ಮೈಸೂರು (ಏ.06):  ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆಗಮನದ ವಿಷಯ ಕೇಳಿ ಮೈಸೂರು ಭಾಗದ ಕಾಂಗ್ರೆಸ್ಸಿಗರು ಕಂಗೆಟ್ಟಿದ್ದಾರೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ ಟೀಕಿಸಿದ್ದಾರೆ.

ವಿಜಯೇಂದ್ರ ಅವರು ಮೈಸೂರು ಭಾಗಕ್ಕೆ ಪಕ್ಷ ಸಂಘಟನೆಯ ಸಲುವಾಗಿ ಆಗಮಿಸುವ ಸುದ್ದಿ ಕೇಳುತ್ತಿದ್ದಂತೆಯೇ ಕಾಂಗ್ರೇಸಿಗರು ವಿಚಲಿತರಾಗಿ ಹೇಗೆ ಬೇಕು ಹಾಗೆ ಪತ್ರಿಕೆಗೆ ಪ್ರತಿಕ್ರಿಯಿಸುತ್ತಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ವೈ ವಿಜಯೇಂದ್ರ ಅವರು ಮೈಸೂರು ಪ್ರಾಂತ್ಯದಲ್ಲಿ ಅದರಲ್ಲೂ ವರುಣ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸಂಘಟನೆ ಮಾಡಿ ಸ್ಥಳೀಯ ಬಿ.ಜೆ.ಪಿ ಮುಖಂಡರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದು ಈ ಒಂದು ಬೆಳವಣಿಗೆ ಕಾಂಗ್ರೆಸಿಗರಿಗೆ ನುಂಗಲಾರದ ತುತ್ತಾಗಿದೆ ಎಂದಿದ್ದಾರೆ,

ಮಸ್ಕಿಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು: ವಿಜಯೇಂದ್ರ ವಿಶ್ವಾಸ! ...

ಬಿ.ಎಸ್‌. ಯಡಿಯೂರಪ್ಪ ಅವರು ಎಂದಿಗೂ ಸಹ ಕುಟುಂಬ ರಾಜಕರಣ ಮಾಡಿಕೊಂಡು ಬಂದಿಲ್ಲ. ಬದಲಾಗಿ ಪಕ್ಷದ ಜೊತೆ ಹಾಗೂ ಕಾರ್ಯಕರ್ತರ ಜೊತೆ ಅವಿನಾಭವ ಸ್ನೇಹ ಸಂಬಂಧ ಇಟ್ಟುಕೊಂಡು ಸಂಘಟನೆ ಹಾಗೂ ಅಭಿವೃದ್ದಿಯ ಪಥದ ರಾಜಕರಣ ಮಾಡಿಕೊಂಡು ಬಂದಿದ್ದಾರೆ ಇದರೊಟ್ಟಿಗೆ ರಾಜ್ಯದ ಮೂಲೆಮೂಲೆಗೂ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿ ಪಕ್ಷ ಸಂಘಟಿಸಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ,

ಶಾಸಕರಾದ ಯತೀಂದ್ರ ಅವರು ಕ್ಷೇತ್ರದ ಜನತೆಯ ನಾಡಿಮಿಡಿತ ಅರಿಯುವುದರೊಂದಿಗೆ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದರೊಂದಿಗೆ ದೊಡ್ಡತನದಿಂದ ಮುನ್ನೆಡೆಯಬೇಕೇ ವರತು ಕ್ಷೇತ್ರಕ್ಕೆ ಬಿ.ಎಸ್‌ ಯಡಿಯೂರಪ್ಪ ರವರು ಕೊಟ್ಟಂತಹಾ ಅನುದಾನವನ್ನು ಬೇಡವೆಂದು ಟೀಕಿಸಿ ಅವಿದ್ಯಾವಂತರಂತೆ ವರ್ತನೆ ಮಾಡುವುದು ಸರಿಯಲ್ಲ. ಅದೇ ರೀತಿ ಶಾಸಕರಾದ ಎಚ್.ಪಿ ಮಂಜುನಾಥ್‌ ಅವರು ಧೃತರಾಷ್ಟ್ರ ಕುಟುಂಬದಂತೆ ಬಿ.ಎಸ್.ವೈ ಕುಟುಂಬ ಆಡಳಿತ ಅಂತ್ಯ ಕಾಣಲಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯವಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಮತ್ತು ದೇಶದಲ್ಲಿ ಉತ್ತಮ ರಾಜಕಾರಿಣಿಗಳಲ್ಲಿ ಬಿ.ಎಸ್‌ ಯಡಿಯೂರಪ್ಪ ರವರೂ ಕೂಡ ಒಬ್ಬರು,ಎಚ್.ಪಿ ಮಂಜುನಾಥ್‌ ರವರು ಯಡಿಯೂರಪ್ಪ ರವರ ದಿನೇ ದಿನೇ ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದೇ ಮುಂದೊಂದು ದಿನ ಮೈಸೂರು ಜಿಲ್ಲೆಯ ಕಾಂಗ್ರೆಸ್‌ ಸಂಘಟನೆಗೆ ಮುಳುವಾದಿತೇನೋ ಎಂಬ ಭಯದ ವಾತಾವರಣದಿಂದ ಈ ರೀತಿಯಾದಂತ ಮಾತುಗಳನ್ನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.