ಮೈಸೂರು[ಡಿ.02]:  ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಪರ, ವಿರೋಧದ ಹೇಳಿಕೆಗಳನ್ನು ನಿಲ್ಲಿಸಿ, ಉಪ ಚುನಾವಣೆಯಲ್ಲಿ ಗೆದ್ದು ಮತ್ತೆ ಸರ್ಕಾರ ರಚಿಸುವ ಗುರಿ ಇರಲಿ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು.

ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಉಳಿಯಲು 8 ಸ್ಥಾನ ಬೇಕು. ಆದರೆ, ಅವರು ಒಂದರೆಡು ಸ್ಥಾನವನ್ನು ಗೆದ್ದರೆ ಹೆಚ್ಚು. ಕಾಂಗ್ರೆಸ್‌ ಕನಿಷ್ಠ 12 ಸ್ಥಾನಗಳನ್ನು ಈ ಉಪ ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ವೇಳೆ ಮುಂದೆ ಯಾರು ಸಿಎಂ ಆಗಬೇಕು ಎಂಬ ಕುರಿತು ಹೇಳಿಕೆ ನೀಡುವುದನ್ನು ಬಿಟ್ಟು, ಚುನಾವಣೆಯಲ್ಲಿ ಗೆಲ್ಲುವ ಕಡೆ ನಿಮ್ಮ ಗಮನವಿರಲಿ. ಪಕ್ಷದ ವರಿಷ್ಠೆ ಸೋನಿಯಾಗಾಂಧಿ ಸಿಎಂ ಯಾರಾಗಬೇಕು ಎಂದು ತೀರ್ಮಾನಿಸುತ್ತಾರೆ. ಈ ಹೇಳಿಕೆಗೆ ವಿಶೇಷ ಅರ್ಥವಿಲ್ಲ. ಅನರ್ಹರನ್ನು ಸೋಲಿಸಿ, ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಕೆಡವಿ, ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರದಲ್ಲಿ ಸರ್ಕಾರ ರಚನೆ ಮಾಡೋಣ. ಮಹಾರಾಷ್ಟ್ರದಲ್ಲಿನ ಹೊಂದಾಣಿಕೆ ಮಾದರಿಯಾಗಿ, ಜಾತ್ಯತೀತ ಪಕ್ಷಗಳು ಅಧಿಕಾರಕ್ಕೆ ಬರಬೇಕು ಎಂದರು.

ವಿಧಾನ ಸಭಾಧ್ಯಕ್ಷರಾಗಿದ್ದ ರಮೇಶ್‌ಕುಮಾರ್‌ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ 17 ಶಾಸಕರನ್ನೂ ಅನರ್ಹಗೊಳಿಸಿದರು. ಇದನ್ನು ಸುಪ್ರಿಂ ಕೋರ್ಟ್‌ ಕೂಡ ಎತ್ತಿ ಹಿಡಿಯಿತು. ಇನ್ನು ಮತದಾರರು ಎತ್ತಿ ಹಿಡಿಯಬೇಕಿದೆ. ಈ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಒಬ್ಬರೇ ಪ್ರಚಾರದಲ್ಲಿ ತೊಡಗಿಲ್ಲ. ನಾವು ಕೂಡ ಅಖಾಡಕ್ಕೆ ಇಳಿದಿದ್ದೇವೆ. ಈ ವೇಳೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದೊಂದೇ ಗುರಿಯಾಗಿರಬೇಕು ಎಂದರು.

ಉಪ ಸಮರದ ಬಗ್ಗೆ ವಿಸ್ಮಯದ ಭವಿಷ್ಯ: ಇವರು ಹೇಳಿದ್ದು ಸುಳ್ಳಾಗಿದ್ದೇ ಇಲ್ಲ!...

ಇದೊಂದು ವಿಶೇಷ ಉಪ ಚುನಾವಣೆ. ಇದಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಈ ಚುನಾವಣೆಯೂ ಬಿಜೆಪಿಗೆ ಮತ್ತು ಕಾಂಗ್ರೆಸ್‌ಗೆ ನಿರ್ಣಯಕವಾಗಿದೆ ಎಂಬುದನ್ನು ಮರೆಯಬಾರದು. ಏಕೆಂದರೆ ಮಹಾರಾಷ್ಟ್ರದಲ್ಲಿ ಸಂಸತ್ತಿನ ಅನುಮತಿ ಪಡೆಯದೇ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವ ಸ್ಥಾನ ಬಳಸಿಕೊಂಡು ರಾಷ್ಟ್ರಪತಿ ಆಳ್ವಿಕೆಯನ್ನು ರಾತ್ರೋ ರಾತ್ರಿ ಕೊನೆಗಾಣಿಸಿದ್ದಾರೆ. ಆದರೂ ಅವರ ಪ್ರಯತ್ನ ವಿಫಲವಾಯಿತು. ಇದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಅಪಮಾನವಾಯಿತು. ಈಗ ಸ್ವಲ್ಪ ಹಿಂದೆ- ಮುಂದೆ ನೋಡುತ್ತಿದ್ದಾರೆ. ಆದ್ದರಿಂದ ಈ ಉಪ ಚುನಾವಣೆ ಮತ್ತೊಂದು ಅಗ್ನಿಪರೀಕ್ಷೆ ಎಂದರು.

ನಾನು 6 ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದೇನೆ. ಕಾಂಗ್ರೆಸ್‌ಗೆ ಪೂರಕವಾದ ವಾತಾವರಣವಿದೆ. ಸಿದ್ದರಾಮಯ್ಯ ಒಂಟಿ ಅಲ್ಲ ಎಂಬುದನ್ನು ನಾವು ಹೇಳುತ್ತಿದ್ದೇವೆ ಅಷ್ಟೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಚುನಾವಣೆಯಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಸರ್ಕಾರ ರಚನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದೇ ಬೇರೆ, ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಕೆಲವು ಕ್ಷೇತ್ರದಲ್ಲಿ ಬಿಜೆಪಿಗೆ ಲಾಭ ಆಗಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಾಸು, ಮೇಯರ್‌ ಪುಷ್ಪಲತಾ ಜಗನ್ನಾಥ್‌ ಇದ್ದರು.

ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