Asianet Suvarna News Asianet Suvarna News

ಸಂಚಲನ ಉಂಟು ಮಾಡಿದೆ ಸಿದ್ದರಾಮಯ್ಯ ಸುದ್ದಿ : JDS,BJPಯಲ್ಲಿ ತಳಮಳ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ವಿಚಾರವೊಂದು ಇದೀಗ ಸಾಕಷ್ಟು ಸಂಚಲನವ್ನೇ ಉಂಟು ಮಾಡುತ್ತಿದೆ. ಅವರ ಕ್ಷೇತ್ರ ಬದಲಾವಣೆ ವಿಚಾರ ಸುದ್ದಿಯಾಗುತ್ತಿದ್ದು ದಳ ಹಾಗೂ ಬಿಜೆಪಿಯಲ್ಲಿ ಭಾರೀ ತಳಮಳವನ್ನುಂಟು ಮಾಡಿದೆ.

Congress Leader Siddaramaiah Likely To contest From Kolar in 2023 Assembly election snr
Author
Bengaluru, First Published Mar 31, 2021, 1:29 PM IST

ಕೋಲಾರ (ಮಾ.31):  ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ತರುವ ವಿಚಾರ ಸದ್ದು ಗದ್ದಲವಿಲ್ಲದೆ ನಡೆಯುತ್ತಿದ್ದು ಪ್ರಮುಖವಾಗಿ ಸ್ಪೀಕರ್‌ ರಮೇಶ್‌ ಕುಮಾರ್‌ ಭಾರಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಭಾನುವಾರ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಈ ವಿಷಯ ಪ್ರಸ್ತಾಪಿಸಿರುವುದು ಜಿಲ್ಲಾ ರಾಜಕಾರಣದಲ್ಲಿ ಸಂಚಲನವನ್ನುಂಟು ಮಾಡಿದ್ದು ಪ್ರಮುಖವಾಗಿ ಜೆಡಿಎಸ್‌ ಹಾಗು ಬಿಜೆಪಿಗರಿಗೆ ತಳಮಳವನ್ನುಂಟು ಮಾಡಿದೆ.

ಹಾಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮತ್ತು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ತೀವ್ರ ರಾಜಕೀಯ ವಿರೋಧಗಳನ್ನು ಎದುರಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸುಲಭವಾಗಿ ಗೆದ್ದು ಬರುವ ಕ್ಷೇತ್ರ ಯಾವುದು ಎಂಬ ಹುಡುಕಾಟ ನಡೆಯುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರವೇ ಸೇಫ್‌ ಎನ್ನುವ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕೋಲಾರಕ್ಕೆ ತರುವ ಪ್ರಯತ್ನಗಳು ದಟ್ಟವಾಗಿ ನಡೆಯುತ್ತಿವೆ.

ಕಾಂಗ್ರೆಸ್‌ಗೆ ಶುರುವಾಗಿದೆ ಸೋಲಿನ ಭೀತಿ .

ಸಿದ್ದರಾಮಯ್ಯ ಅವರನ್ನು ಮುಂದಿನ ವಿಧಾನಸಭೆ ಸೋಲಿಸಿ ಮನೆಗೆ ಕಳಿಸುವ ಯತ್ನಗಳು ನಡೆಯುತ್ತಿದ್ದು, ಇದರ ಬೆನ್ನಲ್ಲೆ ಸಿದ್ದರಾಮಯ್ಯ ಅವರ ಆಪ್ತ ಬಳಗವು ಅವರಿಗೆ ಸೇಫ್‌ ಜಾಗ ಯಾವುದು ಎಂಬ ಹುಡುಕಾಟದಲ್ಲಿ ತೊಡಗಿವೆ.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿಧಾನಸಭೆಗೆ ಬರಲು ಪ್ರಯಾಸ ಪಡಬೇಕಾಯಿತು. ಅವರ ಸ್ವಂತ ಕ್ಷೇತ್ರ ಚಾಮುಂಡೇಶ್ವರಿಯನ್ನು ಪ್ರಬಲ ಪೈಪೋಟಿ ನಡುವೆ ಕಳೆದುಕೊಳ್ಳಬೇಕಾಯಿತು. ಆದರೆ ಬಾದಾಮಿ ಕ್ಷೇತ್ರವು ಅವರನ್ನು ಕೈ ಹಿಡಿಯಿತು. ಸದ್ಯ ಬಾದಾಮಿಯಲ್ಲೂ ಅವರನ್ನು ಸೋಲಿಸಲು ವಿರೋಧಿಗಳು ಹುನ್ನಾರ ನಡೆಸುತ್ತಿರುವುದರಿಂದ ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ಭವಿಷ್ಯ ಏನು ಎಂದು ಯೋಚಿಸುತ್ತಿರುವ ಅವರ ಆಪ್ತ ಬಳಗವು ಬಾದಾಮಿಗಿಂತಲೂ ಕೋಲಾರ ಅತಿ ಹೆಚ್ಚು ಸುರಕ್ಷಿತ ಕ್ಷೇತ್ರ ಎಂದು ಲೆಕ್ಕಾಚಾರ ಹಾಕಿದೆಯಂತೆ.

ಕೋಲಾರ ಕ್ಷೇತ್ರದಲ್ಲಿ 55 ಸಾವಿರ ಮುಸ್ಲಿಂ ಸಮುದಾಯದ ಮತಗಳು, 60 ಸಾವಿರ ದಲಿತ ಮತಗಳು, ಕುರುಬ ಸೇರಿದಂತೆ 60 ಸಾವಿರ ಹಿಂದುಳಿದ ವರ್ಗಗಳ ಮತಗಳು ಇವೆ. ಇಲ್ಲಿ ಸಾಂಪ್ರದಾಯಕ ಕಾಂಗ್ರೆಸ್‌ನ ಒಕ್ಕಲಿಗ ಮತಗಳೂ ಸಿಗುತ್ತವೆ. ಇಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಎಚ್‌.ಡಿ.ಕುಮಾರಸ್ವಾಮಿ ಆಟ ನಡೆಯುವುದಕ್ಕೂ ಆಸ್ಪದ ಇಲ್ಲ ಎನ್ನುವ ಲೆಕ್ಕಾಚಾರವೂ ಇದೆ.

