* ಕೋವಿಡ್‌ನಿಂದ ಸಾವಿಗೀಡಾದವರಿಗೆ ಲಕ್ಷ ರು. ಪರಿಹಾರ ಬಂತಾ? * ಕೋವಿಡ್‌ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲ* ಬಿಜೆಪಿಗೆ ರಾಜ್ಯದಲ್ಲಿ ಜನರು ಸಂಪೂರ್ಣ ಬಹುಮತ ನೀಡಿಲ್ಲ

ಹಗರಿಬೊಮ್ಮನಹಳ್ಳಿ(ಜು.21): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಳ್ಳು ಹೇಳುವ ಮನುಷ್ಯ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ಟೀಕಿಸಿದ್ದಾರೆ. 

ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಕಾಂಗ್ರೆಸ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಕೋವಿಡ್‌ ಸಹಾಯಹಸ್ತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್‌, ಸಿಲಿಂಡರ್‌ ಬೆಲೆಗಳ ಏರಿಕೆಯೊಂದಿಗೆ ಅಗತ್ಯ ವಸ್ತುಗಳು ಗಗನಕ್ಕೇರಲು ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. 

ಕೋವಿಡ್‌ನಿಂದ ಸಾವಿಗೀಡಾದವರಿಗೆ ಲಕ್ಷ ರು. ಪರಿಹಾರ ಬಂತಾ? ಬೆಳೆ ನಷ್ಟವಾದ ರೈತರಿಗೆ ಪರಿಹಾರ ದೊರೆಯಿತಾ? ನಿರುದ್ಯೋಗಿಗಳಿಗೆ ಕೆಲಸ ಸಿಕ್ಕಿತೆ ಎಂಬೆಲ್ಲಾ ಪ್ರಶ್ನೆಗಳನ್ನು ನಮ್ಮ ಕಾಂಗ್ರೆಸ್‌ ಕಾರ್ಯಕರ್ತರು ಸಾರ್ವಜನಿಕರ ಮನೆ ಮನೆಗೆ ಹೋಗಿ ಪ್ರಶ್ನಿಸಬೇಕು. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಮಾಡುತ್ತೀರಿ. ಪಕ್ಷವನ್ನು ಸದೃಢವಾಗಿ ಕಟ್ಟುತೀರಿ ಎಂದು ಪಕ್ಷ ನಂಬಿದೆ. ಆ ನಂಬಿಕೆ ಉಳಿಯುವಂತ ಕೆಲಸ ಮಾಡಬೇಕಿದೆ ಎಂದರು.

ಕಡಿಮೆ ಲಸಿಕೆ ನೀಡಿ ದೊಡ್ಡ ಪ್ರಚಾರ ಪಡೆಯುತ್ತಿರುವ ಬಿಜೆಪಿ: ಲಾಡ್‌

ಶಾಸಕ ಭೀಮಾನಾಯ್ಕ್‌ ಮಾತನಾಡಿ, ಕೋವಿಡ್‌ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಬಿಜೆಪಿಗೆ ರಾಜ್ಯದಲ್ಲಿ ಜನರು ಸಂಪೂರ್ಣ ಬಹುಮತ ನೀಡಿಲ್ಲ. ಆದರೂ ಹಿಂಬಾಗಿಲ ರಾಜಕಾರಣ ಮಾಡಿಕೊಂಡು ಬಂದು ಈಗ ರಾಜ್ಯ ಕ್ಷೇಮಕ್ಕಿಂತ, ಅವರಲ್ಲಿ ಕಿತ್ತಾಟ ಆರಂಭವಾಗಿದೆ ಎಂದರು.

ಸಂಡೂರು ಶಾಸಕ ಈ. ತುಕಾರಾಂ, ಕಾಂಗ್ರೆಸ್‌ನ ಗ್ರಾಮೀಣ ಪ್ರದೇಶದ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ ಹಾಗೂ ಮಹಿಳಾ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ ಮಾತನಾಡಿದರು. ಜಿಪಂ ಮಾಜಿ ಸದಸ್ಯರಾದ ಹೆಗ್ಡಾಳ್‌ ರಾಮಣ್ಣ, ಅಕ್ಕಿ ತೋಟೇಶ್‌, ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ, ಮಹಿಳಾ ತಾಲೂಕು ಅಧ್ಯಕ್ಷೆ ಯಶೋದಾ, ಭಾನಮ್ಮ, ಮುಖಂಡರಾದ ಇಮಾಮ್‌, ಮಹಮದ್‌, ನೆಲ್ಲು ಇಸ್ಮಾಯಿಲ್‌, ಚಿಂತ್ರಪಳ್ಳಿ ದೇವೇಂದ್ರ, ಕನ್ನಿಹಳ್ಳಿ ಚಂದ್ರಶೇಖರ್‌, ಡಿಶ್‌ ಮಂಜುನಾಥ, ಪತ್ರೇಶ್‌ ಹಿರೇಮಠ್‌ ಮತ್ತಿತರರು ಇದ್ದರು.