ಬಿಜೆಪಿ ನಾಯಕರು ಬಡವರ ರಕ್ತಹೀರುವ ಜಿಗಣಿ-ಜಿರಲೆಗಳು: ಉಗ್ರಪ್ಪ

ಬಿಜೆಪಿಯವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗೌರವವಿಲ್ಲ| ನಿಜಕ್ಕೂ ಗೌರವ ಇದ್ದಿದ್ದರೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸರ್ದಾರ್‌ ವಲ್ಲಭಬಾಯಿ ಪಟೇಲ್‌ರ ಹೆಸರಿನಲ್ಲಿದ್ದ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರು ಇಡುತ್ತಿರಲಿಲ್ಲ| ಪಟೇಲ್‌ರಿಗೆ ಅಗೌರವ ತೋರುವ ರೀತಿಯಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರು ನಡೆದುಕೊಂಡಿದ್ದಾರೆ: ಉಗ್ರಪ್ಪ| 

Congress Leader VS Ugrappa Slam BJP grg

ಬಳ್ಳಾರಿ(ಫೆ.27): ಡೀಸೆಲ್‌-ಪೆಟ್ರೋಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಹಾಗೂ ಆಡಳಿತ ನಡೆಸುವವರು ಜನಸಾಮಾನ್ಯರ ರಕ್ತ ಹೀರುವ ಜಿಗಣೆ- ಜಿರಳೆಗಳಾಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತಿಲ್ಲ. ದಿನದಿನಕ್ಕೆ ಡೀಸೆಲ್‌ -ಪೆಟ್ರೋಲ್‌ ಬೆಲೆ ಗಗನಕ್ಕೇರುತ್ತಿವೆ. ಗ್ಯಾಸ್‌ ಸಿಲೆಂಡರ್‌ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದವರು ತತ್ತರಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದೆ. ಕೇಂದ್ರದ ಬಿಜೆಪಿ ನಾಯಕರು ದೇಶದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದ್ದಾರೆ. ಬಿಜೆಪಿಯಲ್ಲಿ ಹೊಸ ತಳಿಯ ಜಿಗಣೆ ಜೀವಿಗಳು ಹುಟ್ಟಿಕೊಂಡಿವೆ. ಇವುಗಳನ್ನು ಅವಸಾನದ ಅಂಚಿಗೆ ಕೊಂಡೊಯ್ಯದೇ ಹೋದರೆ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉಳಿಗಾಲವಿಲ್ಲ ಎಂದು ಹೇಳಿದರು.

ಕೊರೋನಾ 2ನೇ ಅಲೆ: ಬೆಂಗ್ಳೂರಿನಿಂದ ಬಳ್ಳಾರಿಗೂ ವೈರಸ್‌ ಕಂಟಕ, ಆತಂಕದಲ್ಲಿ ಜನತೆ..!

ಬಿಜೆಪಿಯವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯಾವುದೇ ಗೌರವವಿಲ್ಲ. ನಿಜಕ್ಕೂ ಗೌರವ ಇದ್ದಿದ್ದರೆ ಗುಜರಾತ್‌ನ ಅಹಮದಾಬಾದ್‌ ನಲ್ಲಿರುವ ಸರ್ದಾರ್‌ ವಲ್ಲಭಬಾಯಿ ಪಟೇಲ್‌ರ ಹೆಸರಿನಲ್ಲಿದ್ದ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಅವರ ಹೆಸರು ಇಡುತ್ತಿರಲಿಲ್ಲ. ಪಟೇಲ್‌ರಿಗೆ ಅಗೌರವ ತೋರುವ ರೀತಿಯಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರು ನಡೆದುಕೊಂಡಿದ್ದಾರೆ. ಈ ಬೆಳವಣಿಗೆ ಹಿನ್ನಲೆಯಲ್ಲಿ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ಷಮೆಯಾಚಿಸಬೇಕು. ಪಟೇಲ್‌ರ ಹೆಸರು ಬದಲಾಯಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಿಂದ ಕೇಂದ್ರಕ್ಕೆ 2.5 ಲಕ್ಷ ಕೋಟಿ ತೆರಿಗೆ ಹಣ ಹೋಗುತ್ತಿದೆ. ಆದರೆ, ಕೇಂದ್ರ ನಮಗೆ ನೀಡುತ್ತಿರುವುದು ಬರೀ 31 ಸಾವಿರ ಕೋಟಿಗಳಷ್ಟು ಮಾತ್ರ. ಇದು ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಬಹುದೊಡ್ಡ ವಂಚನೆ ಎಂದು ದೂರಿದರು. ರೈತರ ಬೆಂಬಲಕ್ಕೆ ನಿಂತಿರುವ ಸಂಘಟನೆಗಳು ಹಾಗೂ ಹೋರಾಟಗಾರರನ್ನು ಆಂದೋಲನ ಜೀವಿಗಳು ಎಂದು ಜರಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರು ಒದ್ದಾಡುವಂತೆ ಮಾಡಿದ್ದಾರೆ. ಹಾಗಾದರೆ ಇವರಾರ‍ಯವ ಜೀವಿ ? ಎಂದು ಪ್ರಶ್ನಿಸಿದರಲ್ಲದೆ, ಇವರನ್ನು ಜನಸಾಮಾನ್ಯರ ರಕ್ತ ಹೀರುವ ಜಿರಲೆಗಳು ಎನ್ನಬಹುದಲ್ಲವೇ ? ಎಂದು ಕೇಳಿದರು. ಕಾಂಗ್ರೆಸ್‌ ಹಿರಿಯ ಮುಖಂಡ ಎಲ್‌. ಮಾರೆಣ್ಣ, ಅಸುಂಡಿ ನಾಗರಾಜಗೌಡ, ಎಂ. ಹನುಮಕಿಶೋರ್‌, ಮಹ್ಮದ್‌ಗೌಸ್‌ ಸುದ್ದಿಗೋಷ್ಠಿಯಲ್ಲಿದ್ದರು.
 

Latest Videos
Follow Us:
Download App:
  • android
  • ios