ಈಗ ಸತ್ಯದ ಅರಿವಾಗಿದೆ ಎಂದ ಕಾಂಗ್ರೆಸ್ ಮುಖಂಡ
ಈಗ ಸತ್ಯದ ಅರಿವಾಗಿದೆ ಎಂದು ಕಾಂಗ್ರೆಸ್ ಮುಖಂಡರೋರ್ವರು ಹೇಳಿದ್ದಾರೆ. ಹಾಗಾದರೆ ಕೈ ಮುಖಂಡ ಹೇಳಿದ್ದೇಕೆ..?
ರಾಮನಗರ (ಡಿ.04): ಕಾಂಗ್ರೆಸ್ ಸಾಧನೆಯನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಮಾಡುವುದು ಹಗಲುಗನಸು ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿಕೆಗೆ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.
ತಾಲೂಕಿನ ವಿಭೂತಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೇರು ಮಟ್ಟದಲ್ಲಿ ಕಾಂಗ್ರೆಸ್ ಸದೃಢವಾಗಿದೆ ಎಂದರು.
ಗ್ರಾಮ ಪಂಚಾಯ್ತಿ ಚುನಾವಣೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗುವ ವಿಶ್ವಾಸವಿದೆ. ತಾವು ಕ್ಷೇತ್ರ ಪ್ರವಾಸ ಕೈಗೊಂಡಿದ್ದು, ಕಾಂಗ್ರೆಸ್ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಅತ್ತ ಡಿಕೆಸು ಚುರುಕು - ಇತ್ತ ಅನಿತಾ ಬಿರುಸು : ತಣ್ಣಗಿರುವ ಬಿಜೆಪಿಗರು
ಸ್ಥಳೀಯರೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಿ: ಆಯಾಯ ಪಂಚಾಯ್ತಿ ವ್ಯಾಪ್ತಿಯ ಕಾರ್ಯಕರ್ತರೇ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಜನರ ಬಗ್ಗೆ ಕಾಳಜಿ ಇರುವಂತಹ, ಗ್ರಾಮ ಅಭಿವೃದ್ಧಿಗೆ ತುಡಿತ ಇರುವ ಅಭ್ಯರ್ಥಿಗಳನ್ನು ನಿಲ್ಲಿಸುವಂತೆ ತಿಳಿವಳಿಕೆ ನೀಡಲಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರ ಆಯಾಯ ಗ್ರಾಮಗಳ ಕಾರ್ಯಕರ್ತರ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ಪಕ್ಷದ ಮುಖಂಡರು ಯಾವ ನಿರ್ಧಾರವನ್ನು ಪ್ರಕಟಿಸುವುದಿಲ್ಲ ಎಂದು ಸ್ಪಷ್ಪಪಡಿಸಿದರು.
ಚುನಾವಣಾ ರಾಜಕೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸದೇನಲ್ಲ. ಕಾಂಗ್ರೆಸ್ ಪಕ್ಷದ ಆಡಳಿತವನ್ನು ಬಿಜೆಪಿ ಸರ್ಕಾರದ ಆಡಳಿತದ ಜೊತೆ ಜನರ ಹೋಲಿಕೆ ಮಾಡುತ್ತಿದ್ದಾರೆ. ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಪ್ರಮಾಣ ಕಡಿತ, ಪೆಟ್ರೋಲ್-ಡೀಸಲ್ ಬೆಲೆ ಏರಿಕೆ, ಭಾಗ್ಯ ಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ನಿಲುಗಡೆ ಹೀಗೆ ಹಲವಾರು ವಿಚಾರಗಳ ಬಗ್ಗೆ ಜನತೆಗೆ ಸತ್ಯದ ಅರಿವಾಗಿದೆ ಎಂದು ತಿಳಿಸಿದರು.
ವಿಭೂತಿಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಶಿವಲಿಂಗ ಪ್ರಸಾದ್, ರಂಗಸ್ವಾಮಿ, ತಾಪಂ ಅಧ್ಯಕ್ಷ, ಕಾಂಗ್ರೆಸ್ ಪ್ರಮುಖರಾದ ವಿ.ಎಚ್.ರಾಜು, ಎ.ಬಿ.ಚೇತನ್ ಕುಮಾರ್, ಲೋಹಿತ್ ಬಾಬು, ಜಯರಾಮಯ್ಯ, ನರಸಿಂಹಮೂರ್ತಿ, ಶಿವಲಿಂಗೇಗೌಡ, ಆರ್.ಶಿವಾನಂದ, ಚಂದ್ರಶೇಖರ್ , ಮುತ್ತುರಾಜ್, ಅನಿಲ್… ಮುಂತಾದವರು ಹಾಜರಿದ್ದರು.