ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ : ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ - ಶ್ರೀನಿವಾಸ
ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಶೇ.40 ಪಸೆಂರ್‍ಟ್ ಸರ್ಕಾರ ಬಿಜೆಪಿಯದ್ದು ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್. ಶ್ರೀನಿವಾಸ್ ಕಿಡಿ ಕಾರಿದರು.
ಗುಬ್ಬಿ : ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಶೇ.40 ಪಸೆಂರ್‍ಟ್ ಸರ್ಕಾರ ಬಿಜೆಪಿಯದ್ದು ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್. ಶ್ರೀನಿವಾಸ್ ಕಿಡಿ ಕಾರಿದರು.
ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಮೆರವಣಿಗೆಯಲ್ಲಿ ಸಾಗಿ ಬಂದು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿ ಮಾತನಾಡಿದರು.
ಉಚಿತ ವಿದ್ಯುತ್, ಮಹಿಳೆಯರಿಗೆ 2000 ರುಪಾಯಿ ಸೇರಿದಂತೆ ಹಲವು ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಿಂದುಳಿದವರ ಕಲ್ಯಾಣ ಸೇರಿದಂತೆ ರಾಜ್ಯದ ಕಲ್ಯಾಣವನ್ನೇ ಮಾಡಿದ್ದರು. ಈ ಬಾರಿ ಸಹ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಇನ್ನೂ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ನಾನು ಮೂರನೇ ಪ್ಲೇಸ್‌ಗೆ ಹೋಗುತ್ತೇನೆಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ. ನಾನು ಲೆಕ್ಕಕ್ಕಿಲ್ಲ ಎನ್ನುವವರಿಗೆ ಮೇ 13ರ ಫಲಿತಾಂಶದಲ್ಲಿ ನಾನು ಯಾವ ಸ್ಥಾನದಲ್ಲಿದ್ದೆ ಎಂದು ಜನರು ತೀರ್ಮಾನ ಮಾಡಿರುತ್ತಾರೆ.
ಚುನಾವಣೆಯಲ್ಲಿ ಯಾವುದೇ ಒಂದು ಸಮುದಾಯದಿಂದ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಸಮುದಾಯದವರು ಮತನೀಡಿದರೆ ಮಾತ್ರ ಗೆಲ್ಲಲು ಸಾಧ್ಯವಾಗುತ್ತದೆ. ನನಗೆ ವಿರೋಧಿ ಯಾರು ಎಂಬುದಿಲ್ಲ. ಪ್ರತಿ ಬಾರಿಯೂ ಕಾಯ, ವಾಚ, ಮನಸಾ ಚುನಾವಣೆ ಮಾಡುತ್ತೇನೆ. ನನ್ನ ಕಾರ್ಯಕರ್ತರು ಫಲಾಫಲವನ್ನು ನೀಡುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಎಂಎಲ್‌ಸಿ ರಾಜೇಂದ್ರ ಮಾತನಾಡಿ, ಮುಖ್ಯಮಂತ್ರಿ ಯಾರು ಎಂದು ಹೇಳಲು ಸಾಧ್ಯವಿಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಹೋರಾಟ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಕಾಂತರಾಜು, ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ಮುರುಳಿಧರ ಹಾಲಪ್ಪ, ಕಾಂಗ್ರೆಸ್ ಮುಖಂಡ ಶಶಿ ಹುಲಕುಂಟೆ, ಪಟ್ಟಣ ಪಂಚಾಯತಿ ಸದಸ್ಯರು, ಜಿಲ್ಲಾ ಕಾರ್ಯದರ್ಶಿ ಶಂಕರಾನಂದ, ಭರತ್ ಗೌಡ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.
ರೈತರ ಬದುಕು ಹಸನಾಗಲು ಕೈಗೆ ಅಧಿಕಾರ ನೀಡಿ
ತಿಪಟೂರು : ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಷಡಕ್ಷರಿ ಮಂಗಳವಾರ ತಿಪಟೂರು ಗ್ರಾಮ ದೇವತೆ ಕೆಂಪಮ್ಮದೇವಿ, ಕಲ್ಲೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖಂಡರಾದ ಲೋಕೇಶ್ವರ ನೇತೃತ್ವದಲ್ಲಿ ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಕಲ್ಪಶ್ರೀರವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜನತೆಯನ್ನುದ್ದೇಶಿಸಿ ಮಾತನಾಡಿ, ಸುಳ್ಳು ಭರವಸೆ, ಭ್ರಷ್ಟಾಚಾರ, ಕೋಮುವಾದಿ, ಜಾತಿವಾದಿ ಬಿಜೆಪಿ ಸರ್ಕಾರವನ್ನು ತೊಲಗಿಸಿ ರೈತರಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ರೈತರ ಆದಾಯವನ್ನು ಹೆಚ್ಚು ಮಾಡುತ್ತೇನೆಂದು ಹೇಳಿಕೊಂಡು ಮತ ಹಾಕಿಸಿಕೊಂಡ ಬಿಜೆಪಿ ಸರ್ಕಾರ ರೈತರ ಬದುಕನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. 20 ಸಾವಿರವಿದ್ದ ಕೊಬ್ಬರಿ 9 ಸಾವಿರಕ್ಕಿಳಿದಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 15ಸಾವಿರ ರು. ಬೆಂಬಲ ಬೆಲೆ ಘೋಷಣೆ ಮಾಡುತ್ತೇವೆ. ತುಮಕೂರು ಜಿಲ್ಲೆಯಲ್ಲಿ 11 ಕ್ಷೇತ್ರಗಳಲ್ಲಿ 10 ಕ್ಷೇತ್ರ ಕಾಂಗ್ರೆಸ್‌ಗೆ ಬರಲಿದ್ದು ಉತ್ತಮ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಕಾರ್ಯಕರ್ತರು ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗಳಿಗೆ ತಲುಪಿಸುವ ಮೂಲಕ ಅಭ್ಯರ್ಥಿ ಕೆ. ಷಡಕ್ಷರಿಯವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.