ಬೆಳಗಾವಿ(ಮಾ.13): ರೈತರ ಹಿತದೃಷ್ಟಿಯಿಂದ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯದ ಮುಖಂಡ ಮಾರುತಿ ಮಾನ್ಪಡೆ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು 6 ವರ್ಷಗಳ ಹಿಂದೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ರೈತರ ಆದಾಯ ಮಾತ್ರ ದುಪ್ಪಟ್ಟು ಆಗಲಿಲ್ಲ. ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದೇ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವಾಗ ಸಮಗ್ರ ಕೃಷಿ ವೆಚ್ಚವನ್ನು ಪರಿಗಣಿಸಬೇಕು ಎಂದು ಸ್ವಾಮಿನಾಥನ್ ಆಯೋಗದ ವರದಿ ಸ್ಪಷ್ಟವಾಗಿ ಹೇಳಿದೆ. ಆದರೆ, ಕೃಷಿ ವೆಚ್ಚ ಲೆಕ್ಕ ಹಾಕುವಲ್ಲಿ ಕೇಂದ್ರ ತಪ್ಪು ಮಾಡುತ್ತಿದೆ. ಭೂ ಬಾಡಿಗೆ ಹಾಗೂ ಕುಟುಂಬದ ಶ್ರಮ ಎರಡನ್ನೂ ಸೇರಿಸಿ ಬೆಲೆ ನಿಗದಿಪಡಿಸಬೇಕೆಂಬ ಆಯೋಗದ ಶಿಫಾರಸನ್ನು ಕಡೆಗಣಿಸಿ, ಅವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಲಾಗುತ್ತಿದೆ. ಇದು ರೈತ ವಿರೋಧಿ ನೀತಿಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. 

ಕಬ್ಬು ಬೆಂಬಲ ಬೆಲೆ ನಿಗದಿಯಲ್ಲಿ ಅನ್ಯಾಯ: 

ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಕೇಂದ್ರ ಸರ್ಕಾರದ ಮಾರ್ಗಸೂಚಿ ಬದಲಾವಣೆಯಾಗಿಲ್ಲ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಪ್ರತಿ ಟನ್ ಕಬ್ಬಿಗೆ 4100 ನಿಗದಿ ಮಾಡಬೇಕು. ಆದರೆ, ಕೇಂದ್ರ ಸರ್ಕಾರ ಟನ್ ಕಬ್ಬಿಗೆ 2775 ದರ ನಿಗದಿಮಾಡಿದೆ. ಸಕ್ಕರೆ ಇಳುವರಿಯನ್ನು 9 ರಿಂದ 10 ಕ್ಕೇರಿಸಿದೆ. ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗಿದೆ. ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರದ ಕ್ರಮ ಅನಾನುಕೂಲವಾಗಿದೆ. ಪ್ರತಿಬಾರಿಯೂ ನಾವು ಬೆಂಬಲ ಬೆಲೆ ನೀಡುವಂತೆ ಭಿಕ್ಷೆ ಬೇಡುತ್ತಿದ್ದೇವೆ. ಕೇಂದ್ರ ಸರ್ಕಾರ ಕೂಡಲೇ ಹೊಸ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. 

ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸುವಂತೆ 200 ರೈತ ಸಂಘಟನೆಗಳು ಒಗ್ಗೂಡಿ ಕಿಸಾನ ಸಂಘರ್ಷ ಸಮಿತಿ ರಚಿಸಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರು ಪಡೆದಿರುವ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. 

16 ರಂದು ಕಿತ್ತೂರಲ್ಲಿ ಧರಣಿ:

ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್‌ಗಳು ರೈತರ ಪರವಾಗಿಲ್ಲ. ಉದ್ಯಮಿಗಳ ಪರವಾಗಿವೆ. ಕಿತ್ತೂರು ಬಳಿಯ ಕುಲವಳ್ಳಿ ಗ್ರಾಮದಲ್ಲಿ ರೈತರು ಹಲವಾರು ವರ್ಷಗಳಿಂದ ಸರ್ಕಾರ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಅವರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಮಾ. 16 ರಿಂದ ಕಿತ್ತೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಕೂಡಲೇ ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ರೈತರಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ಸುದ್ದಿಗೋಷ್ಠಿಯಲ್ಲಿ ಎಲ್.ಎಸ್. ನಾಯ್ಕ, ಬಸವಂತಪ್ಪ ಸೊಪ್ಪಿನ, ಜೆ.ಎಂ. ಜೈನೆಖಾನ್ ಉಪಸ್ಥಿತರಿದ್ದರು.

