ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ: ಮೈಸೂರಲ್ಲಿ ರಾರಾಜಿಸುತ್ತಿರುವ ಕಾಂಗ್ರೆಸ್ ನಾಯಕರ ಫ್ಲೆಕ್ಸ್..!
ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆಯನ್ನ ನಿರ್ಮಿಸಲಾಗಿದೆ. 80 ಅಡಿ ಉದ್ದ 60 ಅಡಿ ಅಗಲ 8 ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ವೇದಿಕೆ ಹಿಂಭಾಗ 140 ಅಡಿಯ ಬೃಹತ್ ಎಲ್ಇಡಿ ಪರದೆಯನ್ನ ಅಳವಡಿಸಲಾಗಿದೆ.
ಮೈಸೂರು(ಆ.30): ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಗೆ ಇಂದು(ಬುಧವಾರ) ಮೈಸೂರಿನಲ್ಲಿ ಚಾಲನೆ ಸಿಗಲಿದೆ. ಬೆಳಿಗ್ಗೆ 11 ಗಂಟೆಗೆ ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಏಕಕಾಲದಲ್ಲಿ 1 ಕೋಟಿ 20 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ 2 ಸಾವಿರ ಹಣ ಜಮೆಯಾಗಲಿದೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹ ಸಚಿವ ಡಾ ಪರಮೇಶ್ವರ್, ಸೇರಿ ಹಲವರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಯ ಫಲಾನುಭವಿಗಳು ಭಾಗಿಯಾಗಲಿದ್ದಾರೆ.
ಮನೆ ಯಜಮಾನಿಗೆ ಮಾಸಿಕ 2000 ನೀಡುವ ಯೋಜನೆ: ಗೃಹಲಕ್ಷ್ಮಿಗೆ ಇಂದು ಚಾಲನೆ
ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ:
ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆಯನ್ನ ನಿರ್ಮಿಸಲಾಗಿದೆ. 80 ಅಡಿ ಉದ್ದ 60 ಅಡಿ ಅಗಲ 8 ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ವೇದಿಕೆ ಹಿಂಭಾಗ 140 ಅಡಿಯ ಬೃಹತ್ ಎಲ್ಇಡಿ ಪರದೆಯನ್ನ ಅಳವಡಿಸಲಾಗಿದೆ.
ವಿಐಪಿ, ವಿವಿಐಪಿಗಳಿಗೆ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಾಡಲಾಗಿದ್ದು, ಮಹಾರಾಜ ಕಾಲೇಜು ಮೈದಾನ ದಲ್ಲಿ ವಾಟರ್ ಪ್ರೂಫ್ ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗೆ ಸುಸಜ್ಜಿತ ಶೌಚಾಲಯ, ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ವೇದಿಕೆ ಮುಂಭಾಗ 1 ಲಕ್ಷ ಆಸನಗಳ ವ್ಯವಸ್ಥೆಯನ್ನ ಮಾಡಲಾಗಿದೆ.
ರಾರಾಜಿಸುತ್ತಿರುವ ಕಾಂಗ್ರೆಸ್ ನಾಯಕರ ಫ್ಲೆಕ್ಸ್‌ಗಳು:
ಕಾರ್ಯಕ್ರಮ ನಡೆಯುವ ಮೈದಾನದ ಸುತ್ತಮುತ್ತ ಕಾಂಗ್ರೆಸ್ ನಾಯಕರ ಪ್ಲೆಕ್ಸ್‌ಗಳು ರಾರಾಜಿಸುತ್ತಿವೆ.
