ಗದಗ(ಜು.08): ರಾಜ್ಯ ಸರ್ಕಾರ ಕೊವಿಡ್-19 ನಿರ್ವಹಣೆಯ ನಿರ್ಲಕ್ಷ್ಯ ಮತ್ತು ತಾತ್ಸಾರ ಮನೋಭಾವದಿಂದ ನಿರ್ವಹಿಸುತ್ತಿದ್ದು, ಆಸ್ಪತ್ರೆಯಲ್ಲಿ ಹಾಸಿಗೆ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ವ್ಯವಸ್ಥೆ ಉತ್ತಮ ಗುಣಮಟ್ಟದ ಊಟ ಸಹಿತ ಒದಗಿಸದೇ ಇರುವ ಅಧಿಕಾರಶಾಹಿಯ ನಿರ್ಲಜ್ಯ ವರ್ತನೆಯನ್ನು ಜನರು ಶಪಿಸುತ್ತಿದ್ದು ಒಟ್ಟಾರೆ ಕೊವಿಡ್ ನಿರ್ವಹಣೆಯಲ್ಲಿ ಸಕರ್ಆರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಆರೋಪಿಸಿದ್ದಾರೆ. 

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಮಹಾಮಾರಿ ಕೊರೋನಾ ವೈರಸ್‌ದಿಂದ ವಿಶ್ವವೇ ಗಂಭೀರವಾದ ಪರಿಸ್ಥಿತಿ ಎದುರಿಸುತ್ತಿದ್ದು, ನಿರ್ವಹಣೆಯಲ್ಲಿ ಸರ್ಕಾರಗಳ ಪ್ರಯತ್ನಗಳು ಏನೇನೂ ಸಾಲದು ಎಂಬಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ಗಂಭೀರ ರೋಗಿಗಳ ಕಾಳಜಿಯಲ್ಲಿ ಕೊರತೆ ಮತ್ತು ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳದೇ ಆಗಿರುವ ಪ್ರಮಾಧಗಳು ದೂರದೃಷ್ಠಿ ಮತ್ತು ದಿಕ್ಸೂಚಿ ಇಲ್ಲದ ಪರಿಣಾಮಕಾರಿ ಅಲ್ಲದ ಕ್ರಮಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಕೊರೋನಾ ನಿರ್ವಹಣೆಯ ಪ್ರತಿಯೊಂದು ಪರಿಕರಗಳ ಖರೀದಿಯಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿಬರುತ್ತಿದೆ. ಸರ್ಕಾರ ಖರೀದಿಸಿರುವ ಉಪಕರಣಗಳು, ಪರಿಕರಗಳು, ಚಿಕಿತ್ಸಾ ಸಾಮಾಗ್ರಿಗಳು ಕಳಪೆ ಮಟ್ಟದ್ದಾಗಿದೆ ಎಂಬ ದೂರುಗಳೂ ಪುಂಖಾನುಪುಂಖವಾಗಿ ಕೇಳಿಬರುತ್ತಿರುವುದರಿಂದ ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಸಂದೇಹಗಳು ಬಲವಾಗುತ್ತಿವೆ ಎಂದು ಪತ್ರದಲ್ಲಿ ಎಚ್.ಕೆ. ಪಾಟೀಲ ಆರೋಪಿಸಿದ್ದಾರೆ. 

ಕೊರೋನಾ ಸಂಕಷ್ಟ; ಜಿಮ್ಸ್‌ನ ಹೊರಗುತ್ತಿಗೆ ಸಿಬ್ಬಂದಿಗೆ 2 ತಿಂಗಳ ವೇತನವೇ ಇಲ್ಲ..!

ವಿವಿಧ ಸಲಹೆಗಳು

ರಾಜ್ಯ ಸರ್ಕಾರಕ್ಕೆ ಕೊವಿಡ್-19 ಕುರಿತು ಎಚ್.ಕೆ.ಪಾಟೀಲ ವಿವಿಧ ಸಲಹೆಗಳನ್ನು ನೀಡಿದ್ದಾರೆ. ಸಧ್ಯದ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಬ್ಬ ನಾಗರಿಕರನ್ನು ಕೊರೋನಾ ವ್ಯಾಪ್ತಿಗೆ ಸೇರಿಸಬೇಕು. ಆರೋಗ್ಯ ಸಿಬ್ಬಂಧಿಗೂ ಸೋಂಕು ತಗುಲುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆಯಾಗಿದ್ದು, ಕೂಡಲೇ ತುರ್ತು ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಿ, ಸಿಬ್ಬಂಧಿ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಆಂಬುಲೆನ್ಸ್ ಕೊರತೆ ಇದ್ದು, ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು 2-3 ದಿನಗಳು ವಿಳಂಭವಾಗುತ್ತಿದೆ. ಆದರೆ ರಾಜ್ಯದಲ್ಲಿ ಅನೇಕ ಸರ್ಕಾರ ಬಸ್‌ಗಳು ಖಾಲಿ ನಿಂತಿದ್ದು, ಈ ಬಸ್‌ಗಳನ್ನು ಆಂಬುಲೆನ್ಸ್‌ಗಳನ್ನಾಗಿ ಪರಿವರ್ತಿಸುವುದು ಸೇರಿದಂತೆ ವಿವಿಧ ಸಲಹೆಗಳನ್ನು ನೀಡಿದ್ದಾರೆ.