ಮಂಡ್ಯ (ಅ.27): ನಗರಸಭೆಯಲ್ಲಿ ಬಹುಮತ ಹೊಂದಿರುವ ಜೆಡಿಎಸ್‌ ಪಕ್ಷದ ಸದಸ್ಯರಲ್ಲೇ ಒಡಕು ಮೂಡಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಕಾಂಗ್ರೆಸ್‌ ತೆರೆ-ಮರೆಯಲ್ಲಿ ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದೆ.

ಹತ್ತು ಮಂದಿ ಸದಸ್ಯರನ್ನು ಒಳಗೊಂಡಿರುವ ಕಾಂಗ್ರೆಸ್‌ 5 ಮಂದಿ ಪಕ್ಷೇತರರು, 2 ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಅತೃಪ್ತ ಜೆಡಿಎಸ್‌ ಸದಸ್ಯರನ್ನು ಸೆಳೆದುಕೊಂಡು ಅಧಿಕಾರ ಹಿಡಿಯಲು ಕಸರತ್ತು ನಡೆಸಿದೆ.

ನಗರಸಭೆ 2ನೇ ವಾರ್ಡ್‌ನ ಮಂಜುಳಾ, 3ನೇ ವಾರ್ಡ್‌ನ ಜಾಕೀರ್‌ ಈಗಾಗಲೇ ಕಾಂಗ್ರೆಸ್‌ ಜೊತೆ ಸೇರಿಕೊಂಡಿದ್ದಾರೆ. 34ನೇ ವಾರ್ಡ್‌ನ ಪೂರ್ಣಾನಂದ ಅವರನ್ನು ಪಕ್ಷಕ್ಕೆ ಸೆಳೆಯುವ ಜವಾಬ್ದಾರಿಯನ್ನು ಮಾಜಿ ಸಚಿವ ಎಂ.ಎಸ್‌.ಆತ್ಮಾನಂದರವರಿಗೆ ವಹಿಸಲಾಗಿದೆ. 28ನೇ ವಾರ್ಡ್‌ನ ಸೌಭಾಗ್ಯ ಹಾಗೂ 35ನೇ ವಾರ್ಡ್‌ನ ಜಿ.ಎನ್‌.ಲಲಿತಾ ಅವರೂ ಕಾಂಗ್ರೆಸ್‌ ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ಯುವ ಮುಖಂಡ ರವಿಕುಮಾರ್‌ ಗಣಿಗ   ತಿಳಿಸಿದರು.

'ಹಿಂದಿನ ಸರ್ಕಾರ ಬೀಳಿಸೋದ್ರಲ್ಲಿ ನಾನು ವಿಲನ್ ಅಲ್ಲ, ನನ್ನದೇನಿದ್ರೂ ಹೀರೋ ಪಾತ್ರ' ...

ಬಿಜೆಪಿ ಸದಸ್ಯರಾದ 11ನೇ ವಾರ್ಡ್‌ನ ಎಂ.ಪಿ.ಅರುಣ್‌ಕುಮಾರ್‌ ಹಾಗೂ 24ನೇ ವಾರ್ಡ್‌ನ ಚಿಕ್ಕತಾಯಮ್ಮ ಅವರೂ ಸಹ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಾಥ್‌ ನೀಡುವುದಾಗಿ ಭರವಸೆ ನೀಡಿರುವುದಾಗಿ ಹೇಳಿದರು.

ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ 20ನೇ ವಾರ್ಡ್‌ನ ಹೆಚ್‌.ಎಸ್‌.ಮಂಜು, 19ನೇ ವಾರ್ಡ್‌ನ ಮಂಜುಳಾ ಉದಯಶಂಕರ್‌, 1ನೇ ವಾರ್ಡ್‌ನ ನಾಗೇಶ್‌, 6ನೇ ವಾರ್ಡ್‌ನ ಟಿ.ರವಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇದೆ. ಇದರಲ್ಲಿ ಅತೃಪ್ತರನ್ನು ಸೆಳೆದುಕೊಂಡರೆ ಕಾಂಗ್ರೆಸ್‌ ಅಧಿಕಾರ ಹಿಡಿಯಬಹುದು ಎನ್ನುವುದು ಕೈ ಪಾಳಯದವರ ಲೆಕ್ಕಾಚಾರವಾಗಿದೆ.