ಹುಬ್ಬಳ್ಳಿ(ಸೆ.20): ಆರ್ಥಿಕ ಅಶಿಸ್ತು, ಕೇಂದ್ರದಿಂದ ಬರಬೇಕಾದ ಹಣ ಕೇಳುವ ಛಾತಿ ಇಲ್ಲದಿರುವುದು ಹಾಗೂ ಅಪಾರ ಸಾಲದ ಹೊರೆಯಿಂದ ತತ್ತರಿಸಿರುವ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಇಷ್ಟು ಹೀನಾಯವಾಗಿ ಸರ್ಕಾರ ನಡೆಸುವ ಬದಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಗ್ರಹಿಸಿದ್ದಾರೆ. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಅಂಕಿಸಂಖ್ಯೆಗಳ ಸಮೇತ ಈ ವಿಷಯ ಪ್ರಸ್ತಾಪಿಸಿದ ಅವರು, ಆಡಳಿತದಲ್ಲಿನ ಅವ್ಯವಸ್ಥೆ ಹಾಗೂ ಸಚಿವರ ಭ್ರಷ್ಟಾಚಾರದಿಂದ ಹಿಂದಿನ ಯಾವ ಸರ್ಕಾರವೂ ಮಾಡದಷ್ಟುಸಾಲವನ್ನು ಬಿಜೆಪಿ ಸರ್ಕಾರ ಮಾಡಿದೆ. ಈ ಮೂಲಕ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಆದಾಯ ಸಂಗ್ರಹ ಹಾಗೂ ವಾಣಿಜ್ಯೋದ್ಯಮದ ಚಟುವಟಿಕೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಆದರೆ ಅನವಶ್ಯಕ ರಾಜಕೀಯ ಕಾರ್ಯದರ್ಶಿಗಳು, ನಿಗಮ ಮಂಡಳಿ ಅಧ್ಯಕ್ಷರಿಗೆ ಕ್ಯಾಬಿನೇಟ್‌ ದರ್ಜೆ ಸೇರಿದಂತೆ ವಿವಿಧ ಹಂತದಲ್ಲಿ ದುಂದುವೆಚ್ಚ ಮಾಡುತ್ತಿದ್ದರಿಂದ ಆರ್ಥಿಕ ಅಶಿಸ್ತು, ಅರಾಜಕತೆ ತಲೆದೋರಿದೆ ಎಂದು ವಿಶ್ಲೇಷಿಸಿದರು.

ಯೋಗೇಶ್ ಗೌಡ ಮರ್ಡರ್ ಮಿಸ್ಟರಿ: ಸಾಕ್ಷ್ಯ ನಾಶಕ್ಕೆ ಮಾಜಿ ಸಚಿವರು ಮಾಡಿದ ಕೆಲಸವಿದು!

126337 ಕೋಟಿ ಸಾಲ:

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಹೆಚ್ಚಿನ ಸಾಲ ಮಾಡದೇ ಸಮರ್ಥವಾಗಿ ನಿಭಾಯಿಸಿದ್ದರು. ಮುಂದೆ ಬಂದ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲೂ ಆರ್ಥಿಕ ಸುಭದ್ರತೆ ಇತ್ತು. ಆದರೆ, ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ವರ್ಷದಲ್ಲಿ 126337 ಕೋಟಿ ಸಾಲ ಮಾಡಿದೆ. ಹಿಂದೆಲ್ಲ ಅಭಿವೃದ್ಧಿಗಾಗಿ ಸಾಲ ಮಾಡಲಾಗುತ್ತಿತ್ತು. ಆದರೆ ಈ ಸರ್ಕಾರ ‘ಆರ್ಥಿಕ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾನೂನು’ಗೆ ತಿದ್ದುಪಡಿ ತಂದು ನೌಕರರು, ಸಚಿವರು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷ ಸಂಬಳ, ಸಾರಿಗೆ ವೆಚ್ಚಕ್ಕೆ ಸಾಲ ಮಾಡಲು ಮುಂದಾಗಿದೆ. ನಿಜಕ್ಕೂ ಇದು ಸರ್ಕಾರ ಅಧೋಗತಿಗೆ ಹೋಗುತ್ತಿರುವ ಸಂಕೇತ ಎಂದರು.

