'ರಾಜ್ಯದಲ್ಲಿ ಬಿಜೆಪಿ ಅಲ್ಲ, ಸಿಡಿ ಸರ್ಕಾರ ಇದೆ'

ರಾಜ್ಯ ಮತ್ತು ಕೇಂದ್ರದ ಸರ್ಕಾರಗಳು ಜನತೆಗೆ ದಾರಿತಪ್ಪಿಸುವ ಕಾರ್ಯ ಮಾಡುತ್ತಿವೆ| ರೈತರ ಹೆಸರಿನ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದಿರುವ ಸಿಎಂ ಯಡಿಯೂರಪ್ಪನವರು ರೈತ ವಿರೋಧಿ ಕಾರ್ಯ ಮಾಡುತ್ತಿದ್ದಾರೆ| ಕೃಷಿಗೆ ಸಂಬಂಧಿಸಿದ ಅನೇಕ ಅವೈಜ್ಞಾನಿಕ ಕಾನೂನು ರಚನೆ ಮಾಡಿ ರೈತರ ಬದುಕಿನೊಂದಿಗೆ ಚಲ್ಲಾಟ ವಾಡುತ್ತಿದೆ: ಎಸ್‌.ಆರ್‌. ಪಾಟೀಲ| 
 

Congress Leader SR Patil Slam BJP Government grg

ಸಿಂದಗಿ(ಮಾ.08):  ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ, ಅದು ಸಿಡಿ ಸರ್ಕಾರ. ಅಮೂಲ್ಯವಾದ ಮತ ಹಾಕಿ ವಿಧಾನಸೌಧಕ್ಕೆ ಕಳಿಸಿದ ಜನಪ್ರತಿನಿಧಿಗಳು ಹೀಗೆ ಮಾಡುವುದು ನ್ಯಾಯ ಸಮ್ಮತವಲ್ಲ. ಅದನ್ನು ಹೇಳುವುದಕ್ಕೂ ನನಗೆ ನಾಚಿಕೆಯಾಗುತ್ತಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅವರು ಪಟ್ಟಣದ ವಿಜಯಪುರ ರಸ್ತೆಯಲ್ಲಿನ ಮಾಂಗಲ್ಯ ಭವನದಲ್ಲಿ ಭಾನುವಾರ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಮತ್ತು ಕೇಂದ್ರದ ಸರ್ಕಾರಗಳು ಜನತೆಗೆ ದಾರಿತಪ್ಪಿಸುವ ಕಾರ್ಯ ಮಾಡುತ್ತಿವೆ. ರೈತರ ಹೆಸರಿನ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದಿರುವ ಸಿಎಂ ಯಡಿಯೂರಪ್ಪನವರು ರೈತ ವಿರೋಧಿ ಕಾರ್ಯ ಮಾಡುತ್ತಿದ್ದಾರೆ. ಕೃಷಿಗೆ ಸಂಬಂಧಿಸಿದ ಅನೇಕ ಅವೈಜ್ಞಾನಿಕ ಕಾನೂನುಗಳನ್ನು ರಚನೆ ಮಾಡಿ ರೈತರ ಬದುಕಿನೊಂದಿಗೆ ಚಲ್ಲಾಟ ವಾಡುತ್ತಿದೆ ಎಂದು ಆರೋಪಿಸಿದರು.

ನಿತ್ಯದ ದಿನಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲಿದೆ. ಗ್ಯಾಸ್‌, ಪೆಟ್ರೋಲ್‌ ದರವಂತೂ ಹೇಳತೀರದು. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಪೆಟ್ರೋಲ್‌ ಬೆಲೆ . 50 ಪೈಸೆ ಹೆಚ್ಚಿಸಿದ್ದಕ್ಕೆ ಬಿಜೆಪಿ ದೇಶಾದ್ಯಾಂತ ಹೋರಾಟ ಮಾಡಿತ್ತು. ಆದರೆ ಈಗ ಲೀಟರ್‌ ಪೆಟ್ರೋಲಿಗೆ 94 ಆಗಿದೆ. ಇದನ್ನು ಬಿಜೆಪಿ ಅರಿತುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಬೆಲೆ ಏರಿಕೆಗೆ ಪರಿಹಾರ ನೀಡುತ್ತಾರೆ ಎಂಬ ಜನರ ಭರವಸೆ ನೀರು ಪಾಲಾದಂತಿದೆ ಎಂದರು.

