ಕೇಂದ್ರ ಸರ್ಕಾರದಿಂದ ದೇಶ ಲೂಟಿ: ಶಿವರಾಜ್‌ ತಂಗಡಗಿ

* ಪೆಟ್ರೋಲ್‌ ಮತ್ತು ಡೀಸೆಲ್‌ ಹಾಕಿಸಿಕೊಳ್ಳಲು ಬಂದ ಗ್ರಾಹಕರ ಅಭಿಪ್ರಾಯ ಸಂಗ್ರಹ
* ಮುಂದಿನ ದಿನಗಳಲ್ಲಿ ಜನರು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ
* ಭರವಸೆಗಳ ಗೋಪುರವನ್ನೇ ತೋರಿಸಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ

Congress Leader Shivaraj Tangadagi Slam BJP Government grg

ಕಾರಟಗಿ(ಜೂ.14): ದುಡಿದ ಹಣ ಕುಟುಂಬಕ್ಕೆ, ದೇಶಕ್ಕೆ ಸಲ್ಲಬೇಕಿದೆ. ಆದರೆ, ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನಸಾಮಾನ್ಯರು ದುಡಿದ ಹಣ ಅಂಧ ದೇಶಭಕ್ತಿಗೆ ಸಲ್ಲುತ್ತಿದೆ. ಇದನ್ನು ಗಮನಿಸದ ಬಿಜೆಪಿ ಕಾರ್ಯಕರ್ತರು, ಅಂಧಭಕ್ತಿಯಲ್ಲಿ ಮುಳುಗಿರುವವರು ದೇಶಭಕ್ತಿಯ ಹೆಸರಿನಲ್ಲಿ ಬಿಜೆಪಿಯ ವೈಫಲ್ಯಗಳನ್ನು ಸಾಧನೆ ಎಂಬಂತೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ, ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ್‌ ತಂಗಡಗಿ ಟೀಕಿಸಿದ್ದಾರೆ. 

ತೈಲ ಬೆಲೆ ಏರಿಕೆ ವಿರೋಧಿಸಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದ ಬಳಿಯ ಪೆಟ್ರೋಲ್‌ ಬಂಕ್‌ನಲ್ಲಿ ಭಾನುವಾರ ಕಾಂಗ್ರೆಸ್‌ ಆಯೋಜಿಸಿದ್ದ ‘100 ನಾಟೌಟ್‌’ ಪ್ರತಿಭಟನೆಯಲ್ಲಿ ಮಾತನಾಡಿದರು. ಪೆಟ್ರೋಲ್‌ ಮತ್ತು ಡೀಸೆಲ್‌ ಹಾಕಿಸಿಕೊಳ್ಳಲು ಬಂದ ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿದ ಅವರು ಪೆಟ್ರೋಲ್‌ ಬೆಲೆ ನೂರ ಗಡಿ ದಾಟಿದ ಹಿನ್ನೆಲೆ ಸಿಹಿ ತಿನಿಸಿ ಇನ್ನಾದರೂ ದೇಶದ ಜನ ಬಿಜೆಪಿಯಿಂದ ಎಚ್ಚೆತ್ತುಕೊಳ್ಳಿ ಎಂದರು.

ಕೊಪ್ಪಳ: ಕೊರೋನಾ ಗೆದ್ದುಬಂದವ ಈಗ ಕೋವಿಡ್‌ ಆಸ್ಪತ್ರೆ ಸ್ವಯಂ ಸೇವಕ

ದೇಶವನ್ನು ಲೂಟಿ ಮಾಡುತ್ತಿರುವ ಕೇಂದ್ರ ಸರ್ಕಾರವನ್ನು ಅಂಧಭಕ್ತಿಯಲ್ಲಿ ಮುಳುಗಿರುವವರು ದೇಶಭಕ್ತಿಯ ಹೆಸರಲ್ಲಿ ಸಮರ್ಥಿಸಿಕೊಳ್ಳುತ್ತಿರುವುದು ಈ ದೇಶದ ದುರಂತ ಎಂದು ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಜನತೆಗೆ ಭರವಸೆಗಳ ಗೋಪುರವನ್ನೇ ತೋರಿಸಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಕಳೆದ ಏಳು ವರ್ಷಗಳಲ್ಲಿ ಅಭಿವೃದ್ಧಿ ಸಾಧನೆ ಶೂನ್ಯ. ಅಲ್ಲದೆ, ಈಗಾಗಲೇ ನೋಟ್‌ಬ್ಯಾನ್‌, ಜಿಎಸ್‌ಟಿ, ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಆಹಾರ ಧಾನ್ಯಗಳ ಬೆಲೆ ಏರಿಕೆಯಂಥ ಬರೆಗಳ ಕೊಡುಗೆ ನೀಡಿದೆ. ಇನ್ನು, ಕಾಂಗ್ರೆಸ್‌ನ 70 ವರ್ಷಗಳ ಸಾಧನೆ ಪ್ರಶ್ನಿಸುತ್ತಿದ್ದ ಬಿಜೆಪಿ ನಾಯಕರು ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಕಟ್ಟಿದ ಸಾರ್ವಜನಿಕ ಉದ್ದಿಮೆ, ಆಸ್ತಿಗಳನ್ನು ಈಗ 7 ವರ್ಷಗಳಿಂದ ನಿರಂತರವಾಗಿ ಮಾರಾಟ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಪರಿಷತ್‌ ಸದಸ್ಯ ಪ್ರಕಾಶ್‌ ರಾಠೋಡ್‌ ಮಾತನಾಡಿ, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಿದ್ದರೂ ದೇಶದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನೆರೆಯ ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಸುತ್ತಲಿನ ರಾಷ್ಟ್ರಗಳಲ್ಲಿ ತೈಲ ಬೆಲೆ ಕಡಿಮೆಯಿದೆ. ದೇಶವನ್ನು ನಡೆಸಲಾಗದವರು, ಅಭಿವೃದ್ಧಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿ, ಜನರನ್ನು ಮರಳು ಮಾಡಿದ್ದರು. ಈಗ ಆಡಳಿತದ ಬಿಸಿ ಜನರಿಗೆ ತಟ್ಟಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷ ಸಿ.ಎಚ್‌. ರವಿನಂದ, ಪ್ರಮುಖರಾದ ಶರಣೇಗೌಡ ಮಾ.ಪಾ., ಟಿವಿಎಸ್‌ ವೀರೇಶ ಶೆಟ್ಟರ್‌, ರಮೇಶ ಕೋಟ್ಯಾಳ, ಶರಣಪ್ಪ ಕಾಯಿಗಡ್ಡಿ ಇತರರಿದ್ದರು. ಪೆಟ್ರೋಲ್‌ ಹಾಕಿಸಿದರು ಪ್ರತಿಭಟನೆ ವೇಳೆಯಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳಲು ಬಂದಿದ್ದ ಕೆಲ ಬೈಕ್‌ ಸವಾರರಿಗೆ ಮಾಜಿ ಸಚಿವ ತಂಗಡಗಿಯೇ ತಲಾ 100 ಗಳಂತೆ ಪೆಟ್ರೋಲ್‌ ಹಾಕಿಸಿದರು. ನಂತರ ಸವಾರರಿಗೆ ಗುಲಾಬಿ ಹೂವು ಮತ್ತು ಸಿಹಿ ನೀಡಿದರು.
 

Latest Videos
Follow Us:
Download App:
  • android
  • ios