ಶಿಗ್ಗಾಂವಿ(ಮಾ.05): ಕೆಟ್ಟ ಆರ್ಥಿಕ ನೀತಿಯಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಪದವೀಧರ ಕ್ಷೇತ್ರದದಿಂದ ಗೆದ್ದವರು ಮತದಾರರಿಗೆ ಕೃತಜ್ಞತೆಗಳನ್ನು ಹೇಳುವ ಗೋಜಿಗೆ ಹೊಗದೇ ಕ್ಷೇತ್ರವನ್ನು ಮರೆತು ಬಿಟ್ಟಿದ್ದಾರೆ ಎಂದು ಕಾಂಗ್ರೆಸ್‌ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಆರ್‌.ಎಂ. ಕುಬೇರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಬಂದಿದ್ದು ಈ ಬಾರಿ ಬದಲಾವಣೆಯ ಗಾಳಿ ನಮ್ಮ ಪರವಾಗಿ ಬೀಸಿದೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಪಕ್ಷದ ಮುಖಂಡರು-ಹಿರಿಯರು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ, ಈ ಭಾರಿ ಹಾವೇರಿ ಜಿಲ್ಲೆಯವರಿಗೆ ಅವಕಾಶ ನೀಡುವ ನಿರೀಕ್ಷೆಯನ್ನು ಮತದಾರರು ಹೊಂದಿದ್ದು ಹೆಚ್ಚಿನ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ಸಾವಿರ ರು.ಗಳಂತೆ ಸ್ಟೈಪಂಡ್‌ ನೀಡುವುದು, ಸರ್ಕಾರದಲ್ಲಿ ಖಾಲಿ ಇರುವ ಹುದ್ದೆ ತುಂಬುವುದು, ನಿರುದ್ಯೋಗಿ ಪದವೀಧರರಿಗಾಗಿ ಸಹಕಾರಿ ಸಂಘ ಸ್ಥಾಪಿಸಿ ಉದ್ಯೋಗಾವಕಾಶ ಕಲ್ಪಿಸುವುದು, ಉದ್ಯೋಗ ಮೇಳ ನಡೆಸುವುದು, ಅನುದಾನಿತ-ಅನುದಾನ ರಹಿತ ಸರ್ಕಾರಿ ಶಾಲಾ-ಕಾಲೇಜುಗಳ ವಿಶ್ವವಿದ್ಯಾನಿಲಯಗಳ ಬೋಧಕ ಬೋಧಕೇತರ ಸಿಬ್ಬಂದಿಗಳ ಸಮಸ್ಯೆ ಪರಿಹರಿಸುವುದು, ಅತಿಥಿ ಉಪನ್ಯಾಸಕರ ಕಾಯಮಾತಿ, ಶಾಶ್ವತ ಅನುದಾನರಹಿತ ಶಾಲಾ-ಕಾಲೇಜುಗಳನ್ನು ಅನುದಾನಕ್ಕೊಳಪಡಿಸಲು ಶ್ರಮಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ಶಿವಾನಂದ ಬಾಗೂರ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಸಿದ್ದಣ್ಣ ಮೊರಬದ, ಪ್ರದೀಪಕುಮಾರ ಗಿರಡ್ಡಿ, ಫಕೀರಪ್ಪ ಕುಂದೂರ, ಇರ್ಫಾನ್‌ ಪಠಾಣ ಇದ್ದರು.