ಗದಗ(ನ.24): ಕಳೆದ ವಿಧಾನಸಭಾ ಚುನಾವಣೆ ವೇಳೆ ಗದಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಮಹದಾಯಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುತ್ತೇನೆ ಎಂದು ಘೋಷಿಸಿದ್ದರು. ಅವರ ಹೇಳಿಕೆ ಜಾರಿಗೆ ಬಂದಿಲ್ಲ. ಅದರ ಬದಲು ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಎಚ್‌.ಕೆ.ಪಾಟೀಲ್‌ ಟೀಕಿಸಿದ್ದಾರೆ. 

ಖಾಸಗಿ ಕಾರ್ಯಕ್ರಮಕ್ಕೆ ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ನೀಡಿದ್ದ ಹೇಳಿಕೆ ಏನಾಗಿದೆ? ಪ್ರಧಾನಿ ಮೋದಿ ಏನು ಮಾಡುತ್ತಿದ್ದಾರೆ? ಇದು ಪ್ರತಿ ಕನ್ನಡಿಗನ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರಿಸುವ ಸೌಜನ್ಯ ಮೋದಿ ಅವರಿಗೆ ಇಲ್ಲ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹದಾಯಿ ಐ ತೀರ್ಪು ಪ್ರಕಟಗೊಂಡು ಹಲವು ತಿಂಗಳುಗಳೇ ಗತಿಸಿದರೂ ಈ ವರೆಗೆ ಗೆಜೆಟ್‌ ನೊಟಿಫಿಕೇಶನ್‌ ಹೊರಡಿಸಲು ಸಾಧ್ಯವಾಗಿಲ್ಲ. ಬದಲಾಗಿ ಇತ್ತೀಚೆಗೆ ಪರಿಸರ ಇಲಾಖೆ ಒಪ್ಪಿಗೆ ನೀಡುತ್ತಿದ್ದಂತೆ ಈ ಕುರಿತು ಗೋವಾ ಸರ್ಕಾರ ಕ್ಯಾತೆ ತೆಗೆಯುತ್ತಿದ್ದಂತೆ ಮತ್ತೊಮ್ಮೆ ಸಮಿತಿ ರಚನೆಗೆ ಮುಂದಾಗಿರುವುದು ನೀವು ಕರ್ನಾಟಕ್ಕೆ ಮಾಡುತ್ತಿರುವ ದ್ರೋಹ, ಅನ್ಯಾಯದ ಪರಾಕಾಷ್ಠೆಯಾಗಿದೆ ಎಂದು ಟೀಕಿಸಿದರು.

ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು, ನಾಲ್ವರು ಕೇಂದ್ರ ಸಚಿವರು ಏನು ಮಾಡುತ್ತಿದ್ದಾರೆ? ಜಾವಡೇಕರ್‌ ಅವರ ನಿರ್ಧಾರದಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ಕೂಡಾ ಇದುವರೆಗೂ ಇದನ್ನು ಖಂಡಿಸದೇ ಇರುವುದು ರಾಜ್ಯದ ಜನತೆಗೆ ಮಾಡುತ್ತಿರುವ ಮೋಸವಾಗಿದೆ. ಮಹದಾಯಿ ವಿಷಯದಲ್ಲಿ ಬಿಜೆಪಿಯವರು ಈ ಹಿಂದಿನಂತೆ ಮತ್ತೆ ಮತ್ತೆ ರಾಜಕೀಯ ಮಾಡುತ್ತಾ ರಾಜ್ಯದ ಜನತೆಯ ಕುಡಿವ ನೀರಿನ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದು ಖೇದಕರ ಸಂಗತಿ ಎಂದು ಬೇಸರ ವ್ಯಕ್ತ ಪಡಿಸಿದರು.