Karnataka Politics : ‘ಕೈ’ ಜಾರಿದ ಸ್ಥಾನ ತೆನೆ ಪಾಲು : ಜೆಡಿಎಸ್‌ಗೆ ಬಿಜೆಪಿ ಸಂಸದರ ಬಲ
- ‘ಕೈ’ ಜಾರಿದ ಸ್ಥಾನ ತೆನೆ ಪಾಲು : ಜೆಡಿಎಸ್‌ಗೆ ಬಿಜೆಪಿ ಸಂಸದರ ಬಲ
- ಕುತೂಹಲ ಕೆರಳಿಸಿದ್ದ ಗೌರಿಬಿದನೂರು ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ರೂಪಾ ಅನಂತರಾಜು ಆಯ್ಕೆ
ಗೌರಿಬಿದನೂರು (ಜ.04) : ಹಲವು ದಶಕಗಳ ಕಾಲ ಕಾಂಗ್ರೆಸ್ (Congress) ವಶದಲ್ಲಿ ಇಲ್ಲಿಯ ನಗರಸಭೆ ಆಡಳಿತ ಸೋಮವಾರ ಜೆಡಿಎಸ್ ಪಾಲಾಗಿದೆ. ತೀವ್ರ ಕುತೂಹಲದ ಜೊತೆಗೆ ಕಾಂಗ್ರೆಸ್ ಹಾಗೂ ವಿರೋಧಿ ಬಣಗಳ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಪುಟ್ಟಸ್ವಾಮಿಗೌಡ ಬಣದ ಜೆಡಿಎಸ್ ಸದಸ್ಯೆ ರೂಪಾ ಅನಂತರಾಜು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ (President) ಕಾಂಗ್ರೆಸ್‌ನಿಂದ ರಾಜೇಶ್ವರಿ ಮೈಲಾರಿ ಹಾಗೂ ಪುಟ್ಟಸ್ವಾಮಿಗೌಡ ಬಣದಿಂದ ರೂಪಾ ಅನಂತರಾಜು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 16 ಮತ ಬಿದ್ದರೆ ವಿರೋಧಿ ಬಣವಾದ ಪುಟ್ಟಸ್ವಾಮಿಗೌಡ ಬಣಕ್ಕೆ 17 ಮತ ದೊರೆತು ರೂಪಾ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ.
ಬಣಗಳ ಬಲಾಬಲ: ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ನ (Congress) ಒಟ್ಟು 15 ಸದಸ್ಯರು ಹಾಗೂ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸೇರಿ 16 ಮತಗಳಿದ್ದರೆ ಇತ್ತ ಪುಟ್ಟಸ್ವಾಮಿಗೌಡ ಬಣದಲ್ಲಿ 6, ಜೆಡಿಎಸ್ 6, ಬಿಜೆಪಿ 3, ಪಕ್ಷೇತರ 1 ಹಾಗೂ ಸಂಸದರ ಮತ ಸೇರಿ ಒಟ್ಟು 17 ಮತಗಳಿದ್ದವು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 16, ಪುಟ್ಟಸ್ವಾಮಿಗೌಡ ಬಣದ ಅಭ್ಯರ್ಥಿಗೆ ಒಟ್ಟು 17 ಮತ ಬಿದ್ದು 1 ಮತದ ಅಂತರದಿಂದ ರೂಪಾ ಅಧ್ಯಕ್ಷೆಯಾಗಿ ಗೆಲುವು ಸಾಧಿಸಿದರು (Win) . ಆ ಮೂಲಕ ಸ್ಥಳೀಯ ಕಾಂಗ್ರೆಸ್‌ನ ಹಲವು ದಶಕಗಳ ಆಡಳಿತಕ್ಕೆ ಜೆಡಿಎಸ್, ಬಿಜೆಪಿ, ಪಕ್ಷೇತರರು ಹಾಗೂ ಕೆ.ಎಚ್.ಪುಟ್ಟಸ್ವಾಮಿಗೌಡ ಬಣದ ಒಕ್ಕೂಟ ಅಂತ್ಯ ಹಾಡಿವೆ.
