ಶಿರಸಿ(ಆ.14):  ರಾಜ್ಯದಲ್ಲಿ ಬಿಜೆಪಿ ಸರಕಾರದ್ದು ಅಭಿವೃದ್ಧಿ ಮಾತೇ ಇಲ್ಲ. ಬರೀ ಮಾತೇ ಎಲ್ಲ ಎಂಬಂತಾಗಿದೆ. ಅಭಿವೃದ್ಧಿ ಶೂನ್ಯವಾಗಿ ಸರ್ಕಾರ ನಡೆಸುತ್ತಿದೆ. ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ಕೂಡ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಕಿಡಿಕಾರಿದರು.

ಅವರು ಗುರುವಾರ ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಕಳೆದ ವರ್ಷದ ಅತಿ ಮಳೆಗೆ ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಸ್ವಲ್ಪ ಹಣ ಕೊಟ್ಟು ಇನ್ನೂ ಬಡವರು, ನೊಂದವರು ಮನೆ ಕಟ್ಟಿಕೊಳ್ಳಲು ಆಗದ ಸ್ಥಿತಿ ಉಂಟಾಗಿದೆ. ರಸ್ತೆಗಳು ಹೊಂಡ ಬಿದ್ದಿವೆ. ಅವುಗಳ ಕನಿಷ್ಠ ಉಸ್ತುವಾರಿ ಕೂಡ ಇಲ್ಲವಾಗಿದೆ ಎಂದ ಭೀಮಣ್ಣ, ಕಾಂಗ್ರೆಸ್‌ ಸರ್ಕಾರ ಇದ್ದಾಗ ಸಿದ್ರಾಮಣ್ಣ ಅವರ ಬಳಿ ಏನ್‌ ಕೆಲಸ ಮಾಡ್ತೀರಿ? ಎಂದು ಕೇಳಿದ ಬಿಜೆಪಿಯವರು ಈಗೇನು ಮಾಡುತ್ತಿದ್ದಾರೆ. ಕೊವಿಡ್‌- 19ರ ಸಂಕಷ್ಟಕ್ಕೆ ಪ್ರತಿ ಪಕ್ಷದ ನಾಯಕರು ಸ್ಪಂದಿಸಿದ್ದರೂ ಸರ್ಕಾರ ಭ್ರಷ್ಟಾಚಾರ ನಡೆಸಿದ ಆರೋಪ ಹೊಂದಿದೆ. ಕ್ಷೇತ್ರದಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಸಂವಿಧಾನಾತ್ಮಕವಾಗಿ ದೊಡ್ಡ ಹುದ್ದೆ ಹೊಂದಿದ್ದಾರೆ. ಅವರೇ ಕ್ಷೇತ್ರದ ಶಾಸಕರಾಗಿದ್ದರೂ ಅನೇಕ ಸಮಸ್ಯೆಗಳಿಗೆ ನೆರವಾಗಿಲ್ಲ. ಅವರ ಬಳಿ ಇನ್ನೂ ಫಾರಂ ನಂ. 3 ಬಗೆಹರಿಸಲು ಆಗಿಲ್ಲ ಎಂದೂ ವಾಗ್ದಾಳಿ ನಡೆಸಿದರು.

ಕಾರವಾರ: ಸಚಿವರೆದುರೇ ಬಿಜೆಪಿ- ಕಾಂಗ್ರೆಸ್‌ ಮುಖಂಡರ ವಾಗ್ವಾದ..!

