ಜಮಖಂಡಿ(ನ.08): ರಾಜ್ಯ ಸರ್ಕಾರ ಐಸಿಯುನದಲ್ಲಿದೆ. ಯಾವುದೇ ಇಲಾಖೆಗೆ ಸೂಕ್ತ ಹಣ ಬಿಡುಗಡೆ ಮಾಡುತ್ತಿಲ್ಲ, ಕಾಮಗಾರಿಗಳು ಅಪೂರ್ಣಗೊಂಡಿವೆ. ಜನತೆ ಸರ್ಕಾರವನ್ನು ಶಪಿಸುತ್ತಿದ್ದಾರೆಂದು ಶಾಸಕ ಆನಂದ ನ್ಯಾಮಗೌಡ ಆರೋಪಿಸಿದ್ದಾರೆ. 

ಇಲ್ಲಿನ ತಾಲೂಕು ಪಂಚಾಯತಿ ಸಭಾಭವನದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಇಲಾಖೆವಾರು ತ್ರೈಮಾಸಿಕ ಸಭೆಯಲ್ಲಿ ಕೆಲವು ಇಲಾಖೆಗಳ ಅಧಿಕಾರಿಗಳು ಕಾಮಗಾರಿಗೆ ಹಣ ಬಿಡುಗಡೆಗೊಂಡಿಲ್ಲ ಎಂದು ಹೇಳಿದ್ದನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಾಲೂಕಿನ ಭೂಸೇನಾ ನಿಗಮ ನಡೆಸುವ ಕಾಮಗಾರಿಗಳಿಗೆ ಹಣದ ತೊಂದರೆ ಉಂಟಾಗಿದ್ದು, ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆಂದು ನಿಗಮದ ಅಧಿಕಾರಿ ಎಸ್‌.ಆರ್‌.ಗಾಣಗೇರ ಹೇಳಿದರು. ತಾಲೂಕಿನಲ್ಲಿ 13 ಸಮುದಾಯ ಭವನಗಳ ಕಟ್ಟಡ ಕೈಗೆತ್ತಿಕೊಂಡಿದ್ದು, ಮೂರು ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದವುಗಳನ್ನು ಹಂತ-ಹಂತವಾಗಿ ನಿರ್ಮಿಸಲಾಗುತ್ತದೆ ಎಂದು ಶಾಸಕರ ಪ್ರಶ್ನೆಗೆ ಉತ್ತರಿಸಿದರು. ಆಗ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಪ್ರತಿಯೊಂದಕ್ಕೂ ಕೋವಿಡ್‌ ಕಾರಣ ಹೇಳುವ ರಾಜ್ಯ ಸರ್ಕಾರ ಸದ್ಯ ಐಸಿಯುನಲ್ಲಿದ್ದಂತೆ ಕಾರ್ಯನಿರ್ವಹಿಸುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ ಎಂದರು.

ನಗರದ ಕೆಟ್ಟೆಕೆರೆಯಲ್ಲಿ ಭೂತ್‌ ಬಂಗ್ಲೋ, ಕ್ಯಾಂಟೀನ್‌, ಪುಟಾಣಿ ಮಕ್ಕಳ ರೈಲು ಸಂಚಾರ ಮಾರ್ಗ ಹಾಗೂ ಸಾವಳಗಿ ಡಾ.ಬಿ.ಆರ್‌.ಅಂಬೇಡ್ಕರ ಸಮುದಾಯ, ಮರೇಗುದ್ದಿ, ಬುದ್ನಿ ಗ್ರಾಮಗಳ ಸಮುದಾಯ ಭವನಗಳು ಸದ್ಯ ಪ್ರಗತಿಯಲ್ಲಿವೆ ಎಂದರು.

ಅಪ್ಪ, ನಾನು ಇಬ್ಬರೂ ಬ್ರಾಹ್ಮಣರನ್ನ ಸೋಲಿಸಿದ್ದೇವೆ: ಜಮಖಂಡಿ MLA

ಆಕ್ರೋಶ:

ನೆರೆ ಪ್ರವಾಹ ಪ್ರದೇಶಗಳಲ್ಲಿ ಬಿದ್ದ ಮನೆಗಳ ಸರ್ವೇ ಕಾರ್ಯದಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಅಲ್ಲಿನ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಒಂದು ಭಾಗ ಮನೆ ಬಿದ್ದರೂ ಅವುಗಳನ್ನು ಪೂರ್ಣ ಬಿದ್ದ ಮನೆ ಎಂದು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದರೂ ಅಧಿಕಾರಿಗಳು ತಮ್ಮ ಇಚ್ಛೆಯಂತೆ ಸರ್ವೇ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಮನೆ ಬಿದ್ದವರಿಗೆ ಸೂಕ್ತ ಪರಿಹಾರ ಸಿಗುವಂತೆ ಸರ್ವೇ ನಡೆಸಬೇಕೆಂದು ಸೂಚಿಸಿದರು.

