪರೇಷನ್‌ ಕಮಲ ಮಾಡಲು ಹೊರಟರೆ ಜನ ಸಹಿಸಿಕೊಳ್ಳುವುದಿಲ್ಲ ಎಂದರು.

ಕಾಂಗ್ರೆಸ್‌ ಸರ್ಕಾರ ಹಾಗೂ ಹಿಂದಿನ ಮೈತ್ರಿ ಸರ್ಕಾರದ ಸಾಧನೆ, ಪಕ್ಷದ ನೀತಿ, ಮೌಲ್ಯಗಳು, ಅಭ್ಯರ್ಥಿಗಳ ವ್ಯಕ್ತಿತ್ವದ ಆಧಾರದಲ್ಲಿ ಕಾಂಗ್ರೆಸ್‌ ಉಪಚುನಾವಣೆ ಎದುರಿಸಲಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಸೋನಿಯಾ ಗಾಂಧಿ, ಹೈಕಮಾಂಡ್‌ಗೆ ತಲೆಬಾಗುತ್ತಾರೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ವಿದ್ಯಮಾನ ನಡೆದರೂ ಜಾತ್ಯತೀತ ಪಕ್ಷದ ಜತೆಗೆ ಇರುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಶಾಸಕರ ಅನರ್ಹತೆ ಪ್ರಕರಣಕ್ಕೆ ಸುಪ್ರಿಂ ಕೋರ್ಟ್‌ ಹಾವೇರಿ ನ್ಯಾಯದ ತೀರ್ಪು ನೀಡಿದೆ. ಸ್ಪೀಕರ್‌ ನೀಡಿರುವ ಅನರ್ಹತೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ಎತ್ತಿಹಿಡಿಯಬೇಕು ಎಂಬುದು ನಮ್ಮ ನಿರೀಕ್ಷೆ ಆಗಿತ್ತು. ನ್ಯಾಯಾಲಯ ಶಾಸಕರಿಗೆ ಅನರ್ಹತೆಯ ಹಣೆಪಟ್ಟಿಹಚ್ಚಿ ಪ್ರಜಾಪ್ರಭುತ್ವದ ದೊಡ್ಡ ನ್ಯಾಯಾಲಯವಾದ ಜನತಾ ನ್ಯಾಯಾಲಯಕ್ಕೆ ಬಿಟ್ಟಿರುವುದು ಸ್ವಾಗತಾರ್ಹ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಡಿ.ಆರ್‌. ಪಾಟೀಲ, ಸಂಜೀವಕುಮಾರ ನೀರಲಗಿ, ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಹಿರೇಮಠ ಇತರರು ಇದ್ದರು.

ಜೆಡಿಎಸ್‌ ಬೆಂಬಲ

ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿ ಇಲ್ಲದೇ ಇರುವುದರಿಂದ ಆ ಕ್ಷೇತ್ರದಲ್ಲಿ ಜೆಡಿಎಸ್‌ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಶಕ್ತಿ ಬಂದಿದ್ದು ಬೆಂಬಲ ಘೋಷಿಸಿದ ಜೆಡಿಎಸ್‌ಗೆ ಧನ್ಯವಾದ ಸಲ್ಲಿಸುವುದಾಗಿ ಎಚ್‌.ಕೆ. ಪಾಟೀಲ ಹೇಳಿದರು.

ನ. 27ಕ್ಕೆ ಸಿದ್ದರಾಮಯ್ಯ ಭೇಟಿ

ಹಿರೇಕೆರೂರು ಕ್ಷೇತ್ರಕ್ಕೆ ನ. 27ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಅಂದು ಪಕ್ಷದ ರಾಜ್ಯಾಧ್ಯಕ್ಷರಾದಿಯಾಗಿ ಎಲ್ಲ ಮುಖಂಡರು ಆಗಮಿಸಲಿದ್ದಾರೆ. ಪಕ್ಷದ ಅಭ್ಯರ್ಥಿ ಬಿ.ಎಚ್‌. ಬನ್ನಿಕೋಡ ರೈತ ಹೋರಾಟಗಾರರಾಗಿದ್ದು ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಉಪಚುನಾವಣೆ ನಿರ್ವಹಣೆಗಾಗಿ ಹಿರೇಕೆರೂರು ಕ್ಷೇತ್ರದಲ್ಲಿ 34 ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಎಚ್‌.ಕೆ. ಪಾಟೀಲ ತಿಳಿಸಿದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.