ಬೆಂಗಳೂರು [ಆ.17]: ಮೈತ್ರಿ ಸರ್ಕಾರ ಮತ್ತು ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ನಡೆದಿರುವ ವೈಟ್‌ಟಾಪಿಂಗ್‌ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪದ ಮೇರೆಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಇಬ್ಬರು ನಾಯಕರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಮತ್ತು ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್‌ ಅವರ ವಿರುದ್ಧ ತನಿಖೆ ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಬೆಂಗಳೂರು ಅಭಿವೃದ್ಧಿ ಕುರಿತ ಸಭೆಯಲ್ಲಿ ವೈಟ್‌ ಟಾಪಿಂಗ್‌ ಯೋಜನೆ ಬಗ್ಗೆ ಗಂಭೀರ ಚರ್ಚೆ ನಡೆದ ನಂತರ ಬೆಂಗಳೂರು ನಗರದ ವಿವಿಧೆಡೆ ವೈಟ್‌ ಟಾಪಿಂಗ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಅವರಿಗೆ ನಿರ್ದೇಶನ ನೀಡಿದ್ದರು. ಅಲ್ಲದೆ, ತಕ್ಷಣವೇ ಮೂರನೇ ಹಂತದ ವೈಟ್‌ ಟಾಪಿಂಗ್‌ ಯೋಜನೆ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದರು.

"

ಇದರ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತನಿಖೆ ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವೈಟ್‌ ಟಾಪಿಂಗ್‌ ನಿರ್ಮಾಣಕ್ಕೆ ತಗಲುವ ವೆಚ್ಚಕ್ಕಿಂತ ಹೆಚ್ಚು ಮೊತ್ತದಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ವೈಟ್‌ ಟಾಪಿಂಗ್‌ಗೆ ಟೆಂಡರ್‌ ನೀಡಲಾಗಿದೆ. ಗುಣಮಟ್ಟದ ಕೊರತೆ ಸಹ ಇದ್ದು, ನಿಯಮಾವಳಿಗಳನ್ನು ಉಲ್ಲಂಘಿಸಿ ವೈಟ್‌ ಟಾಪಿಂಗ್‌ ಮಾಡಿ ಯೋಜನೆಯಲ್ಲಿ ಅವ್ಯವಹಾರ ನಡೆಸಲಾಗಿದೆ. ​ಪ್ರತಿ ಕಿ.ಮೀ. .11 ಕೋಟಿ ವೈಟ್‌ಟಾಪಿಂಗ್‌ ಮಾಡಲಾಗಿದೆ. ಯಾವ ಆಧಾರದ ಮೇಲೆ ಇಷ್ಟುಹಣ ನಿಗದಿ ಮಾಡಲಾಗಿದೆ. ಅಲ್ಲದೇ, ಅಗತ್ಯ ಇಲ್ಲದ ರಸ್ತೆಗಳಿಗೂ ವೈಟ್‌ ಟಾಪಿಂಗ್‌ ಮಾಡಲಾಗಿದೆ ಎಂದು ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವೈಟ್‌ ಟಾಪಿಂಗ್‌ಗೆ ಅನುಮತಿ ನೀಡಬಾರದು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

"

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ವೈಟ್‌ ಟಾಪಿಂಗ್‌ ಯೋಜನೆ ಕಾರ್ಯಾರಂಭವಾಗಿದ್ದು, ಮೈತ್ರಿ ಸರ್ಕಾರದ ಅವಧಿಯಲ್ಲಿ ಯೋಜನೆ ಮುಂದುವರಿದಿತ್ತು. ಆದರೆ, ಇದರಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆಗೆ ಸೂಚಿಸಲಾಗಿದೆ. ಸಮರ್ಪಕವಾಗಿ ತನಿಖೆ ನಡೆದಿದರೆ ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾಜ್‌ರ್‍ ಮತ್ತು ಡಾ.ಜಿ.ಪರಮೇಶ್ವರ್‌ ಅವರ ವಿರುದ್ಧವೂ ತನಿಖೆ ನಡೆಸಬೇಕಾಗುತ್ತದೆ. ಟೆಂಡರ್‌ ಪ್ರಕ್ರಿಯೆ ಸೇರಿದಂತೆ ಇತರೆ ಕಾರ್ಯಗಳು ಸಚಿವರ ಸೂಚನೆ ಮೇರೆಗೆ ನಡೆಯುವುದರಿಂದ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎನ್ನಲಾಗಿದೆ.

ಪರಿಸರ ವಿರೋಧಿ ಯೋಜನೆಯಾಗಿರುವ ಈ ವೈಟ್‌ ಟಾಪಿಂಗ್‌ ರಸ್ತೆಗಳ ನಿರ್ಮಾಣ ಹೆಸರಿನಲ್ಲಿ ನೂರಾರು ಕೋಟಿ ರು.ಗಳ ಅವ್ಯವಹಾರ ನಡೆಸಲಾಗಿದೆ. ಈ ಬಗ್ಗೆ ಅಂದಿನ ಮುಖ್ಯಮಂತ್ರಿ, ಸಚಿವರೂ ಸೇರಿದಂತೆ ಪಾಲಿಕೆಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸಲಾಗಿದೆ. ಈ ಎಲ್ಲದರ ಬಗ್ಗೆ ತನಿಖೆ ನಡೆಯುವ ವಿಶ್ವಾಸವಿದೆ.

-ಎನ್‌.ಆರ್‌.ರಮೇಶ್‌, ಬಿಜೆಪಿ ಮುಖಂಡ.

ವೈಟ್‌ ಟಾಪಿಂಗ್‌ ಯೋಜನೆ ವಿರುದ್ಧ ಮೊದಲಿನಿಂದಲೂ ಬಿಜೆಪಿ ವಿರೋಧ ಮಾಡಿಕೊಂಡು ಬಂದಿದೆ. ಇದರಲ್ಲಿ ಸಾಕಷ್ಟುಅಕ್ರಮ ನಡೆದಿರುವ ಆಪಾದನೆಗಳಿವೆ. ಹೀಗಾಗಿ, ಈಗ ಸೂಕ್ತ ತನಿಖೆ ನಡೆಯಬೇಕು ಎಂಬ ಒತ್ತಾಯವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪಕ್ಷದ ಪರವಾಗಿ ಮಾಡಿದ್ದೆವು. ತನಿಖೆಗೆ ಆದೇಶ ಕೊಟ್ಟಿರುವುದು ಉತ್ತಮ ಬೆಳವಣಿಗೆ.

-ಪದ್ಮನಾಭರೆಡ್ಡಿ, ಬಿಬಿಎಂಪಿಯ ಪ್ರತಿಪಕ್ಷ ಬಿಜೆಪಿ ನಾಯಕ.