ಜೆಡಿಎಸ್‌ಗೆ ಬಿಜೆಪಿ ಸಂಸದರ ಬಲ: ಬಿಜೆಪಿ ಹಾಗೂ ಜೆಡಿಎಸ್ (JDS) ಒಪ್ಪಂದದಡಿ ಮುಂದಿನ ಅವಧಿಗೆ ಬಿಜೆಪಿಯ (BJP) ಪುಣ್ಯವತಿ ಅವರಿಗೆ ಅವಕಾಶ ಕಲ್ಪಿಸುವ ಭರವಸೆ ಹಿನ್ನೆಲೆಯಲ್ಲಿ ಮೊದಲ ಅವಧಿಗೆ ಜೆಡಿಎಸ್‌ನ ರೂಪಾಗೆ ಬಿಜೆಪಿ ಸೇರಿದಂತೆ ಪುಟ್ಟ ಸ್ವಾಮಿಗೌಡ ಬಣ ಬೆಂಬಲಿಸಿದೆ ಎಂದು ತಿಳಿದು ಬಂದಿದೆ. ಈ ನಡುವೆ ಕಾಂಗ್ರೆಸ್ ವಿರೋಧಿ ಬಣ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಪುಟ್ಟಸ್ವಾಮಿಗೌಡ ಬಣ ಸಂಭ್ರಮಾಚರಣೆ ಮಾಡಿತು. ಜೆಡಿಎಸ್‌ನ ಅಶೋಕ್ ಕುಮಾರ್, ಸಿ.ಆರ್.ನರಸಿಂಹಮೂರ್ತಿ ಮತ್ತಿತರ ಹಿರಿಯರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ಹೇಳಿಕೆ: ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ
ಕ್ಷೇತ್ರದಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷ ಈಗೀಗ ಪ್ರಬಲಗೊಳ್ಳುತ್ತಿದೆ. ಮುಂದಿನ ವಿಧಾನಸಭೆಯ (Assembly Election) ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ತಿಳಿಸಿದರು.
ನಗರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಹಾಗೂ ತಮ್ಮ ಅಭಿಮಾನಿಗಳಿಂದ ಸೋಮವಾರ ಹಮ್ಮಿಕೊಂಡಿದ್ದ ತಮ್ಮ ಹುಟ್ಟುಹಬ್ಬದಲ್ಲಿ ಅಭಿನಂದನೆ ಸ್ಪೀಕರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭದ್ರ ನೆಲೆ ಇದ್ದು ಪಕ್ಷದ ಕಾರ್ಯಕರ್ತರ ರಕ್ಷಣೆಗೆ ನಾವು ಸಿದ್ದರಿದ್ದೇವೆ. ಪಕ್ಷವನ್ನು ಸಂಘಟಿಸುವ ಕೆಲಸ ಇನ್ನಷ್ಟುಚುರುಕುಗೊಳಿಸಲಾಗುವುದೆಂದರು.
ನಂದಿಯಲ್ಲಿ ವಿಶೇಷ ಪೂಜೆ:
ವಿನಯ್ ಶಾಮ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನಂದಿಯ ಭೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಭಿಮಾನಿಗಳಿಂದ ನಗರದ ಪ್ರಶಾಂತ ನಗರದಲ್ಲಿ ಅವರ ಸ್ವಗೃಹದಲ್ಲಿ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಅವರ ಅಭಿಮಾನಿಗಳು ಸೇಬಿನ ಹಾರ ಹಾಕಿದರು. ದೇವರಾಜ ಅರಸು ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ವಿನಯ್ ಅವರ ತಂದೆ ಜಿ.ಎಚ್.ನಾಗರಾಜ್, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಲಾಯರ್ ನಾರಾಯಣಸ್ವಾಮಿ, ತಾಪಂ ಮಾಜಿ ಸದಸ್ಯ ಸುಬ್ಬರಾಯಪ್ಪ, ನಿವೃತ್ತ ಡಿಡಿಪಿಐ ಅಜಿತ್ ಪ್ರಸಾದ್, ನಗರಸಭಾ ಸದಸ್ಯರಾದ ಅಂಬರೀಶ್, ನರಸಿಂಹಮೂರ್ತಿ, ಕಣಿತಹಳ್ಳಿ ವೆಂಕಟೇಶ್, ಕೋನಪಲ್ಲಿ ಕೋಡಂಡ ಮತ್ತಿತರರು ಪಾಲ್ಗೊಂಡಿದ್ದರು.