ಪರೇಶ್ ಮೇಸ್ತಾ ಸಾವು ಕೇಸ್: ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ, ಖಾದರ್
ಇಲ್ಲ ಸಲ್ಲದ ಆರೋಪ, ಹೇಳಿಕೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ಪರೇಶ್ ಮೇಸ್ತಾ ಅವರ ಬಡ ಕುಟುಂಬವನ್ನು ಬಿಜೆಪಿ ನಾಯರು ಮರೆತರು ಎಂದು ಕುಟುಕಿದ ಖಾದರ್
ಮಂಗಳೂರು(ಅ.06): ಪರೇಶ್ ಮೇಸ್ತಾ ಸಾವು ಪ್ರಕರಣದಲ್ಲಿ ಸಿಬಿಐ ತನಿಖೆ ಬಳಿಕ ಕೋರ್ಚ್‌ಗೆ ‘ಬಿ’ ವರದಿ ಸಲ್ಲಿಸಿದೆ. ಇದು ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ಕುಟುಂಬದ ಮನೆಯ ಸಂಕಷ್ಟವನ್ನು ಬೀದಿಗೆ ತಂದು ರಾಜಕೀಯ ಮಾಡುವುದು ಬಿಜೆಪಿ ಚಿಂತನೆಯಾಗಿದೆ. ಈ ಬಗ್ಗೆ ಭಾರಿ ಮಾತನಾಡುತ್ತಿದ್ದ ಸಂಸದ ಅನಂತ ಕುಮಾರ್ ಹೆಗಡೆ ಈಗ ಎಲ್ಲಿಗೆ ಹೋಗಿದ್ದಾರೆ? ಸಾವನ್ನು ರಾಜಕೀಯವಾಗಿ ಬಳಸುವುದು ಬಿಜೆಪಿಯ ಚುನಾವಣಾ ತಂತ್ರವಾಗಿದೆ. ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಕಾಂಗ್ರೆಸ್ ಸರ್ಕಾರ. ಆಗ ಬಿಜೆಪಿ ಮುಖಂಡರು ಇಲ್ಲ ಸಲ್ಲದ ಅರೋಪ ಮಾಡಿದ್ದರು ಎಂದರು.
ಯಾವುದೇ ಆರ್ಥಿಕ ಸಹಕಾರ ಸಿಕ್ಕಿಲ್ಲ, ಪ್ರಚಾರಕ್ಕಷ್ಟೇ ಬಳಸಿದ್ದಾರೆ: ಪರೇಶ್ ಮೇಸ್ತಾ ತಂದೆ ಅಸಮಾಧಾನ
ಇಲ್ಲ ಸಲ್ಲದ ಆರೋಪ, ಹೇಳಿಕೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ಪರೇಶ್ ಮೇಸ್ತಾ ಅವರ ಬಡ ಕುಟುಂಬವನ್ನು ಬಿಜೆಪಿ ನಾಯರು ಮರೆತರು ಎಂದು ಖಾದರ್ ಕುಟುಕಿದ್ದಾರೆ.
ಇನ್ನು ಐದಾರು ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ಬರಲಿದೆ. ಈ ರೀತಿಯ ಸಾವಿನ ರಾಜಕೀಯ ನಡೆಸುವ ಪ್ರಯತ್ನ ಬಿಜೆಪಿಗರಿಂದ ನಡೆಯುತ್ತಿದೆ. ಜನರು ಬಿಜೆಪಿ ನಾಯಕರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರು ಜಾಗೃತರಾಗಬೇಕಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.