ಮಳೆಯಿಂದಾಗಿ ತಾಲೂಕಿನಲ್ಲಿ ಒಟ್ಟು 2307 ಹೆಕ್ಟೇರ್‌ ವಣಿಜ್ಯ ಬೆಳೆಗಳು ಹಾನಿಗೊಂಡಿದ್ದು, ಅವುಗಳಲ್ಲಿ ದ್ರಾಕ್ಷಿ, ದಾಳಿಂಬೆ, ಬಾಳೆ ಬೆಳೆದ 775 ಫಲಾನುಭವಿಗಳ ಯಾದಿ ಸರ್ಕಾರಕ್ಕೆ ಕಳಿಸಿದ್ದು, ಅದರಲ್ಲಿ ಕೇವಲ 25 ರೈತರಿಗೆ ಪರಿಹಾರಧನ ಬಂದಿದೆ. ತಾಲೂಕಿನಲ್ಲಿ ಈರುಳ್ಳಿ ಬೆಳೆದ ಎಲ್ಲ ರೈತರ ಜಮೀನಿನ ಬಗ್ಗೆ ಮಾಹಿತಿ ಕಳಿಸಲಾಗಿದೆಂದು ತೋಟಗಾರಿಕೆ ಉಪನಿರ್ದೇಶಕ ಅಭಯಕುಮಾರ ಸಭೆಗೆ ವಿವರಿಸಿದರು.

ತಾಲೂಕಿನಲ್ಲಿ 11 ಜನ ಸರ್ಕಾರಿ 6 ಜನ ಖಾಸಗಿ ಸರ್ವೇಯರ್‌ಗಳಿದ್ದು, ಅವರೆಲ್ಲರೂ ಪ್ರತಿ ತಿಂಗಳು 23 ಪ್ರಕರಣ ಸರ್ವೇ ಮಾಡುತ್ತಿದ್ದು ಒಟ್ಟು 1712 ಪ್ರಕರಣ ಬಾಕಿ ಉಳಿದಿದ್ದು, ಪ್ರತಿ ತಿಂಗಳು ಸುಮಾರು 350ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತವೆಂದು ಭೂ ಇಲಾಖೆ ಅಧಿಕಾರಿ ಚಲವಾದಿ ತಿಳಿಸಿದರು.

ತಾಲೂಕಿನಲ್ಲಿ 3,42,670 ಕುಟುಂಬಗಳಿದ್ದು, ಒಟ್ಟು 1.25 ಲಕ್ಷ ರೇಶನ್‌ ಕಾರ್ಡ್‌ದರಲ್ಲಿ 11.26 ಲಕ್ಷ ಬಿಪಿಎಲ್‌, 17 ಸಾವಿರ ಎಪಿಎಲ್‌, 6708 ಅಂತ್ಯೋದಯ ಕಾರ್ಡ್‌ಗಳಿಗೆ ಪ್ರತಿ ತಿಂಗಳು ಕಾಳು-ಕಡಿ ಸರಿಯಾಗಿ ವಿತರಣೆಯಾಗುತ್ತಿವೆಂದು ಆಹಾರ ವಿಭಾಗದ ಅಧಿಕಾರಿ ದತ್ತಾತ್ರೇಯ ದೇಶಪಾಂಡೆ ಸಭೆಗೆ ವಿವರಿಸಿದರು. ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ, ಸಾರಿಗೆ ಇಲಾಖೆ ಸೇರಿದಂತೆ 13 ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ತ್ರೈಮಾಸಿಕ ಅಧಿಕಾರಿಗಳ ಸಭೆಗೆ ಬಹುತೇಕ ಇಲಾಖೆ ಅಧಿಕಾರಿಗಲು ಗೈರ ಆಗಿದ್ದು, ಅವರ ವಿರುದ್ಧ ನೋಟಿಸ್‌ ನೀಡುವಂತೆ ಶಾಸಕ ಆನಂದ ನ್ಯಾಮಗೌಡ ಸೂಚಿಸಿದರು. ತಾಪಂ ಅಧ್ಯಕ್ಷೆ ಸುಜಾತಾ ಕಲ್ಯಾಣಿ, ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ತಹಸೀಲ್ದಾರ್‌ ಬಿ.ಆರ್‌. ಇಂಗಳೆ, ತಾಪಂ ಇಒ ಅಭೀದ ಗದ್ಯಾಳ ವೇದಿಕೆಯಲ್ಲಿದ್ದರು.