ಬಿಜೆಪಿ ಸರ್ಕಾರದಿಂದ ಜನರಿಗೆ ಅನ್ಯಾಯ: SR ಪಾಟೀಲ್
* ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಪ್ರಯೋಜನವಿಲ್ಲ
* ಕೂಡ್ಲಿಗಿ ತಾಲೂಕು ಕಾನಮಡುಗು ದಾಸೋಹ ಮಠಕ್ಕೆ ಭೇಟಿ ನೀಡಿದ್ದ ಪಾಟೀಲ್
* ಈಗಲಾದರೂ ಸಿಎಂ ಬೊಮ್ಮಾಯಿ ಸರ್ಕಾರ ನೆರವಿಗೆ ಧಾವಿಸಲಿ
ಕೂಡ್ಲಿಗಿ(ಆ.05): ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ನಿರುದ್ಯೋಗ ಸಮಸ್ಯೆ, ಪೆಟ್ರೋಲ್, ಡಿಸೇಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಂಥ ದುರಾಡಳಿತದಿಂದ ಕೇಂದ್ರ ಸರ್ಕಾರ ಜನರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್ ಆರೋಪಿಸಿದ್ದಾರೆ.
ತಾಲೂಕಿನ ಕಾನಮಡುಗು ಗ್ರಾಮದ ದಾಸೋಹಮಠಕ್ಕೆ ಬುಧವಾರ ಭೇಟಿ ನೀಡಿ, ಶ್ರೀ ಶರಣಬಸವೇಶ್ವರ ಸ್ವಾಮಿಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನರು ತತ್ತರಿಸಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಬಿಜೆಪಿ ನಾಯಕರಲ್ಲಿ ಸಿಎಂ ಖುರ್ಚಿ ಕದನದಲ್ಲಿ ಮುಳುಗಿದ್ದರು. ಈಗಲಾದರೂ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ನೆರವಿಗೆ ಧಾವಿಸಲಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಒತ್ತಾಯಿಸಿದರು.
ಮಾರ್ಚ್‌ನಲ್ಲಿ ಗಡ್ಡಧಾರಿ ವ್ಯಕ್ತಿ ಸಿಎಂ-ಮೈಲಾರಲಿಂಗೇಶ್ವರನ ಭವಿಷ್ಯ: ಯಾರು ಆ ಗಡ್ಡಧಾರಿ?
ಮುಂಬರುವ 2023ರ ಚುನಾವಣೆಯಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯಲು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲಾಗುವುದು. ಎಲ್ಲ ಪಕ್ಷಗಳಲ್ಲಿರುವಂತೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಕಾಂಗ್ರೆಸ್ ನಾಯಕರಲ್ಲೂ ಇದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ವರಿಷ್ಠರು ಕೆಲಸ ಮಾಡಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಅಲ್ಲದೆ, ರಾಜ್ಯದಲ್ಲಿ ಮಠ, ಮಂದಿರಗಳಿಗೆ ಭೇಟಿ ನೀಡಿ ಎಲ್ಲ ಸ್ವಾಮೀಜಿ ಆಶೀರ್ವಾದ ಪಡೆಯಲಾಗುವುದು.
ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ಸ್ವಾಮಿ ದಾಸೋಹ ಮಠದ ಧರ್ಮಾಧಿಕಾರಿ ದಾ.ಮ. ಐಮಡಿ ಶರಣಾರ್ಯರು, ಜಿಪಂ ಮಾಜಿ ಸದಸ್ಯ ಕೆ.ಎಂ. ಶಶಿಧರ, ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ, ಕೆಪಿಸಿಸಿ ಮುಖಂಡ ಕುರಿ ಶಿವಮೂರ್ತಿ, ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣನಾಯ್ಕ, ಮುಖಂಡರಾದ ಜುಮ್ಮೋಬನಹಳ್ಳಿ ಜಿ. ಓಬಣ್ಣ, ಕಲ್ಲಹಳ್ಳಿ ಉಪ್ಪಾರ ವೆಂಕಟೇಶ್, ಲಕ್ಕಜ್ಜಿ ಮಲ್ಲಿಕಾರ್ಜುನ, ನಿವೃತ್ತ ಜೆಇ ಶರಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಶರಣೇಶ್, ಗೊಟ್ಟಯ್ಯ ಇತರರಿದ್ದರು.