ಸೂಲಿಬೆಲೆ [ಡಿ.04]:  ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್‌ ಅವರಿಗೆ ಕಾಂಗ್ರೆಸ್‌ ಎಲ್ಲಾ ಸ್ಥಾನಮಾನ ನೀಡಿತ್ತು. ಅಧಿಕಾರ ಅನುಭವಿಸಿದ ನಂತರ ತಾಯಿ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ವಲಸೆ ಹೋಗಿದ್ದಾರೆ. ಅಲ್ಲಿ ಅವರು ಹರಕೆಯ ಕುರಿ ಆಗುವುದು ನಿಶ್ಚಿತ. ಚುನಾವಣೆಯ ನಂತರ ಅವರ ರಾಜಕೀಯ ಜೀವನ ನಾಶವಾಗುತ್ತದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಿಜೆಪಿ ಅಭ್ಯರ್ಥಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಹೊಸಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪದ್ಮಾವತಿ ಪರವಾಗಿ ರೋಡ್‌ ಶೋನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್‌ಗೆ ಟಿಕೆಟ್‌ ನೀಡಿ ನಾನು, ಎಂ.ಎಸ್‌.ಕೃಷ್ಣ ಮೊದಲಾದ ನಾಯಕರು ಸೇರಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೆವು. ಪಕ್ಷ ಅವರಿಗೆ ಉತ್ತಮ ರಾಜಕೀಯ ಭವಿಷ್ಯ ನೀಡಿ ಮಂತ್ರಿಯೂ ಮಾಡಲಾಗಿತ್ತು. ಇದೀಗ ಅವರು ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಮತದಾರರು ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನುಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೊಸಕೋಟೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಎಂಟಿಬಿ ಮೂರನೇ ಸ್ಥಾನಕ್ಕೆ ಕುಸಿಯಲಿದ್ದಾರೆ. ತನ್ನ ಆಸ್ತಿಯನ್ನೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪಗೆ ಬರೆದುಕೊಟ್ಟರೂ ಸೋಲು ಖಚಿತ. ಎಂಟಿಬಿಯ ರಾಜಕೀಯ ಸಮಾಧಿಗೆ ಕೊನೆ ಹಾರವನ್ನು ಮತದಾರರು ಡಿ.5ರಂದು ಹಾಕಲಿದ್ದಾರೆ ಎಂದು ಕಟು ಮಾತುಗಳಲ್ಲಿ ಟೀಕಿಸಿದರು.