ನಗರ ಸಭೆ, ಪಟ್ಟಣ ಪಂಚಾಯ್ತಿ, ಪುರಸಭೆಗಳಿಗೆ ಚುನಾವಣೆ ನಡೆದು ಎರಡು ವರ್ಷ ಆಗುತ್ತ ಬಂದರೂ ಇನ್ನೂ ಸರ್ಕಾರಕ್ಕೆ ಆಯ್ಕೆಯಾದ ಜನಪ್ರತಿನಿಧಿಗಳ ಕೈಗೆ ಅಧಿಕಾರ ಕೊಡಲು ಆಗಿಲ್ಲ. ನ್ಯಾಯಾಲಯದ ಮೆಟ್ಟಿಲೇರಿದವರು ಇದ್ದರೆ ಕರೆಸಿ ಮಾತನಾಡುವ ಸೌಜನ್ಯ ಕೂಡ ತೋರಿಲ್ಲ. ನಗರದ ಅಭಿವೃದ್ಧಿ ಆಗುತ್ತಿಲ್ಲ. ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬಿಜೆಪಿ ಸದಸ್ಯರೇ ಸೇರಿ ಸಮಸ್ಯೆ ಇತ್ಯರ್ಥಕ್ಕೆ ಮನವಿ ಮಾಡಿಕೊಂಡ ಪ್ರಸಂಗ ಕೂಡ ನಡೆದಿದೆ ಎಂದು ವ್ಯಂಗ್ಯವಾಡಿದ ಭೀಮಣ್ಣ, ಯಾವ ಕಚೇರಿಗೆ ಹೋದರೂ ಕೊರೋನಾ ಎನ್ನುತ್ತಾರೆ. ಬಡವರಿಗೆ, ವೃದ್ಧರಿಗೆ, ವಿಧವೆಯರಿಗೆ ಮಾಶಾಸನ ಕೂಡ ಬರುತ್ತಿಲ್ಲ. ಅವರು ಸಂಸಾರದ ಬದುಕು ಹೇಗೆ ನಡೆಸಬೇಕು ಎಂದೂ ಕೇಳಿದರು.

ಅಭಿವೃದ್ಧಿಗೆ ಮೀನ ಮೇಷ ಯಾಕೆ? ಇದೊಂದು ಬೇಜವಾಬ್ದಾರಿ ಸರ್ಕಾರ ಎಂದು ಗುಡುಗಿದ ಭೀಮಣ್ಣ, ಉತ್ತರ ಕನ್ನಡದ ಅನೇಕ ಸಮಸ್ಯೆಗಳನ್ನು ಸ್ಪೀಕರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬಗೆಹರಿಸಬೇಕು ಎಂದೂ ಆಗ್ರಹಿಸಿದರು.
ಕೆ. ಜಿಹಳ್ಳಿ, ಡಿಜಿ. ಹಳ್ಳಿಯಲ್ಲಿ ನಡೆದ ಮನೆಗೆ ಬೆಂಕಿ ಹಚ್ಚುವ ಘಟನೆಯನ್ನು ಖಂಡಿಸಿದ ಭೀಮಣ್ಣ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಬಿಎಸ್‌ಎನ್‌ಎಲ್‌ ಅಧಿಕಾರಿಗಳು ದೇಶದ್ರೋಹಿ ಎಂಬರ್ಥದಲ್ಲಿ ಮಾತನಾಡಿದ ಸಂಸದ ಅನಂತಕುಮಾರ ಹೆಗಡೆ ಅವರ ಮಾತು ಒಪ್ಪತಕ್ಕದ್ದಲ್ಲ. ಅವರೇ ಇದನ್ನು ಸರಿ ಮಾಡಬೇಕು. ಆ ಸ್ಥಾನದಲ್ಲಿ ಕೇಂದ್ರ ಸರ್ಕಾರವೂ ಇದೆ ಎಂದು ಹೇಳಿದರು. ಈ ವೇಳೆ ಎಸ್‌.ಕೆ. ಭಾಗವತ್‌, ದೀಪಕ ದೊಡ್ಡೂರು ಜಗದೀಶ ಗೌಡ ಸಿ.ಎಫ್‌. ನಾಯ್ಕ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪಕ್ಷದ ವರಿಷ್ಠರು ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಲು ಹೇಳಿದ್ದಾರೆ. ಕಾಂಗ್ರೆಸ್‌ ಯಾವ ಜವಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ. ನಾನೊಬ್ಬ ಕಾರ್ಯಕರ್ತ. ಪಕ್ಷ ಜಿಲ್ಲೆಯಲ್ಲಿ ಬಲವಾಗಿದೆ. ಮುಂದೆ ಯಾವುದೇ ಸ್ಥಾನ ಕೊಟ್ಟರೂ, ಕೊಡದಿದ್ದರೂ ಕೆಲಸ ಮಾಡುವೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದ್ದಾರೆ.