15ನೇ ಹಣಕಾಸು ಆಯೋಗವು ಕರ್ನಾಟಕ, ಮಣಿಪುರ ಮತ್ತು ತೆಲಂಗಾಣಕ್ಕೆ ವಿಶೇಷ ಅನುದಾನ ನೀಡುವಂತೆ ಸೂಚಿಸಿದೆ. ಆದರೆ ಕೇಂದ್ರ ಅರ್ಥ ಸಚಿವರು ಅದನ್ನು ನೇರವಾಗಿ ನಿರಾಕರಿಸಿದ್ದಾರೆ. ಇದರಿಂದ ರಾಜ್ಯಕ್ಕೆ . 5 ಸಾವಿರ ಕೋಟಿ, ಜಿಎಸ್‌ಟಿ ಪಾಲು ಸೇರಿದಂತೆ ರಾಜ್ಯಕ್ಕೆ 60 ಸಾವಿರ ಕೋಟಿ ಬರಬೇಕಿದೆ. ಅದನ್ನು ಕೇಳುವ ಛಾತಿ ಮುಖ್ಯಮಂತ್ರಿಗಳಿಗೆ ಇಲ್ಲ. ಅದನ್ನು ಸರಿದೂಗಿಸಲು ರಾಜ್ಯದ ಮೇಲೆ ಸಾಲದ ಹೊರೆ ಹೊರಿಸುತ್ತಿದ್ದಾರೆ. ಈ ಅನಾಹುತ ತಪ್ಪಿಸಲು ನಾಳೆ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಎಲ್ಲ ಪಕ್ಷಗಳ ಶಾಸಕರು ಗಂಭೀರವಾಗಿ ಚರ್ಚಿಕ್ಕೆ ಕಿವಿಮಾತು ಹೇಳಬೇಕು ಎಂದು ರಾಯರಡ್ಡಿ ಶಾಸಕರಲ್ಲಿ ಮನವಿ ಮಾಡಿದರು.

ಭ್ರಷ್ಟಾಚಾರ, ದುರಾಡಳಿತ, ಆರ್ಥಿಕ ಅಶಿಸ್ತು, ದುಂದುವೆಚ್ಚ, ಅಭಿವೃದ್ಧಿಶೂನ್ಯ, ಮಹಾಸಾಲಗಾರ ಬಿಜೆಪಿ ಸರ್ಕಾರವನ್ನು ಸರಿದಾರಿಗೆ ತಂದು ರಾಜ್ಯವನ್ನು ರಕ್ಷಿಸುವುದು ಎಲ್ಲ ಜನಪ್ರತಿನಿಧಿಗಳ ಹೊಣೆಯಾಗಿದೆ ಎಂದರು ರಾಯರಡ್ಡಿ.
ಸುದ್ದಿಗೋಷ್ಠಿಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರು ಇದ್ದರು.

ಡ್ರಗ್ಸ್‌ ಮಾಫಿಯಾ

ರಾಜ್ಯದಲ್ಲಿ ಈಚೆಗೆ ಕೇಳಿ ಬರುತ್ತಿರುವ ಡ್ರಗ್ಸ್‌ ಮಾಫಿಯಾ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸುವ ಜತೆಗೆ ತಪ್ಪಿತಸ್ಥರು ಯಾರೆ ಇರಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಮಾಫಿಯಾದಲ್ಲಿ ಯಾವ ಪಕ್ಷಕ್ಕೆ ಸೇರಿದ್ದರೂ ಕಾನೂನು ಕ್ರಮ ಅಗತ್ಯ. ಒಂದು ವೇಳೆ ಕಾಂಗ್ರೆಸ್‌ನ ಮುಖಂಡರು ಅದರಲ್ಲಿ ಭಾಗಿಯಾಗಿದ್ದರೆ ಅವರನ್ನು ಉಚ್ಛಾಟನೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಒತ್ತಾಯಿಸುತ್ತೇವೆ ಎಂದು ರಾಯರಡ್ಡಿ ಹೇಳಿದ್ದಾರೆ.