ವಿಜಯಪುರ(ಮೇ.15):  ಕೊರೋನಾ ಮೂರನೇ ಅಲೆ ಅಪ್ಪಳಿಸಬಹುದು ಎಂಬ ತಜ್ಞರ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಯು ಮಕ್ಕಳಿಗಾಗಿಯೇ ವಿಶೇಷ ಘಟಕವನ್ನು ನಿರ್ಮಿಸಿದೆ. ಈಗಾಗಲೇ 60 ಆಕ್ಸಿಜನ್‌ ಬೆಡ್‌ಗಳನ್ನು ಸ್ಥಾಪನೆ ಮಾಡಿದ್ದು, ಇನ್ನೂ 60 ಬೆಡ್‌ಗಳ ಆಕ್ಸಿಜನ್‌ ಬೆಡ್‌ ನಿರ್ಮಿಸಲು ಮುಂದಾಗಿದೆ.

ಮೂರನೇ ಅಲೆಗೆ ಹೆಚ್ಚಾಗಿ ಮಕ್ಕಳೇ ಗುರಿಯಾಗುತ್ತಾರೆ ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಬಿಎಲ್‌ಡಿಇ ಆಸ್ಪತ್ರೆಯು ಈ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಮೂಲಕ ಸರ್ಕಾರ ಮತ್ತು ಇತರೆ ಆಸ್ಪತ್ರೆಗಳಿಗೂ ಮಾದರಿಯಾಗಿದೆ.

MB ಪಾಟೀಲ್‌ ನೇತೃತ್ವದ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸಾ ಶುಲ್ಕ ಶೇ.70 ಇಳಿಕೆ

ಶುಕ್ರವಾರ ನಗರದ ಬಿಎಲ್‌ಡಿಇ ಡೀಮ್ಡ್ ವಿವಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಿಎಲ್‌ಡಿಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ. ಪಾಟೀಲ, ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗುವ ಕುರಿತು ವರದಿಗಳು ಬರುತ್ತಿದ್ದು, ಇದನ್ನು ಗಮನದಲ್ಲಿರಿಸಿ, ನಾವು ಈಗಿನಿಂದಲೇ ಮಕ್ಕಳ ಚಿಕಿತ್ಸೆಗೆ ಹೆಚ್ಚು ನಿಗಾ ವಹಿಸುತ್ತೇವೆ. ಯಾವ ಮಗು ಸಹ ಚಿಕಿತ್ಸೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವ ಸಾಮಾಜಿಕ ಜವಾಬ್ದಾರಿ ನಮ್ಮ ಮೇಲಿದೆ. ಅದರ ಅನುಸಾರ ಹೆಚ್ಚಿನ ಬೆಡ್‌ಗಳು, ಆಕ್ಸಿಜನ್‌ ವ್ಯವಸ್ಥೆ ಮತ್ತು ವೆಂಟಿಲೇಟರ್‌ ವ್ಯವಸ್ಥೆ ಮಾಡಲು ಚಿಕ್ಕಮಕ್ಕಳ ವಿಭಾಗವನ್ನು ಈಗಿನಿಂದಲೇ ಸನ್ನದ್ಧಗೊಳಿಸಲು ಸಿದ್ದರಾಗಿದ್ದೇವೆ ಎಂದರು.

ಸಂಕಷ್ಟಕ್ಕೆ ನೆರವಾದ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್, ಸಚಿವ ಸುಧಾಕರ್ ಧನ್ಯವಾದ! ...

ಮುಖ್ಯವಾಗಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಇಂಜೆಕ್ಷನ್‌ ಮತ್ತು ಔಷಧಗಳನ್ನು ಈಗಿನಿಂದಲೇ ಸಂಗ್ರಹಿಸಲು ಸೂಚಿಸಿದರು. ವಿಶೇಷವಾಗಿ ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಆಗುವ ತೊಂದರೆಗಳು ಮತ್ತು ಸೂಕ್ತ ಚಿಕಿತ್ಸೆ ಕುರಿತು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ತಜ್ಞವೈದ್ಯರೊಂದಿಗೆ ಬಿಎಲ್‌ಡಿಇ ವೈದ್ಯರ ತಂಡ ಸಮಾಲೋಚನೆ, ಮಾಹಿತಿ, ನೆರವು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಗಾರ ಸಂಘಟಿಸಲು ತಿಳಿಸಿದ್ದಾರೆ.