ಸಂಪುಟ ವಿಸ್ತರಣೆಯ ಬಳಿಕ ಬಿಜೆಪಿ ನಿಜ ಬಣ್ಣ ಬಯಲು
ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಗರ ನಿಜ ಬಣ್ಣ ಬಯಲಾಗಲಿದೆ ಎಂದು ಕಾಂಗ್ರೆಸ್ ಮುಖಂಡರೋರ್ವರು ಹೇಳಿದ್ದಾರೆ.
ಬಾಗಲಕೋಟೆ (ಜ.20]: ಸಂಪುಟ ವಿಸ್ತರಣೆಯ ಬಳಿಕ ಬಿಜೆಪಿಯ ನಿಜವಾದ ಬಣ್ಣ ಬಯಲಾಗುತ್ತೆ. ನೋವಿನ ಸಂಗತಿ ಎಂದರೆ ಬಜೆಟ್ ಅಧಿವೇಶನವನ್ನು ಮುಂದಕ್ಕೆ ಹಾಕುವ ಮೂಲಕ ಅಧಿವೇಶನದ ಮಹತ್ವವೇ ಕಳೆದು ಹೋಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಧಿವೇಶನದ ಮಹತ್ವ ಹೋಗಿದೆ. ವಿಪಕ್ಷ ಎದುರಿಸುವ ನೈತಿಕ ಸ್ಥೈರ್ಯ ಬಿಜೆಪಿಯಲ್ಲಿ ಉಳಿದಿಲ್ಲ ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ದಿಲ್ಲಿ ವರಿಷ್ಠರು ಸಂಪುಟ ರಚನೆಗೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪರಿಸ್ಥಿತಿ ಸರಿಯಾಗಿ ಉಳಿದಿಲ್ಲ. ಅವರ ಬಗ್ಗೆ ಮರುಕ ಅನ್ನಿಸುತ್ತಿದೆ. ಮಂತ್ರಿ ಮಂಡಲದಲ್ಲಿ 16 ಸಚಿವ ಸ್ಥಾನ ಖಾಲಿ ಇವೆ. ಮುಖ್ಯಮಂತ್ರಿಗಳ ಮೇಲೆ ಶಾಸಕರು ಎಲ್ಲಿಲ್ಲದ ಒತ್ತಡ ತರುತ್ತಿದ್ದಾರೆ.
ವಿದೇಶದಿಂದ ಬಂದು 2 ದಿನಕ್ಕೆ ಸಂಪುಟ ವಿಸ್ತರಣೆ: ಬಿಎಸ್‌ವೈ...
ಇದೇ ಕಾರಣಕ್ಕೆ ಇತ್ತೀಚಿಗೆ ಯಡಿಯೂರಪ್ಪ ರಾಜೀನಾಮೆ ಕೊಡಲು ಹಿಂದೇಟು ಹಾಕುವುದಿಲ್ಲ ಎಂದಿದ್ದಾರೆ. ಇದನ್ನು ಗಮನಿಸಿದರೆ ಅವರ ಪರಿಸ್ಥಿತಿ ಸರಿ ಉಳಿದಿಲ್ಲ ಎಂಬುದು ತಿಳಿಯುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಹೋಗಿರುವ ಶಾಸಕರು ಅಲ್ಲಿ ಬಹಳ ದಿನ ಸಲ್ಲಲ್ಲ. ಕಾಂಗ್ರೆಸ್‌ನಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ ಎಂದು ತಿಳಿಸಿದರು.