ಅಹಿಂದ ಹೋರಾಟಕ್ಕೆ ಸಿದ್ದು ಇರಬೇಕು:

ಇತ್ತ ಕೋಲಾರದಲ್ಲಿಯೂ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮದ್‌ ಸೇರಿದಂತೆ ಜಿಲ್ಲೆಯ ಕೆಲ ಕಾಂಗ್ರೆಸ್‌ ಶಾಸಕರೂ ಅವರನ್ನು ಕರೆತರಲು ಮುಂದಾಗಿದ್ದಾರೆ.

ಸಿದ್ದರಾಮಯ್ಯ ಅಹಿಂದ ವರ್ಗಗಳನ್ನು ಕೈ ಹಿಡಿಯ ಬಲ್ಲ ನಾಯಕರು. ಅವರು ವಿಧಾನಸಭೆ ಒಳಗೆ ಮತ್ತು ಹೊರಗೆ ಈ ವರ್ಗಗಳ ಪರ ಹೋರಾಟ ಮಾಡಬಲ್ಲವರು. ಇದರಿಂದ ಅವರನ್ನು ಕೋಲಾರಕ್ಕೆ ತಂದು ಗೆಲ್ಲಿಸಿ ಕಳಿಸಬೇಕು ಎನ್ನುವುದು ಕೆಲ ದಲಿತ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ಮುಖಂಡರ ಮನದಾಸೆಯೂ ಅಗಿದೆಯಂತೆ.

ಮುಳಬಾಗಿಲಿಗೆ ಟಿಕೆಟ್‌ ಕೊಟ್ಟರೆ ಸಾಕು:

ಸಿದ್ದರಾಮಯ್ಯ ಕೋಲಾರಕ್ಕೆ ತರುವ ಪ್ರಯತ್ನ ರಮೇಶ್‌ ಕುಮಾರ್‌ರಿಂದ ನಡೆಯುತ್ತಿರುವುದರಿಂದ ರಮೇಶ್‌ ಕುಮಾರ್‌ರನ್ನು ತೀವ್ರವಾಗಿ ವಿರೋಧಿಸುವ ಕೆ.ಎಚ್‌.ಮುನಿಯಪ್ಪ ಕಥೆ ಏನು ಎಂಬ ಪ್ರಶ್ನೆಗಳೂ ಎದ್ದಿವೆ.

ಸಿದ್ದರಾಮಯ್ಯ ಕೋಲಾರಕ್ಕೆ ಬರುವುದಿದ್ದರೆ ಬರಲಿ ಅದಕ್ಕೆ ನನ್ನ ವಿರೋಧವೇನೂ ಇಲ್ಲ, ರಾಷ್ಟ್ರ ರಾಜಕಾರಣ ನನಗೆ ಸಾಕಾಗಿದೆ, ನನಗೆ ಮುಳಬಾಗಿಲು ಕ್ಷೇತ್ರದ ಟಿಕೆಟ್‌ ಕೊಟ್ಟರೆ ಸಾಕು ಎಂದು ಮುನಿಯಪ್ಪ ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.

ಶ್ರೀನಿವಾಸಗೌಡ ಕಥೆ ಏನು:  ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಿದರೆ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡರ ಮುಂದಿನ ಕಥೆ ಏನು ಎಂಬ ಪ್ರಶ್ನೆಗಳೂ ಮೇಲೆದ್ದಿವೆ. ಜೆಡಿಎಸ್‌ ಹೈಕಮಾಂಡ್‌ ನಾಯಕರೊಂದಿಗೆ ಅಂತರ ಕಾಯ್ದುಕೊಂಡು ರಮೇಶ್‌ ಕುಮಾರ್‌ ಬಳಗದೊಂದಿಗೆ ಒಡನಾಟ ಬೆಳೆಸಿಕೊಂಡಿರುವ ಶ್ರೀನಿವಾಸಗೌಡರ ಮುಂದಿನ ರಾಜಕೀಯ ಭವಿಷ್ಯ ಏನು, ಆವರು ರಾಜಕೀಯವಾಗಿ ನಿವೃತ್ತಿ ಹೊಂದುತ್ತಾರೆಯೇ ಎಂಬ ಪ್ರಶ್ನೆಗಳೂ ಎದ್ದಿವೆ.

ಈಗಾಗಲೇ ರಾಜಕಾರಣದಲ್ಲಿ ಸಾಕಷ್ಟುಏಳು ಬೀಳುಗಳನ್ನು ಕಂಡಿರುವ ಶ್ರೀನಿವಾಸಗೌಡರಿಗೆ ವಯಸ್ಸಾಗಿದೆ, ಇವತ್ತಿನ ಚುನಾವಣೆಗಳು ಅತ್ಯಂತ ದುಬಾರಿ ಎನಿಸಿವೆ ಇದರಿಂದ ಅವರು ವಿಧಾನ ಪರಿಷತ್‌ಗೆ ಆಸಕ್ತಿ ತೋರಬಹುದು ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಕೋಲಾರಕ್ಕೆ ಬರುವರೆಂಬ ಸುದ್ದಿಯು ತೀವ್ರ ಸಂಚಲನವನ್ನುಂಟು ಮಾಡಿದೆ.

Follow Us:
Download App:
  • android
  • ios