ಬಿಜೆಪಿಗೆ ಮತ ಕೇಳುವ ಹಕ್ಕಿಲ್ಲ: ಕೇಂದ್ರದ ವಿರುದ್ಧ ಹರಿಹಾಯ್ದ ಎಚ್‌.ಕೆ.ಪಾಟೀಲ್‌

*  ಕೇಂದ್ರ, ರಾಜ್ಯದಲ್ಲಿ ಬಿಜೆಪಿಯೇ ಆಡಳಿತದಲ್ಲಿದ್ದರೂ ಉತ್ತಮ ಆಡಳಿತ ನೀಡಲಾಗಿಲ್ಲ 
*  ಬಿಜೆಪಿ ಸರ್ಕಾರ ಲಾಭದಾಯಕ ಸಂಸ್ಥೆಗಳನ್ನು ಕೂಡ ಖಾಸಗೀಕರಣ ಮಾಡ್ತಿದೆ
*  ಜನತೆ ಜಾಗೃತರಾಗಿ ಹೋರಾಡಬೇಕಿದೆ 

Congress Leader HK Patil Slams BJP Government grg

ಹುಬ್ಬಳ್ಳಿ(ಸೆ.01):  ಕೇವಲ ದೊಡ್ಡ ದೊಡ್ಡ ಯೋಜನೆಗಳನ್ನು ಜನತೆಗೆ ತೋರಿಸಿ ಐದು, ಹತ್ತು ವರ್ಷದಲ್ಲಿ ಬದಲಾವಣೆ ಆಗಿಬಿಡುತ್ತದೆ ಎನ್ನುತ್ತ ಪ್ರಸ್ತುತದಲ್ಲಿ ಮೂಲಸೌಲಭ್ಯವನ್ನೂ ಸಮರ್ಪಕವಾಗಿ ನೀಡದ ಬಿಜೆಪಿಗೆ ಜನತೆಯ ಬಳಿ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಚಿವ, ಶಾಸಕ ಎಚ್‌.ಕೆ. ಪಾಟೀಲ್‌ ದೂರಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷವಾಗಿ ನಾವು ಅಸಮಾಧಾನ ವ್ಯಕ್ತಪಡಿಸುವುದು ಹೋಗಲಿ, ಮತ ಕೇಳಲು ಹೋದಾಗ ಜನತೆ ಚಿಕ್ಕ ಪುಟ್ಟಗಲ್ಲಿಗಳಲ್ಲಿಯೂ ಕಳೆದ ಪಾಲಿಕೆ ಆಡಳಿತದ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ನೀರು, ರಸ್ತೆ, ಒಳಚರಂಡಿ ವ್ಯವಸ್ಥೆಗಳನ್ನು ಕೂಡ ಜನತೆಗೆ ಒದಗಿಸಲಾಗಿಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿಯೇ ಆಡಳಿತದಲ್ಲಿದ್ದರೂ ಪಾಲಿಕೆಯಲ್ಲಿ ಉತ್ತಮ ಆಡಳಿತ ನೀಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆ ಚುನಾವಣೆಯಲ್ಲಿ ಮತ ಕೇಳುವ ನೈತಿಕ ಹಕ್ಕು ಬಿಜೆಪಿಗೆ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಕೇವಲ ದೊಡ್ಡ ಯೋಜನೆಯನ್ನು ತೋರಿಸಿ 5, 10 ವರ್ಷಗಳ ಬಳಿಕ ಹೀಗೆ ಆಗುತ್ತದೆ ಎಂದು ಜನತೆಯ ದಿಕ್ಕು ತಪ್ಪಿಸಲಾಗಿದೆ. ಬಡಜನತೆಗೆ ನೀಡಲಾಗುತ್ತಿದ್ದ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನೀತಿಯ ಪರಿಣಾಮ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳವಾಗಿದೆ. ಅಡುಗೆ ಅನಿಲ ಬೆಲೆ ಬಡ, ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಇವೆಲ್ಲದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉತ್ತರಿಸಲಿ ಎಂದರು.

