ಸುಳ್ಯ [ಸೆ.05]: ಸುಳ್ಯ ಬಿಜೆಪಿ ಕಚೇರಿಯಲ್ಲಿ 300 ರಷ್ಟುಮಂದಿ ಜನಪ್ರತಿನಿಧಿಗಳು ಸೇರಿ ಸಭೆ ನಡೆಸಿ ಅಸಹಕಾರ ಚಳವಳಿ ನಿರ್ಧಾರ ಕೈಗೊಂಡಿರುವುದು ಬಿಜೆಪಿಗರೋ ಅಥವಾ ಕಾಂಗ್ರೆಸ್‌-ಜೆಡಿಎಸ್‌ನವರೋ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ರವರು ತಿಳಿದುಕೊಳ್ಳಲಿ. ಆ ಬಳಿಕ ಕಾಂಗ್ರೆಸ್‌ ಮೇಲೆ ಆರೋಪ ಮಾಡಲಿ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಗಾರರು ಮಂತ್ರಿ ಪದವಿಯಿಂದ ವಂಚಿತರಾದಾಗ ಬಿಜೆಪಿಯವರು ಅಸಹಕಾರದ ನಿರ್ಣಯ ಕೈಗೊಂಡ ಸಂದರ್ಭ ನೀವು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಚಳವಳಿ ಮಾಡಿ ಎಂದು ನಾವು ಸಲಹೆ ನೀಡಿದ್ದೇವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕಟೀಲ್‌ ಅವರು ಅಸಹಕಾರ ಚಳವಳಿ ಕಾಂಗ್ರೆಸ್‌ ಸೃಷ್ಟಿಸಿದ್ದು ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರು ಮೊದಲಿನಿಂದಲೂ ಸುಳ್ಳು ಹೇಳುವವರೆಂದು ಗೊತ್ತಿದ್ದರೂ, ರಾಜ್ಯಾಧ್ಯಕ್ಷರಾದ ತಕ್ಷಣ ಪ್ರಥಮವಾಗಿ ಈ ವಿಚಾರದಲ್ಲಿಯೂ ಸುಳ್ಳು ಹೇಳಿದ್ದಾರೆ. ಆದ್ದರಿಂದ ಬಿಜೆಪಿ ಕಚೇರಿಯಲ್ಲಿ ಸಭೆ ಸೇರಿ ನಿರ್ಣಯ ಕೈಗೊಂಡದ್ದು ಯಾರೆಂದು ಅವರು ಬಿಜೆಪಿ ಕಚೇರಿಗೆ ಫೋನ್‌ ಮಾಡಿ ತಿಳಿದುಕೊಳ್ಳಲಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಿದ್ದೀಕ್‌ ಕೊಕ್ಕೊ, ಶರೀಫ್‌ ಕಂಠಿ, ಲಕ್ಷ್ಮಣ ಶೆಣೈ, ಕೆ.ಕೆ. ಹರಿಪ್ರಸಾದ್‌ ಇದ್ದರು.