ವಾಹನ ಸಂಚಾರಕ್ಕೆ ನಿರ್ಬಂಧ:
ಮಹಾರಾಜ ಕಾಲೇಜು ಮೈದಾನದ ಸುತ್ತ ರಸ್ತೆಯಲ್ಲಿ ಎಲ್ಲಾ ಬಗೆಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತ ಮಾರ್ಗದಲ್ಲಿ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಕಾರ್ಯಕ್ರಮ ನಡೆಯುವ ಮಹಾರಾಜ ಕಾಲೇಜು ಮೈದಾನದ ಸುತ್ತ ಮುತ್ತ ರಸ್ತೆಯಲ್ಲಿ ಕೆಎಸ್ಆರ್‌ಟಿಸಿ ಬಸ್ ಸೇರಿದಂತೆ ವಾಹನಗಳಿಗೆ ಪರ್ಯಾಯ ಮಾರ್ಗ ನಿಗದಿ ಮಾಡಲಾಗಿದೆ. ಮಹಾರಾಜ ಕಾಲೇಜು ಸುತ್ತಮುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಪಾರ್ಕಿಂಗ್‌ಗೂ ನಿರ್ಬಂಧ ಹೇರಲಾಗಿದೆ. ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ವಿವಿಧ ಮೈದಾನಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಸ್ವಚ್ಛ ನಗರಿ ತುಂಬೆಲ್ಲ ಸರ್ಕಾರಿ ಫ್ಲೆಕ್ಸ್:
ಮೈಸೂರು ನಗರದ ಪ್ರಮುಖ ರಸ್ತೆ ತುಂಬೆಲ್ಲ ಫ್ಲೆಕ್ಸ್, ಹೋಲ್ಡಿಂಗ್ಸ್ ಅಳವಡಿಕೆ ಮಾಡಲಾಗಿದೆ. ರಸ್ತೆ, ವೃತ್ತಗಳಲ್ಲಿ ಭಿತ್ತಿಪತ್ರಗಳು ರಾರಾಜಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಫೋಟೋ, ಸೇರಿ ರಾಷ್ಟ್ರ, ರಾಜ್ಯ, ಸ್ಥಳೀಯ ನಾಯಕರನ್ನು ಒಳಗೊಂಡ ಫ್ಲೆಕ್ಸ್‌ಗಳನ್ನ ಹಾಕಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್:
ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಮಹಾರಾಜ ಕಾಲೇಜು ಮೈದಾನಕ್ಕೆ 2000 ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, 10 ಎಸ್ಪಿಗಳು ಸೇರಿದಂತೆ ನೂರಾರು ಅಧಿಕಾರಿಗಳಿಂದ ಬಂದೋಬಸ್ತ್ ಕಲ್ಪಿಸಲಾಗಿದೆ.
News Hour: ಚಾಮುಂಡಿ ತಾಯಿಗೆ ಮೊದಲ ಗೃಹಲಕ್ಷ್ಮೀ ಹಣ ನೀಡಿದ ಸರ್ಕಾರ!
ಗಣ್ಯರಿಗಾಗಿ ವಿಶೇಷ ಉಡುಗೊರೆ ರೆಡಿ:
ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗಾಗಿ ವಿಶೇಷ ಉಡುಗೊರೆಗಳನ್ನ ಸಿದ್ಧಪಡಿಸಲಾಗಿದೆ. ಕಾವೇರಿ ಎಂಪೋರಿಯಂನಿಂದ ಫೋಟೊ ಪ್ರೇಮ್‌ಗಳನ್ನ ತರಿಸಲಾಗಿದೆ. ಕಲಾಕೃತಿಗಳು ಇನ್‌ಲೇ ಆರ್ಟ್ ಮೂಲಕ ರಚಿಸಲಾಗಿದೆ. ಪ್ರಕೃತಿ ಸೊಬಗಿನ ಹಿನ್ನೆಲೆಯ ಕಲಾಕೃತಿಗಳು ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸುರ್ಜೇವಾಲ ಸೇರಿದಂತೆ ಗಣ್ಯರಿಗಾಗಿ ಕಲಾಕೃತಿಗಳು ಸಿದ್ಧವಾಗಿವೆ. ಆನೆ, ನವಿಲು, ಕೊಕ್ಕರೆ, ಜೋಡು ಎತ್ತುಗಳು ಸೇರಿದಂತೆ 8ಕ್ಕೂ ಹೆಚ್ಚು ಕಲಾಕೃತ್ತಿಗಳನ್ನು ವೇದಿಕೆ ಬಳಿ ಆಯೋಜಕರು ತಂದಿರಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಖುದ್ದು ತಾವೇ ನಿಂತು ಉಡುಗೊರೆಗಳನ್ನ ಆಯ್ಕೆ ಮಾಡಿದ್ದಾರೆ.