ರಾಜ್ಯ​ದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಎಚ್‌.ಕೆ. ಪಾಟೀಲ್‌

ಕೊರೋನಾ ಅಸಮರ್ಪಕ ನಿರ್ವಹಣೆ, ಉದ್ಯೋಗ ಸೃಷ್ಟಿ ಭರವಸೆ ಹುಸಿ ಕಾರಣದಿಂದ ಜನತೆ ಬೇಸತ್ತಿದ್ದಾರೆ. ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಉತ್ಸಾಹ ಹೆಚ್ಚಿನದಾಗಿ ಕಂಡು ಬರುತ್ತಿದ್ದು, ಪಕ್ಷ ಬಹುಮತ ಪಡೆಯುವುದು ಖಚಿತ ಎಂದರು.

ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮುಖಂಡರಾದ ರುದ್ರಪ್ಪ ಲಮಾಣಿ, ಅನಿಲಕುಮಾರ ಪಾಟೀಲ, ವಸಂತ ಲದ್ವಾ, ಶಿರಾಜಅಹ್ಮದ್‌ ಕುಡಚಿವಾಲೆ, ಸದಾನಂದ ಡಂಗನವರ, ಮಹೇಂದ್ರ ಸಿಂಘಿಘಿ, ಗಿರೀಶ ಗದಿಗೆಪ್ಪಗೌಡರ ಇದ್ದರು.

ಖಾಸಗೀಕರಣ ವಿರುದ್ಧ ಎಚ್ಕೆ ಗುಡುಗು:

ಕಾಂಗ್ರೆಸ್‌ ಕಳೆದ 70 ವರ್ಷದಲ್ಲಿ ಮಾಡಿಟ್ಟ ಆಸ್ತಿಯನ್ನು ಬಿಜೆಪಿ ಖಾಸಗೀಕರಣ ಹೆಸರಲ್ಲಿ ಜನರಿಂದ ದೂರವಾಗಿಸುತ್ತಿದೆ ಎಂದು ಎಚ್‌.ಕೆ. ಪಾಟೀಲ್‌ ಟೀಕಿಸಿದ್ದಾರೆ. ನ್ಯಾಷನಲ್‌ ಮಾನಿಟೈಸೇಶನ್‌ ಪೈಪ್‌ಲೈನ್‌ ಹೆಸರಿನಲ್ಲಿ ಬರೋಬ್ಬರಿ 40 ವರ್ಷ ಅಂದರೆ, ಸರಿಸುಮಾರು 2 ತಲೆಮಾರುಗಳು ಸರ್ಕಾರಿ ಸ್ವಾಮ್ಯತ್ವ ದ ಸೌಲಭ್ಯ ಕಳೆದುಕೊಳ್ಳಲಿದ್ದಾರೆ. ಬ್ರಿಟಿಷರ ನೀತಿಯಂತೆ ಬಿಜೆಪಿ ಪ್ರಭುತ್ವ ಮಾಡುತ್ತಿದೆ. ರೈಲ್ವೆ, ಗೂಡ್ಸ್‌ ಸೇವೆ, ಟೆಲಿಕಾಂ, ಭದ್ರತಾ ವ್ಯವಸ್ಥೆ ಕೂಡ ಖಾಸಗೀಕರಣ ಮಾಡಹೊರಟಿರುವುದು ದುರಂತ ತಂದಿಡಲಿದೆ.

ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದ ವೇಳೆ ಸರ್ಕಾರದ ಯಾವ ಸಂಸ್ಥೆಗಳು ನಷ್ಟದಲ್ಲಿವೆಯೊ, ಅಥವಾ ಸರ್ಕಾರಿ ಪಾಲು ಕನಿಷ್ಠ ಶೇ. 5, 10ರಷ್ಟು ಮಾತ್ರವಿದೆಯೊ ಅದನ್ನು ಮಾತ್ರ ಲೀಸ್‌ ಮೇಲೆ ನೀಡುವುದಾಗಿ ಚಿಂತನೆ ಇತ್ತು. ಆದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಲಾಭದಾಯಕ ಸಂಸ್ಥೆಗಳನ್ನು ಕೂಡ ಖಾಸಗೀಕರಣ ಮಾಡುತ್ತಿದೆ. ಇದಕ್ಕೆ ಖಾಸಗೀಕರಣಕ್ಕೆ ತೀಲಾಂಜಲಿ ಹಾಡಬೇಕು. ಜನತೆ ಜಾಗೃತರಾಗಿ ಹೋರಾಡಬೇಕು ಎಂದರು.
 

Latest Videos
Follow Us:
Download App:
  • android
  • ios