ಬಿಜೆಪಿಯ ಯತ್ನಾಳ್, ವಿಶ್ವನಾಥ್ ಮೌನಕ್ಕೆ ಶರಣಾಗಿದ್ದೇಕೆ ..?
- ಮುಖ್ಯಮಂತ್ರಿಯಾದವರು ಜನರ ಬದುಕಿಗೆ ಮೊದಲು ಆದ್ಯತೆ ನೀಡಬೇಕು
- ರಾಜ್ಯ ಸರ್ಕಾರ ಜೀವಂತ ಇದ್ದಂತೆ ಕಾಣುತ್ತಿಲ್ಲ ಎಂದು ಕೈ ಮುಖಂಡ ವಾಗ್ದಾಳಿ
ಮೈಸೂರು (ಆ.04): ಮುಖ್ಯಮಂತ್ರಿಯಾದವರು ಜನರ ಬದುಕಿಗೆ ಮೊದಲು ಆದ್ಯತೆ ನೀಡಬೇಕು. ರಾಜ್ಯದಲ್ಲಿ 11 ಜಿಲ್ಲೆಗಳಲ್ಲಿ ಪ್ರವಾಹ ಇದೆ. ಜನ ಸಂಕಷ್ಟದಲ್ಲಿ ಇದ್ದಾರೆ. ಅದರೆ ರಾಜ್ಯ ಸರ್ಕಾರ ಜೀವಂತ ಇದ್ದಂತೆ ಕಾಣುತ್ತಿಲ್ಲ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ಕಿಡಿಕಾರಿದರು.
ಮೈಸೂರು ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಮಾತನಾಡಿದ ಅವರು ಪ್ರವಾಹ ಮತ್ತು ಕೊರೋನಾದಿಂದ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ ಇವರ ದುಖಃ ದುಮ್ಮಾನ ಆಲಿಸಬೇಕಾದ ಬಿಹೆಪಿ ಶಾಸಕರ ಅಧಿಕಾರ ಪಡೆಯುವಲ್ಲಿ ತಲ್ಲಿನರಾಗಿದ್ದಾರೆ. ಶಾಸಕರ ಸ್ಥಾನ ಕೊಟ್ಟ ಕ್ಷೇತ್ರದ ಜನತೆ ಸಂಪೂರ್ಣ ಮರೆತು ಅಧಿಕಾರಕ್ಕಾಗಿ ಸರ್ಕಸ್ಸು ಮಾಡುತ್ತಿದ್ದಾರೆ ಎಂದರು.
ವರಿಷ್ಠರು ಅನುವಂಶೀಯ ರಾಜಕಾರಣಕ್ಕೆ ಮಣೆ ಹಾಕಲ್ಲ : ಯತ್ನಾಳ
ಮೌನಿ ಬಾಬಾ : ಕಳೆದ 3 - 4 ತಿಂಗಳಿಂದ ತಮ್ಮದೇ ರಾಜ್ಯ ಸರ್ಕಾರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದ ಬಿಜೆಪಿ ವಿದಾನ ಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕಳೆದ ಒಂದು ವಾರದಿಂದ ಮೌನಿ ಬಾಬಾಗಳಾಗಿದ್ದಾರೆ.
ನಿಮ್ಮ ಹೋರಾಟ ಉತ್ತರನ ಪೌರುಷವೋ ಎಂದು ಕೆಪಿಸಿಸಿ ವಕ್ತಾರ ಉಗ್ರಪ್ಪ ಪ್ರಶ್ನೆ ಮಾಡಿದರು.
ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ. ವಿದೇಶದಲ್ಲಿ ಹಣ ಇರಿಸಿದ್ದಾರೆ ಸೇರಿ ಹಲವು ಆರೋಪ ಮಾಡಿದ್ದರು. ಭ್ರಷ್ಟಾಚಾರ ವಿರುದ್ಧ ತಮ್ಮ ಮಾತಿಗೆ ಬದ್ಧತೆ ಇದ್ದರೆ ತನಿಖೆ ನಡೆಸಿ ಅಂತಿಮ ಘಟ್ಟಕ್ಕೆ ತಲುಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.