ವಿಜಯಪುರ(ಏ.24): ಹೆಣಗಳ ಮೇಲೆ ರಾಜಕೀಯ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಗೊತ್ತು ಗುರಿಯಿಲ್ಲದೆ ಕೊರೋನಾ ನಿಯಮಾವಳಿ ತರುವುದರ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶ್ರೀಕಾಂತ ಛಾಯಾಗೋಳ ಆರೋಪಿಸಿದ್ದಾರೆ.

ಕಳೆದ ನವೆಂಬರ್‌ನಲ್ಲಿಯೇ ತಜ್ಞರ ಸಮಿತಿ ಎಚ್ಚರಿಕೆ ನೀಡಿತ್ತು. ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಎರಡನೇ ಅಲೆ ರಾಜ್ಯಕ್ಕೆ ಕಂಟಕವಾಗುತ್ತದೆ ಎಂದು ತಿಳಿಸಿದ್ದರು. ಆದರೆ ಎಡಬಿಡಂಗಿ ಸರ್ಕಾರ ಚುನಾವಣೆಯಲ್ಲಿ ಬ್ಯುಸಿಯಾಗಿ ಇಡೀ ರಾಜ್ಯವನ್ನೇ ಕಂಗಾಲಾಗುವಂತೆ ಮಾಡಿದೆ. ಕೊರೋನಾ ಸಂಕಷ್ಟದಿಂದ ಸಾರ್ವಜನಿಕರೆಲ್ಲರಿಗೂ ತೊಂದರೆ ಕೊಡುತ್ತಿದ್ದು, ಹೆಣಗಳ ರಾಶಿ ಮೇಲೆ ರಾಜಕೀಯ ಮಾಡುತ್ತಿದೆ. ಸ್ಮಶಾನದಲ್ಲಿಯೂ ಬಿಜೆಪಿಯವರಿಗೆ ಪ್ರಥಮಾದ್ಯತೆ ಕೊಡಿಸುವ ಕಾರ್ಯದಲ್ಲಿ ಬಿಜೆಪಿ ನಾಯಕರು ತೊಡಗಿರುವುದು ನಾಚಿಗೇಡಿನ ಕೆಲಸವಾಗಿದೆ ಎಂದು ಟೀಕಿಸಿದ್ದಾರೆ.

ಸಂಕಷ್ಟಕ್ಕೆ ನೆರವಾದ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್, ಸಚಿವ ಸುಧಾಕರ್ ಧನ್ಯವಾದ!

ಇಡೀ ವ್ಯವಸ್ಥೆಯೇ ಹಳ್ಳ ಹಿಡಿಸಿದ್ದಾರೆ. ರಾಜ್ಯದ ಯಾವುದೇ ಆಸ್ಪತ್ರೆಗೆ ಹೋದರೂ ಬೆಡ್‌ ಸಿಗುತ್ತಿಲ್ಲ. ಬೆಡ್‌ ಇದ್ದರೆ ವೆಂಟಿಲೇಟರ್‌ ಇಲ್ಲ. ಹೀಗಾಗಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಜನಸಾಮಾನ್ಯರಲ್ಲಿ ಆತಂಕದ ಜೊತೆಗೆ ಭಯಾನಕ ವಾತಾವರಣಕ್ಕೆ ಬೆಚ್ಚಿ ಬಿದ್ದಿದ್ದಾರೆ. ಕಣ್ಣ ಮುಂದೆಯೇ ಸಾವು ನೋವಿನ ನರಕ ದರ್ಶನವಾಗುತ್ತಿದೆ ಎಂದರು.

ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ತಾಳೆ ಇಲ್ಲದೆ ದಿನಕ್ಕೊಂದು, ಗಂಟೆಗೊಂದು ನಿಯಮಗಳನ್ನು ಜಾರಿಗೆ ತರುತ್ತ ವ್ಯಾಪಾರಸ್ಥರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಹೈರಾಣಾಗಿಸಿದ್ದಾರೆ. ಜನಸಾಮಾನ್ಯರಿಗೆ ಕಾಪಾಡುವ ನಿಟ್ಟಿನಲ್ಲಿ ಸರ್ವಪಕ್ಷಗಳ ಸಹಕಾರ ಪಡೆದು, ಪರಿಸ್ಥಿತಿ ಕೈಮೀರುವ ಮುಂಚೆ ಕಟ್ಟುನಿಟ್ಟಿನ ಪಾರದರ್ಶಕ ಕ್ರಮ ಕೈಗೊಳ್ಳಬೇಕು. ಯಾವುದೇ ಕಾಲಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿಯೊಂದು ಇಲಾಖೆಗಳು ದಿನದ 24 ಗಂಟೆ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.