ಕಲಬುರಗಿ/ ಆಳಂದ(ಜ.16):  ಆಳಂದದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ದಿಲ್ಲಿ ರೈತರ ಹೋರಾಟ ಬೆಂಬಲಿಸುವ ಬೃಹತ್‌ ರಾರ‍ಯಲಿ ಬಗ್ಗೆ ಅಲ್ಲಿನ ಬಿಜೆಪಿ ಶಾಸಕರಾದ ಸುಭಾಷ ಗುತ್ತೇದಾರ್‌ ಆಧಾರ ರಹಿತ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಇದೀಗ ಅವರ ಹಿಂಬಾಲಕರೂ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ, ಈ ವಿಚಾರದಲ್ಲಿ ಇವರು ಒಬ್ಬರನ್ನೊಬ್ಬರು ಮೀರಿಸುತ್ತಿದ್ದಾರೆಂದು ಶಾಸಕರ ಹೇಳಿಕೆ ಸಮರ್ಥಿಸಿರುವ ಆಳಂದ ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲರ ಹೇಳಿಕೆಗೆ ಕೆಪಿಸಿಸಿ ಸದಸ್ಯ, ಕಾಂಗ್ರೆಸ್‌ ಮುಖಂಡ ಹಣಮಂತ ಭೂಸನೂರ್‌ ಟೀಕಿಸಿದ್ದಾರೆ.

ಶಾಸಕರು ಖುದ್ದು ರ‍್ಯಾಲಿ ಕಂಡರೂ ಜಾಣ ಕುರುಡರಂತೆ ವರ್ತಿಸಿದ್ದರು, ಇದೀಗ ಅವರ ಬೆಂಬಲಿಗರೂ ಅದೇ ಧೋರಣೆ ಪ್ರದರ್ಶಿಸುತ್ತಿದ್ದಾರೆಂದರೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಸುಳ್ಳು ಹೇಳುವಲ್ಲಿ ಆಳಂದ ಬಿಜೆಪಿ ಫೆಮಸ್ಸಾದಂತಿದೆ. ರೈತರ ಬೆಂಬಲಿಸಿ ಕಾಂಗ್ರೆಸ್‌ ಸಂಘಟಿಸಿದ ರ‍್ಯಾಲಿ ಎಲ್ಲರಿಗೂ ಮುಕ್ತವಾಗಿತ್ತು, ತುಂಬ ಜನ ಸೇರಿದ್ದನ್ನ ಕಣ್ಣಾರೆ ಕಂಡರೂ ಸಹ ಅಲ್ಲಿ ಕೇವಲ ಕಾಂಗ್ರೆಸ್ಸಿಗರೇ ಇದ್ದರು, ರೈತರೇ ಇರಲಿಲ್ಲವೆಂದು ಇವರು ಹೇಳುತ್ತಿದ್ದಾರೆ. ರೈತರೇ ಅಲ್ಲಿರಬೇಕೆಂದೇನೂ ಇಲ್ಲ,ರೈತರನ್ನು ಗೌರವಿಸುವ ಸಮಾಜವೇ ಅಲ್ಲಿತ್ತು ಎಂಬಂಶ ಇವರಿಗೆ ಅರ್ಥ ಆಗೋದಾದರೂ ಯಾವಾಗ? ಎಂದು ಭೂಸನೂರ್‌ ಪ್ರಶ್ನಿಸಿದ್ದಾರೆ.

'ಬಿಎಸ್‌ವೈ ಮುಕ್ತ ಬಿಜೆಪಿಗೆ ಹೈಕಮಾಂಡ್‌ ಸಂಕಲ್ಪ'

ಕಲಬುರಗಿ ನಿವಾಸಿ ಎಂದು ತಮ್ಮನ್ನು ವೈಯಕ್ತಿಕವಾಗಿ ಟೀಕಿಸಿರುವ ಆನಂದರಾವ ಪಾಟೀಲರ ಮಾತಿಗೆ ಪ್ರತ್ಯುತ್ತರ ನೀಡಿರುವ ಭೂಸನೂರ್‌ ತಾವು ಕಡಗಂಚಿಯವರು, ಅದೇ ಊರಿನ ಸೀಮೆಯಲ್ಲೇ ಸ. ನಂ 92/ 5, 6, 7 ರಲ್ಲಿ 15 ಎಕರೆ ಹೊಲ ತಮ್ಮದಿದೆ, ತೋಟಗಾರಿಗೆ ಬೆಳೆ, ಹಣ್ಣಿನ ಬೆಳೆ, ಹೆಬ್ಬೇವಿನಂತಹ ಬೆಳೆ ಬೆಳೆಯುತ್ತ ಮಾದರಿ ಕೃಷಿಕನಾಗುವತ್ತ ಹೊರಟವ, ಪ್ರಗತಿಪರ ಬೇಸಾಯಗಾರ. ನನ್ನ ಬಗ್ಗೆ ಯಾವುದೂ ಸರಿಯಾಗಿ ಅರಿಯದೆ ಹೇಳಿಕೆ ನೀಡುವುದು ಯಾರಿಗೂ ಶೋಭೆ ತಾರದು ಎಂದಿದ್ದಾರೆ.

ಅನೇಕ ಕೆಲಸಗಳಲ್ಲಿ ತಾವು ತೊಡಗಿದ್ದರೂ ತಮ್ಮ ಮೂಲ ಉದ್ಯೋಗ ಕೃಷಿ, ಪ್ರಗತಿಪರ ಕೃಷಿಗೆ ಜೀವ ತುಂಬುವ ಕೆಲಸ ತಾವು ಕಡಗಂಚಿ ಹೊಲದಲ್ಲಿ ಮಾಡುತ್ತಿರುವೆ. 2018- 19 ರ ಬರಗಾಲದಲ್ಲಿ ತಮ್ಮ ಹೊಲದಲ್ಲೇ ಆರವಟ್ಟಿಗೆ ಸ್ಥಾಪಿಸಿ ಜಾನುವಾರುಗಳಿಗೆ ನಿರಂತರ ಕುಡಿಯುವ ನೀರು ಪೂರೈಸಿರೋದನ್ನು ಸುತ್ತಮುತ್ತಲಿನ ಹತ್ತು ಹಳ್ಳಿ ರೈತರ ಮೆಚ್ಚಿದ್ದಾರೆ. ತಾವು ಯಾರು, ಎಲ್ಲಿಯವರು ಎಂಬುದು ಕಡಗಂಚಿ ಸೇರಿದಂತೆ ಆಳಂದ ತಾಲೂಕಿನ ರೈತರು, ಜನತೆಗೆಲ್ಲರಿಗೂ ಗೊತ್ತಿದೆ. ನನ್ನ ವಿಳಾಸ, ಉದ್ಯೋಗದ ಬಗ್ಗೆ ಇಂತಹವರಿಂದ ಸರ್ಟಿಫಿಕೇಟ್‌ ಬೇಕಾಗಿಲ್ಲ ಎಂದು ಹೇಳಿದ್ದಾರೆ.