ರಾಜ್ಯ ಬಜೆಟ್‌ನಲ್ಲಿ ನೀರಾವರಿ ಯೋಜನೆ ನಿರ್ಲಕ್ಷ್ಯ: ಎಚ್ಕೆ

ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಸಚಿವ ಎಚ್. ಕೆ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. 
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಮಂಡನೆಯಾದ ಮಾರನೇ ದಿನ ಮುಖ್ಯಮಂತ್ರಿ, ಉತ್ತರ ಕರ್ನಾಟಕ ಶಾಸಕರು, ಮಂತ್ರಿಗಳು ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ಘೋಷಣೆ ಮಾಡಿರುವುದು ಸ್ವಲ್ಪ ಮಟ್ಟಿಗೆ ಗಮನ ಹರಿಸಿದರು. ಆದರೆ, ಈ ಅನುದಾನ ಏತಕ್ಕೂ ಸಾಲವುದಿಲ್ಲ. ಇದು ಆನೆ ಹೊಟ್ಟೆಗೆ ಅರೇಕಾಸಿನ ಮಜ್ಜಿಗೆಯಂತಾಗಿದೆ ಎಂದರು. 

ರಾಜ್ಯ ಸರ್ಕಾರ ಬಜೆಟ್ ಮೂಲಕ ವ್ಯವಸ್ಥಿತ ಕಾರ್ಯಕ್ರಮ ಘೋಷಣೆ ಮಾಡಿಲ್ಲ. ಬಜೆಟ್ ಅಧಿವೇಶನ ನಡೆಯುತ್ತಿದ್ದು, ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು. ಅಂತಾರಾಜ್ಯ ನೀರಾವರಿ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ರಾಜ್ಯದ ರಾಜಕೀಯ ಹೋರಾಟ ಕೇಂದ್ರದ ಮೇಲೆ ಪರಿಣಾ ಮಕಾರಿ ಒತ್ತಡ ಹೇರುವಲ್ಲಿ ವಿಫಲರಾಗಿದ್ದೇವೆ. ನಾವು ಹೋರಾಟದಲ್ಲಿ ಯಶಸ್ವಿಯಾಗಬೇಕಿದೆ ಎಂದು ಹೇಳಿದರು. 

ಕಳಸಾ- ಬಂಡೂರಿ ನಾಲಾ ಯೋಜನೆ ಹುಟ್ಟುಹಾಕಿದ್ದು ನಾನೇ. ಆದರೆ, ತಾಂತ್ರಿಕ ಸಮಸ್ಯೆಯಿಂದ ಈ ಯೋಜನೆ ಪೂರ್ಣಗೊಂಡಿಲ್ಲ. ಅರಣ್ಯ ಪ್ರದೇಶದಲ್ಲಿ ಕಾಮಗಾರಿಗೆ ನಿರಪೇಕ್ಷಣೆ ಪ್ರಮಾಣ ಪತ್ರ ದೊರೆಯಬೇಕಿದೆ. ಇದಕ್ಕೆ ಗೋವಾ ಸರ್ಕಾರ ತಕರಾರು ಮಾಡಬಹುದು. ಮಹದಾಯಿ ಯೋಜನೆಯಡಿ ಕಳಸಾ- ಬಂಡೂರಿ ನಾಲಾ ಕಾಮಗಾರಿಗೆ 1600 ರಿಂದ 18 ಸಾವಿರ ಕೋಟಿ ಅನುದಾನ ಬೇಕು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ 500 ಕೋಟಿ ಅನುದಾನ ಘೋಷಿಸಿರುವುದು ಸ್ವಾಗತಾರ್ಹ. ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ. ಆದರೆ, ಉಳಿದ ಭಾಗವನ್ನು ಅಭಿವೃದ್ಧಿಗೊಳಿಸಲು ಎಷ್ಟು ಹಣ ಕೊಡುತ್ತೀರಾ? ಹಂತ ಹಂತವಾಗಿ ಅನುದಾನ ಎಷ್ಟು ಕೊಡುತ್ತೀರಾ? ಎಂಬುದನ್ನು ಪ್ರಸ್ತಾಪ ಮಾಡಬೇಕಿತ್ತು ಎಂದು ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ನೇಮಕದಿಂದ ಅಸಮಾಧಾನ ಇಲ್ಲ ನೂತನ ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ನೇಮಕದಿಂದ ನನಗೆ ಯಾವುದೇ ಅಸಮಾಧಾನವಾಗಿಲ್ಲ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು. ಪಕ್ಷದ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ವ್ಯಕ್ತಿಗಳನ್ನೇ ಆಯ್ಕೆ ಮಾಡಿದೆ. ಮುಂದಿನ ದಿನಗಳಲ್ಲಿ ನನಗೂ ಪಕ್ಷದಲ್ಲಿ ಒಳ್ಳೆಯ ಜವಾಬ್ದಾರಿ ದೊರೆಯುವ ನಿರೀಕ್ಷೆಯಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಕಾರ್ಯಾಧ್ಯಕ್ಷರನ್ನು ಅಭಿನಂದಿಸಿದ ಅವರು, ಮಧ್ಯಪ್ರದೇಶದ ಜ್ಯೋತಿರಾ ದಿತ್ಯ ಸಿಂಧ್ಯಾ ಪಕ್ಷವನ್ನು ತೊರೆದಿರುವುದರಿಂದ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕಾಂಗ್ರೆಸ್ ಪಕ್ಷದ ವರಿಷ್ಠರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು. ಮಧ್ಯಪ್ರದೇಶದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆ ಒಳ್ಳೆಯದಲ್ಲ ಎಂದರು.