ಸಿಂಧಗಿ ಉಪಚುನಾವಣೆಗೆ ಉಸ್ತುವಾರಿಗಳನ್ನ ನೇಮಿಸಿದ ಬಿಜೆಪಿ

ಸಿಂದಗಿಯಲ್ಲಿ ಕಾಂಗ್ರೆಸ್‌ ಗೆಲ್ಲಬೇಕು:

ಸಿಂದಗಿ ಮತಕ್ಷೇತ್ರದಲ್ಲಿ ಉಪಚುಣಾವಣೆ ಬರುತ್ತಲಿದೆ. ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಯಾರಿಗಾದ್ರೂ ಸಿಗಲಿ ಅಭ್ಯರ್ಥಿಯ ಗೆಲುವಿಗಾಗಿ ಹೋರಾಟ ಮಾಡಲೇಬೇಕು. ಅನೇಕ ವರ್ಷಗಳಿಂದ ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಕಳೆದುಕೊಂಡ ಅಧಿಕಾರವನ್ನು ಈ ಬಾರಿ ಪಡೆಯುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಸಮಾವೇಶದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಸಿಂದಗಿ ಮತಕ್ಷೇತ್ರದಲ್ಲಿ ಜನತೆ ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಭರವಸೆ ಕೊಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಅಸಂಬದ್ಧ ಯೋಜನೆಗಳು ಜನತೆಯನ್ನು ದಾರಿತಪ್ಪಿಸುತ್ತಿವೆ. ಕಳೆದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನೀಡಿದ ಅನ್ನಭಾಗ್ಯ ಯೋಜನೆ ಬಿಜೆಪಿ ಕಡಿತಗೊಳಿಸಿದೆ. ಇದರಿಂದ ಮಧ್ಯಮ ವರ್ಗದ ಜನತೆಯ ಬದುಕು ಬೀದಿಗೆ ಬಂದಂತಾಗಿದೆ. ಬಡವರ, ಕಾರ್ಮಿಕರ ಮತ್ತು ಹಿಂದುಳಿದವರ ಹೊಟ್ಟೆಯ ಮೇಲೆ ಬಿಜೆಪಿ ಸರ್ಕಾರ ಹೊಡೆಯುವ ಪ್ರಯತ್ನ ಮಾಡುತ್ತಿದೆ ಎಂದರು.

ಉಪ ಚುಣಾವಣೆಯಲ್ಲಿ ಈ ಬಾರಿ ನಾನೂ ಕೂಡಾ ಕಾಂಗ್ರೆಸ್‌ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿ ಈ ಬಾರಿ ನನಗೆ ಸಿಗುವ ಭರವಸೆ ಇದೆ. ಆದರೂ ಪಕ್ಷಕ್ಕೆ ನಾನು ಎಲ್ಲ ರೀತಿಯಿಂದಲೂ ಬದ್ಧವಾಗಿದ್ದೇನೆ. ಟಿಕೆಟ್‌ ನನ್ನ ಹೊರತು ಯಾರಿಗಾದರೂ ನೀಡಿದರೂ ಪಕ್ಷದ ಗೆಲುವಿಗೆ ಸಂಪೂರ್ಣ ಕೈ ಜೋಡಿಸುತ್ತೇನೆ ಎಂದರು.

ವೇದಿಕೆ ಮೇಲೆ ಕಾಂಗ್ರೆಸ್‌ ಮುಖಂಡರಾದ ಶರಣಪ್ಪ ವಾರದ, ಅಶೋಕ ವಾರದ, ಶರಣಗೌಡ ಪಾಟೀಲ ಗುಂದಗಿ, ಚನ್ನು ವಾರದ, ಚಂದ್ರಗೌಡ ಪಾಟೀಲ, ಮಲ್ಲು ಘತ್ತರಗಿ, ಮಲ್ಲಿಕಾರ್ಜುನ ಸಾವಳಸಂಗ ಬೋರಗಿ, ಸಿದ್ದಣ್ಣ ಹಿರೇಕುರುಬರ, ಹಣಮಂತ ಸುಣಗಾರ, ಸಂದೀಪ ಚೌರ, ಎಂ.ಎ. ಖತೀಬ, ಗೋಲ್ಲಾಳಪ್ಪಗೌಡ ರೂಗಿ, ವಿಠ್ಠಲಗೌಡ ಬಿರಾದಾರ, ಮುರಗೆಪ್ಪಗೌಡ ರದ್ದೇವಾಡಗಿ, ಸಿ.ಎಂ.ದೇವರಡ್ಡಿ, ಎಚ್‌.ಕೆ.ಪೂಜಾರಿ, ಭಾರತಿ ನಾವಿ, ಸುಜಾತಾ ಸಿಂಧೆ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಇದ್ದರು. ಸಮಾವೇಶಕ್ಕೂ ಮುಂಚೆ ಅನೇಕ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ಸಮಾವೇಶ ಸ್ಥಳದ ವರೆಗೂ ಬೈಕ್‌ ರಾರ‍ಯಲಿ ಮಾಡಲಾಯಿತು.
 

Latest Videos
Follow Us:
Download App:
  • android
  • ios