ಬಿಜೆಪಿಗರು ಚುನಾವಣೆಯಲ್ಲಿ ಗೆಲ್ಲುವ ಹಗಲುಗನಸು ಕಾಣ್ತಿದ್ದಾರೆ: ಧ್ರುವನಾರಾಯಣ
ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನತೆ ಬೇಸತ್ತಿದ್ದಾರೆ| ಕಳೆದ ಒಂದೂವರೆ ವರ್ಷಗಳಿಂದ ಮಸ್ಕಿ ಕ್ಷೇತ್ರ ಅಭಿವೃದ್ದಿ ಹೊಂದದೆ ಅನಾಥ| ಬಸನಗೌಡ ತುರ್ವಿಹಾಳ ಅವರು 15 ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತಾರೆ| ಚುನಾವಣೆಯಲ್ಲಿ ಬಿಜೆಪಿ ಕುತಂತ್ರ: ಧ್ರುವನಾರಾಯಣ|
ಸಿಂಧನೂರು(ಏ.16): ಬಿಜೆಪಿಯವರು ಹಣ ಹಂಚಿ, ಅಧಿಕಾರ ದುರುಪಯೋಗ ಪಡಿಸಿಕೊಂಡು, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಮತ್ತು ಕುತಂತ್ರದಿಂದ ಚುನಾವಣೆಯಲ್ಲಿ ಗೆಲ್ಲುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಮಸ್ಕಿ ಉಪಚುನಾವಣೆಯ ಕಾಂಗ್ರೆಸ್ ಉಸ್ತುವಾರಿ ಆರ್.ಧ್ರುವನಾರಾಯಣ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಸ್ಕಿ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ಇದುವರೆಗೂ ಬಿಜೆಪಿ ಮುಖಂಡರ ಮೇಲೆ ಐದು ಪ್ರಕರಣಗಳು ದಾಖಲಾಗಿವೆ. ಮಟ್ಟೂರು ಗ್ರಾಮದಲ್ಲಿ 50 ಲಕ್ಷ ಹಣ ತುಂಬಿದ ಚೀಲ ಸಿಕ್ಕಿದ್ದು, ಈ ದೃಶ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಆದರೆ ಮುದಗಲ್ ಸಬ್‌ಇನ್ಸ್‌ಪೆಕ್ಟರ್ ಮೊಬೈಲ್ ಪಡೆದುಕೊಂಡು ವಿಡಿಯೋ ಡಿಲೀಟ್ ಮಾಡಿ ಆಡಳಿತ ಪಕ್ಷದ ಪರ ಕೆಲಸ ಮಾಡಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಚುನಾವಣಾ ಉಸ್ತುವಾರಿ ಆಮ್ಲಾನ್ ಬಿಸ್ವಾಸ್ ಅವರು ಸಬ್‌ಇನ್ಸ್‌ಪೆಕ್ಟರ್‌ನ್ನು ವರ್ಗಾಯಿಸಿ, ತನಿಖೆಗೆ ಆದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.
'ಚುನಾವಣೆ ನೀತಿ ಸಂಹಿತೆ ಉಲ್ಲಂಘಣೆ, ಸಿಎಂ ಬಿಎಸ್‌ವೈ ವಿರುದ್ಧ ದೂರು'
ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನತೆ ಬೇಸತ್ತಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಮಸ್ಕಿ ಕ್ಷೇತ್ರ ಅಭಿವೃದ್ದಿ ಹೊಂದದೆ ಅನಾಥವಾಗಿದೆ. ಕ್ಷೇತ್ರದ ಅಭಿವೃದ್ಧಿ ಮರೆತು ಹಣಕ್ಕಾಗಿ ಮಾರಾಟವಾಗಿರುವ ಪ್ರತಾಪಗೌಡ ಪಾಟೀಲರಿಗೆ ಸ್ವಾಭಿಮಾನಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಅನುಕಂಪದ ಅಲೆ ಇರುವ ಆರ್.ಬಸನಗೌಡ ತುರ್ವಿಹಾಳ ಅವರು 15 ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಇದ್ದರು.